ಕೋಡಿಯಲ್ಲಿ ನಾಗರಿಕರಿಂದ ಶಾಂತಿ ಸಭೆ

ಕುಂದಾಪುರ: ಭಾನುವಾರ ರಾತ್ರಿ ಕೋಡಿ, ಹಳೆಅಳಿವೆ ಪರಿಸರದಲ್ಲಿ ನಡೆದಿರುವ ಘಟನೆಯ ಬಗ್ಗೆ ಕೂಲಂಕಶ ತನಿಖೆ ನಡೆಸಲಾಗುತ್ತಿದೆ. ನಾಗರಿಕರು ತಾಳ್ಮೆ ಕಾಯ್ದುಕೊಳ್ಳಬೇಕು. ಊಹಾಪೋಹಗಳಿಗೆ ಕಿವಿಗೊಡಬಾರದು. ಅಮಾಯಕರ ವಿರುದ್ಧ ಯಾವುದೇ ಕ್ರಮ ತೆಗೆದುಕೊಳ್ಳುವುದಿಲ್ಲ. ತಪ್ಪಿತಸ್ಥರು ಯಾರೇ ಆಗಿರಲಿ ಅವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಕುಂದಾಪುರ ಪೊಲೀಸ್ ವತ್ತನಿರೀಕ್ಷಕ ದಿವಾಕರ್ ಹೇಳಿದರು. 

ಕೋಡಿ ಕಿನರಾ ವಠಾರದಲ್ಲಿ ಭಾನುವಾರ ರಾತ್ರಿ ನಡೆದ ಘಟನೆಗೆ ಸಂಬಂಧಿಸಿದಂತೆ ಆಯೋಜಿಸಲಾಗಿದ್ದ ನಾಗರಿಕರ ಸಭೆಯಲ್ಲಿ ಅವರು ಮಾತನಾಡಿದರು. 

ಕೋಡಿ ಪರಿಸರದಲ್ಲಿ ಶಾಂತಿ ಕಾಪಾಡುವಲ್ಲಿ ನಾಗರಿಕರ ಸಹಕಾರ ಅಗತ್ಯ. ಹೊರಠಾಣೆ ಬಲಿಷ್ಠಗೊಳಿಸುವುದರ ಜತೆಗೆ ಸೂಕ್ಷ್ಮ ಪ್ರದೇಶಗಳಲ್ಲಿ ಸಿಸಿ ಟಿವಿ ಕ್ಯಾಮೆರಾ ಅಳವಡಿಸಲಾಗುವುದು. ಕಾಯಂ ಚೆಕ್‌ಪೋಸ್ಟ್ ರಚಿಸಲಾಗುವುದು ಎಂದು ಅವರು ತಿಳಿಸಿದರು. ಭಾನುವಾರ ರಾತ್ರಿಯ ಘಟನೆಯ ಬಳಿಕ ಪೊಲೀಸರು ನಡೆದುಕೊಂಡ ಕ್ರಮದ ಬಗ್ಗೆ ಸ್ಥಳೀಯ ಮಹಿಳೆಯರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. 

ಪರಸ್ಪರ ಹಲ್ಲೆಯ ಬಳಿಕ ಸ್ಥಳಕ್ಕಾಗಮಿಸಿದ ಕೆಲವು ಪೊಲೀಸ್ ಅಧಿಕಾರಿಗಳು ಕೆಟ್ಟ ಶಬ್ದ ಬಳಕೆ ಮಾಡಿದ್ದಾರೆ. ಘಟನೆಗೆ ಕಾರಣ ತಿಳಿಯುವ ಮೊದಲೇ ಲಾಠಿ ತೋರಿಸಿ ಬೆದರಿಸಿದ್ದಾರೆ. ಇಲ್ಲಿ ಹಿಂದೂ-ಮುಸ್ಲಿಮರು ಸೌಹಾರ್ದತೆಯಿಂದಲೇ ಬದುಕುತ್ತಿದ್ದಾರೆ. ಎಲ್ಲಿಂದಲೋ ಬರುವ ಕಿಡಿಗೇಡಿಗಳು ಪದೇಪದೇ ಕೋಡಿ ಪರಿಸರದಲ್ಲಿ ತೊಂದರೆ ನೀಡುತ್ತಿದ್ದರೂ ಅದನ್ನು ನಿಯಂತ್ರಿಸುವಲ್ಲಿ ಇಲಾಖೆ ಈ ತನಕ ಯಾವುದೇ ಸ್ಪಷ್ಟ ಕ್ರಮ ತೆಗೆದುಕೊಂಡಿಲ್ಲ ಎಂದು ಆಕ್ರೋಶ ಹೊರಗೆಡಹಿದರು. ಏನೇ ಘಟನೆ ನಡೆಯಲಿ ಅಮಾಯಕರ ವಿರುದ್ಧ ಕೇಸು ದಾಖಲಿಸುವುದು ನಡೆಯುತ್ತಿದೆ. ಇದು ಪುನರಾವರ್ತನೆ ಆಗಬಾರದು ಎಂದು ಒತ್ತಾಯಿಸಿದರು. 

ನಾಗರಿಕರ ಅಹವಾಲು ಆಲಿಸಿದ ಪೊಲೀಸ್ ಅಧಿಕಾರಿಗಳು ಶಾಂತಿ ಸುವ್ಯವಸ್ಥೆ ಕಾಪಾಡುವ ವೇಳೆಯಲ್ಲಿ ಕೆಲವೊಂದು ಲೋಪದೋಷ ಆಗಬಹುದು. ಇಲಾಖೆ ಯಾರ ಪರವೂ ಅಲ್ಲ, ಯಾರ ವಿರುದ್ಧವೂ ಅಲ್ಲ. ಪ್ರದೇಶದಲ್ಲಿನ ಶಾಂತಿಯಷ್ಟೇ ಮುಖ್ಯ ಎಂದರು. ತಾ.ಪಂ.ಸದಸ್ಯ ಮಂಜು ಬಿಲ್ಲವ, ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ನಾಗರಾಜ ಬಿಲ್ಲವ, ಜಾನಕಿ ಬಿಲ್ಲವ, ಮಾರ್ಕೋಡು ಸುಧೀರ ಶೆಟ್ಟಿ, ಮಹೇಶ್ ಶೆಣೈ, ದಿನೇಶ್, ಅಶೋಕ ಕಾಗೇರಿ, ಶಂಕರನಾರಾಯಣ ಪಿಎಸ್‌ಐ ದೇಜಪ್ಪ ಉಪಸ್ಥಿತರಿದ್ದರು. 
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com