ಜೋಸೆಫ್‌ವಾಜ್ ಗೆ ಸಂತ ಪದವಿ: ಚರ್ಚ್ ನಲ್ಲಿ ದಿವ್ಯ ಬಲಿಪೂಜೆ

ಬೈಂದೂರು: ಕ್ರೈಸ್ತ ಧರ್ಮಗುರು ಮುಕ್ತಿಧರ ಜೋಸೆಫ್ ವಾಜ್ ಅವರಿಗೆ ಬುಧವಾರ ಶ್ರೀಲಂಕಾದಲ್ಲಿ ಕ್ರೈಸ್ತರ ಪರಮೋಚ್ಚ ಧರ್ಮ ಗುರು ಪೋಪ್ ಪ್ರಾನ್ಸಿಸ್ ಅವರು ಸಂತ ಪದವಿ ನೀಡಿ ಗೌರವಿಸಿದ ಸಂದರ್ಭದಲ್ಲೇ ಜೋಸೆಫ್‌ವಾಜ್ ಅವರು ಮೂರು ಶತಮಾನಗಳ ಹಿಂದೆ ಸೇವೆ ಸಲ್ಲಿಸಿದ್ದ ಕುಂದಾಪುರ ತಾಲೂಕಿನ ಕನ್ನಡ ಕುದ್ರುವಿನಲ್ಲಿರುವ ಮುಕ್ತಿಧರ ಜೋಸೇಫ್ ವಾಜ್ ಚಾಪೆಲ್‌ನಲ್ಲಿ ವಿಶೇಷ ಬಲಿಪೂಜೆ ನಡೆಯಿತು. 

1995ರ ಜ.21ರಂದು ಅಂದಿನ ಪೋಪ್ ಜಗದ್ಗುರು ಸಂತ ಎರಡನೇ ಜಾನ್ ಪಾವ್ಲ್ ಅವರು ಮುಕ್ತಿಧರ ಎಂಬ ಗೌರವವನ್ನು ಜೋಸೆಫ್ ವಾಜ್‌ಗೆ ನೀಡಿದ್ದರು. ಜೋಸೆಪ್‌ವಾಜ್ ಸೇವೆ ಸಲ್ಲಿಸಿದ ಉಡುಪಿ ಜಿಲ್ಲೆಯ ಅತಿ ಪುರಾತನ ಚರ್ಚ್ ಕನ್ನಡಕುದ್ರು ದ್ವೀಪದಲ್ಲಿದ್ದು ಜೋಸೆಪ್ ವಾಜ್ ಹೆಸರಿನಲ್ಲಿ 1997ರಲ್ಲಿ ಇಲ್ಲಿ ದೇವಾಲಯ ನಿರ್ಮಿಸಲಾಗಿದೆ. ಇಡೀ ಧರ್ಮಪ್ರಾಂತ್ಯದಲ್ಲಿ ಇರುವ ಏಕೈಕ ಕಿರು ದೇವಾಲಯ ಇದಾಗಿದೆ. 

ಜೋಸೇಫ್ ವಾಜ್ ಅವರು 1651ರ ಏಪ್ರಿಲ್ 21ರಂದು ಗೋವಾದ ಬೆನಾಲಿನ್ ನಗರದಲ್ಲಿ ಕ್ರಿಸ್ಟೋಫರ್ ಹಾಗೂ ಮರಿಯಾ ದಂಪತಿ 3ನೇ ಮಗನಾಗಿ ಜನಿಸಿದ್ದರು. 1676ರಲ್ಲಿ ಧರ್ಮಾಧ್ಯಕ್ಷ ಅಂಥೋನಿ ಬಂದಾವೋ ಅವರಿಂದ ಗುರುದೀಕ್ಷೆ ಪಡೆದರು. 1681ರಲ್ಲಿ ಕರ್ನಾಟಕ ಕರಾವಳಿಯ ಗಂಗೊಳ್ಳಿಗೆ ಬಂದ ಜೋಸೇಫ್ ವಾಜ್ ಮಿಷನರಿ ಕೆಲಸ ಆರಂಭಿಸಿದರು. ಈ ವೇಳೆ ಗಂಗೊಳ್ಳಿಯಲ್ಲಿ ದುಷ್ಕರ್ಮಿಗಳಿಂದ ನಾಶವಾದ ಚರ್ಚ್‌ನ್ನು ಪುನರ್ ನಿರ್ಮಿಸಿದರು. ಕುಂದಾಪುರದಲ್ಲಿ ಚರ್ಚ್ ನಿರ್ಮಿಸಿ ಜನರಿಗೆ ಪ್ರಾರ್ಥನೆಗೆ ಅವಕಾಶ ಮಾಡಿಕೊಟ್ಟರು. 

1684ರ ತನಕ ಗಂಗೊಳ್ಳಿ ಕುಂದಾಪುರ ಪ್ರದೇಶದಲ್ಲಿ ಸೇವೆ ನೀಡಿ ಮಂಗಳೂರಿಗೆ ತೆರಳಿದರು. ಬಳಿಕ ಶ್ರೀಲಂಕಾಕ್ಕೆ ತೆರಳಿ 24 ವರ್ಷ ಸೇವೆ ಸಲ್ಲಿಸಿದರು. 1690ರಲ್ಲಿ ಶ್ರೀಲಂಕಾದಲ್ಲಿ ಮಳೆ ಇಲ್ಲದೆ ಬರಗಾಲ ಬಂದು ಜನರು ಒದ್ದಾಡುತ್ತಿದ್ದಾಗ ಜೋಸೆಫ್ ವಾಜ್ ಪ್ರಾರ್ಥನೆ ಮೂಲಕ ಮಳೆ ಬರುವಂತೆ ಮಾಡಿದ್ದರು ಎಂಬ ನಂಬಿಕೆ ಇದೆ. 1711 ಜ.17ರಂದು ಜೋಸೆಫ್ ವಾಜ್ ಮರಣ ಹೊಂದಿದ್ದರು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com