ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಮನೆಗೆ ಸಂಸದರ ಭೇಟಿ

ಹಾಲಾಡಿ: ಕುಂದಾಪುರ ಕ್ಷೇತ್ರದ ಪಕ್ಷೇತರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರ ಮನೆಗೆ ಸಂಸದರಾದ ಬಿ.ಎಸ್‌. ಯಡಿಯೂರಪ್ಪ ಹಾಗೂ ಶೋಭಾ ಕರಂದ್ಲಾಜೆ ಭೇಟಿ ನೀಡಿ, ಶಾಸಕರು ಬಿಜೆಪಿಗೆ ಬರುವಂತೆ ಆಹ್ವಾನಿಸಿದ್ದಲ್ಲದೇ ಅವರೊಂದಿಗೆ ಚರ್ಚೆ ನಡೆಸಿದರು.
ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಿ.ಎಸ್‌. ಯಡಿಯೂರಪ್ಪ ಹಾಗೂ ಶಾಸಕರ ನಡುವಿನ ಗುಪ್ತ ಚರ್ಚೆಯ ಅನಂತರ ಮಾತನಾಡಿ, ಹಾಲಾಡಿ ಶ್ರೀನಿವಾಸ ಶೆಟ್ಟಿ ಬಿಜೆಪಿಗೆ ಬರಬೇಕು ಎಂಬ ಆಶಯದೊಂದಿಗೆ ಬಂದಿದ್ದೇವೆ. ಉಡುಪಿ ಜಿಲ್ಲೆಯಲ್ಲಿ ಹಾಲಾಡಿ ಹಾಗೂ ಕಿರಣಕುಮಾರ ಕೊಡ್ಗಿ ಅವರ ಸಹಕಾರ ಇಲ್ಲದೆ ಏನೂ ಮಾಡಲು ಸಾಧ್ಯವಿಲ್ಲ. ಹಿಂದೆ ಯಾವುದೋ ವಿಷಘಳಿಗೆಯಲ್ಲಿ ಏನೋ ನಡೆದುಹೋಗಿದೆ. ಈಗ ದೇಶದಲ್ಲಿ ಮೋದಿ ಹವಾ ಇದೆ. ಇತಂಹ ವಾತಾವರಣದಲ್ಲಿ ನಾವೆಲ್ಲರೂ ಒಂದಾಗಬೇಕು. ಭಾರತೀಯ ಜನತಾ ಪಕ್ಷ ಒಂದು ಕುಟುಂಬ ಇದ್ದ ಹಾಗೆ. ಈ ಕುಟುಂಬದಲ್ಲಿ ನಾವೆಲ್ಲರೂ ಒಂದಾಗಿ ಕೆಲಸ ಮಾಡೋಣ. ಮುಂದೆ ನಡೆಯುವ ದಿಲ್ಲಿ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷಕ್ಕೆ ಉತ್ತಮ ವಾತಾವರಣ ಇದ್ದು ಪಕ್ಷ ಗೆಲ್ಲಲಿದೆ ಎಂದರು.

ಶೋಭಾ ಕರಂದ್ಲಾಜೆ ಮಾತನಾಡಿ, ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರ‌ ವರ್ಚಸ್ಸು ಕೇವಲ ಕುಂದಾಪುರ ಕ್ಷೇತ್ರಕ್ಕೆ ಸೀಮಿತವಲ್ಲ. ರಾಜ್ಯದಲ್ಲೆಡೆ ಇದೆ. ಲೋಕಸಭಾ ಚುನಾವಣೆಯಲ್ಲಿ ತಾನು 30 ಸಾವಿರ ಮತಗಳ ಅಂತರದಲ್ಲಿ ಗೆಲುವು ಸಾಧಿಸಲು ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರ ಬಣ ಮುಖ್ಯ ಕಾರಣ. ಹಾಲಾಡಿ ಪಕ್ಷೇತರವಾಗಿ ಜಯ ಸಾಧಿಸಿದ್ದಾರೆ. ಪಕ್ಷೇತರವಾಗಿ ಉಳಿಯುವ ಬಗ್ಗೆ ಇಚ್ಚೆ ವ್ಯಕ್ತಪಡಿಸಿದ್ದಾರೆ. ಅವರ ಸ್ನೇಹಿತರಾದ ನೀವೆಲ್ಲ ಮತ್ತೆ ಪಕ್ಷಕ್ಕೆ ಕರೆತರಬೇಕು. ರಾಜ್ಯ ಸರಕಾರ ಸಂಪೂರ್ಣವಾಗಿ ನಿಷ್ಕ್ರಿಯವಾಗಿದೆ. ಯಾವ ಸಂದರ್ಭದಲ್ಲಿಯೂ ಚುನಾವಣೆ ಬರಬಹುದು. ಮುಂದೆ ಬರುವ ಸಹಕಾರಿ ಸಂಸ್ಥೆಗಳಿಂದ ಹಿಡಿದ ಎಲ್ಲ ಚುನಾವಣೆಯಲ್ಲಿಯೂ ನಾವೆಲ್ಲ ಒಂದಾಗಿ ಕೆಲಸ ಮಾಡಬೇಕಾಗಿದೆ ಎಂದರು.

ಈ ಸಂದರ್ಭ ಉಡುಪಿ ಜಿಲ್ಲಾ ಬಿಜೆಪಿ ಅಧ್ಯಕ್ಷ ತಿಂಗಳೆ ವಿಕ್ರಮಾರ್ಜುನ ಹೆಗ್ಡೆ, ಪಕ್ಷದ ಮುಖಂಡ ಕಿರಣ್‌ ಕುಮಾರ ಕೊಡ್ಗಿ, ಜಿ.ಪಂ. ಉಪಾಧ್ಯಕ್ಷ ಪ್ರಕಾಶ ಮೆಂಡನ್‌, ಜಿ.ಪಂ. ಸದಸ್ಯರಾದ ಗಣಪತಿ ಶ್ರೀಯಾನ್‌, ರಶ್ವತ್‌ಕುಮಾರ ಶೆಟ್ಟಿ, ಕುಂದಾಪುರ ತಾ.ಪಂ. ಅಧ್ಯಕ್ಷ ಭಾಸ್ಕರ್‌ ಬಿಲ್ಲವ, ಸದಸ್ಯರಾದ ದೀಪಿಕಾ ಎಸ್‌. ಶೆಟ್ಟಿ, ರಮೇಶ್‌ ಶೆಟ್ಟಿ ಹಾಲಾಡಿ, ರಾಘವೇಂದ್ರ ಗಾಣಿಗ ಬಾರೀಕೆರೆ, ಸಾಲಿಗ್ರಾಮ ಪ.ಪಂ. ಅಧ್ಯಕ್ಷ ರಾಜು ಪೂಜಾರಿ ಕಾರ್ಕಡ, ಕುಂದಾಪುರ ಎ.ಪಿ.ಎಂ.ಸಿ. ಅಧ್ಯಕ್ಷ ದೀನ್‌ಪಾಲ ಶೆಟ್ಟಿ, ಉಡುಪಿ ಜಿಲ್ಲಾ ಬಜರಂಗದಳದ ಸಹ ಸಂಚಾಲಕ ವಿಜಯ ಕುಮಾರ ಶೆಟ್ಟಿ ಗೋಳಿಯಂಗಡಿ, ಜಿ.ಪಂ. ಮಾಜಿ ಸದಸ್ಯ ಬಿ.ಕೆ. ಹೆಗ್ಡೆ, ಬೆಳ್ವೆ ಗ್ರಾ.ಪಂ. ಅಧ್ಯಕ್ಷ ಶಿವರಾಮ ಪೂಜಾರಿ, ಹಾಲಾಡಿ ಗ್ರಾ.ಪಂ. ಅಧ್ಯಕ್ಷ ಹಾಗೂ ಸ್ಥಳೀಯ ಮುಖಂಡ ಸರ್ವೋತ್ತಮ ಹೆಗ್ಡೆ ಹಾಲಾಡಿ ಮತ್ತು ವಿವಿಧ ಕಡೆಗಳಿಂದ ಆಗಮಿಸಿದ ಬಿಜೆಪಿಯ ಮುಖಂಡರು ಉಪಸ್ಥಿತರಿದ್ದರು.

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com