ಗಂಗೊಳ್ಳಿ: ಯಾವುದೇ ಶಾಲೆ ಅಭಿವೃದ್ಧಿ ಹೊಂದಬೇಕಾದರೆ ದಾನಿಗಳ, ಶಾಲೆಯ ಪ್ರಾಕ್ತನ ವಿದ್ಯಾರ್ಥಿಗಳ ಹಾಗೂ ಪೋಷಕರ ಸಹಾಯ ಸಹಕಾರ ಅತ್ಯಗತ್ಯವಾಗಿದೆ. ಸರಕಾರಿ ಶಾಲೆಗಳಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣ ನೀಡಬೇಕೆಂಬ ಉದ್ದೇಶದಿಂದ ಕೇಂದ್ರ ಹಾಗೂ ರಾಜ್ಯ ಸರಕಾರ ಅನೇಕ ಯೋಜನೆಗಳನ್ನು ರೂಪಿಸಿ ಮಕ್ಕಳಿಗೆ ನೀಡುವ ಮೂಲಕ ಕೋಟ್ಯಾಂತರ ರೂ.ಗಳನ್ನು ಶಿಕ್ಷಣಕ್ಕಾಗಿ ವ್ಯಯಿಸುತ್ತಿದೆ ಎಂದು ಕುಂದಾಪುರ ವಲಯ ಕ್ಷೇತ್ರ ಶಿಕ್ಷಣಾಧಿಕಾರಿ ಗೋಪಾಲ ಶೆಟ್ಟಿ ಹೇಳಿದರು.
ಅವರು ಇಲ್ಲಿನ ಖಾರ್ವಿಕೇರಿಯ ಕೊಂಚಾಡಿ ರಾಧಾ ಶೆಣೈ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಾರ್ಷಿಕೋತ್ಸವ ಸಮಾರಂಭದಲ್ಲಿ ಅತಿಥಿಯಾಗಿ ಮಾತನಾಡಿದರು.
ದುಬೈ ಮೂಲಕ ಉದ್ಯಮಿಯೊಬ್ಬರು ಸರಕಾರಿ ಶಾಲೆಯನ್ನು ಅಭಿವೃದ್ಧಿಪಡಿಸಬೇಕೆಂಬ ಉದ್ದೇಶದಿಂದ ಶಾಲೆಗೆ ನೂತನ ಕಟ್ಟಡ, ಶಾಲಾ ಮಕ್ಕಳ ವಾಹನ ಸಹಿತ ಅನೇಕ ಸೌಲಭ್ಯಗಳನ್ನು ಒದಗಿಸುವ ಮೂಲಕ ಗಂಗೊಳ್ಳಿಯ ಕೊಂಚಾಡಿ ರಾಧಾ ಶೆಣೈ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯನ್ನು ಮಾದರಿ ಶಾಲೆಯನ್ನಾಗಿ ರೂಪಿಸಿರುವುದು ಪ್ರಶಂಸನೀಯ ಎಂದರು.
ಕುಂದಾಪುರ ತಾಪಂ ಅಧ್ಯಕ್ಷ ಭಾಸ್ಕರ ಬಿಲ್ಲವ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಶಾಲೆಯ ಹಳೇ ವಿದ್ಯಾರ್ಥಿ ಪತ್ರಕರ್ತ ಗಣೇಶ್ ಪಿ. ಗಂಗೊಳ್ಳಿ ಸ್ವಸ್ತಿವಾಚನಗೈದರು. ತಾಪಂ ಸದಸ್ಯೆ ಪೂರ್ಣಿಮಾ ಖಾರ್ವಿ, ಗಂಗೊಳ್ಳಿ ಗ್ರಾಪಂ ಅಧ್ಯಕ್ಷೆ ರೇಷ್ಮಾ ಆರ್.ಖಾರ್ವಿ, ಗಂಗೊಳ್ಳಿ ವಲಯ ನಾಡದೋಣಿ ಮೀನುಗಾರರ ಸಂಘದ ಅಧ್ಯಕ್ಷ ಮಂಜು ಬಿಲ್ಲವ, ಗಂಗೊಳ್ಳಿಯ ಉದ್ಯಮಿ ಎಚ್.ಗಣೇಶ ಕಾಮತ್, ಕುಂದಾಪುರದ ಉದ್ಯಮಿ ಸದಾನಂದ ಉಪ್ಪಿನಕುದ್ರು ಶುಭಾಶಂಸನೆಗೈದರು. ಸ್ಥಳದಾನಿ ಮೋಹನದಾಸ ಕಾನೋಜಿ, ಎಸ್ಡಿಎಂಸಿ ಅಧ್ಯಕ್ಷ ಜಿ.ನಾಗರಾಜ ಖಾರ್ವಿ, ಶಾಲೆಯ ಮುಖ್ಯೋಪಾಧ್ಯಾಯಿನಿ ಸುಜಾತಾ ಕೆ., ನಿವೃತ್ತ ಶಿಕ್ಷಕಿ ಹೇಮಲತಾ ಕೆ. ಮೊದಲಾದವರು ಉಪಸ್ಥಿತರಿದ್ದರು.
0 comments:
Post a Comment