ದೇಗುಲಗಳು ಸರಕಾರದ ಹಿಡಿತದಲ್ಲಿರಬಾರದು: ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ

ಕೋಟ: ದೇಗುಲಗಳು ಸರಕರದ ಕೈಯಲ್ಲಿರದೆ, ಹಿಂದೂ ಸಮಾಜದ ಕೈಯಲ್ಲಿರಬೇಕು. ಒಂದು ದೇಗುಲ ಜೀರ್ಣೋದ್ಧಾರಗೊಂಡರೆ ಹಿಂದೂ ಸಮಾಜ ಜೀರ್ಣೋದ್ಧಾರವಾದಂತಾಗುತ್ತದೆ ಎಂದು ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಹೇಳಿದರು. ಶುಕ್ರವಾರ ಸಂಜೆ ಕೋಟ ಅಮತೇಶ್ವರೀ ದೇವಾಲಯದ ಬ್ರಹ್ಮಕಲಶಾಭಿಷೇಕದ ಧಾರ್ಮಿಕ ಸಭೆಯನ್ನು ಉದ್ಘಾಟಿಸಿ ಆಶೀರ್ವಚನ ನೀಡಿದರು. ಇಲ್ಲಿ ಸರಕಾರದ ನೆರವನ್ನು ಹೆಚ್ಚಾಗಿ ಬಳಸದೆ ಭಕ್ತರ ಭಕ್ತಿಯ ಹಣದಿಂದ ದೇವಾಲಯ ಕಟ್ಟಲಾಗಿದೆ. ಇದು ನಿಜವಾದ ಭಕ್ತಿ ಎಂದು ಶ್ರೀಗಳು ನುಡಿದರು. 

ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಧಾರ್ಮಿಕ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಮುಗ್ಧ ಜನರು ಭಕ್ತಿಯಿಂದ ಭವಸಾಗರ ದಾಟುತ್ತಾರೆ. ಭಕ್ತಿಯೆಂದರೆ ಹೃದಯದ ಸ್ಮರಣೆಯಾಗಿರಬೇಕು. ಕಾಟಾಚಾರದ ಭಕ್ತಿಯಿಂದ ದೇವರನ್ನು ಒಲಿಸಿಕೊಳ್ಳಲು ಸಾಧ್ಯವಿಲ್ಲ. ನಮ್ಮ ವ್ಯಕ್ತಿತ್ವಕ್ಕೆ ನಂಬಿಕೆ, ಭಕ್ತಿ, ಆಚಾರ, ವಿಚಾರ ಮುಖ್ಯ. ನೋಡುವ ಕಣ್ಣು ಮೆರುಗಬಹುದು. ಆದರೆ ಅದರ ಒಳಗೆ ಕೊರೆಯುತ್ತಿರುತ್ತದೆ. ಇದನ್ನು ಅರಿತು ಕೆಲಸ ಮಾಡಿದರೆ ಬಾಳು ಬಂಗಾರವಾಗಬಹುದು ಎಂದರು. 

ದೇವಾಲಯದ ಜೀಣೋದ್ಧಾರ ಸಮಿತಿಯ ಗೌರವಾಧ್ಯಕ್ಷ ನಾಡೋಜ ಡಾ.ಜಿ.ಶಂಕರ್, ಮಾಜಿ ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ದಕ್ಷಿಣ ಕನ್ನಡ ಕೂಟ ಬ್ರಾಹ್ಮಣ ಮಿತ್ರ ಮಂಡಳಿಯ ಗೌರವ ಕಾರ್ಯದರ್ಶಿ ಜಿ.ಶ್ರೀಧರ ಮಯ್ಯ ಶುಭ ಹಾರೈಸಿದರು. 

ವೇದಮೂರ್ತಿ ಎಂ.ಮಧುಸೂಧನ ಬಾಯರಿ, ಉದ್ಯಮಿ ಆನಂದ ಸಿ.ಕುಂದರ್ ಅವರ ಧರ್ಮಪತ್ನಿ ಗೀತಾ ಕುಂದರ್, ಅಮತೇಶ್ವರೀ ದೇವಳದ ವ್ಯವಸ್ಥಾಪನಾ ಸಮಿತಿಯ ಸದಸ್ಯರಾದ ಸುಬ್ರಾಯ ಜೋಗಿ, ಎಂ. ಸಂಜೀವ, ಸುಶೀಲಾ ಸೋಮಶೇಖರ, ಜ್ಯೋತಿ ಭರತ್ ಕುಮಾರ್ ಶೆಟ್ಟಿ, ಜಿ.ರಾಜೀವ ದೇವಾಡಿಗ, ಕೆ.ರಾಜು ಪೂಜಾರಿ, ಎಚ್.ರಾಮದೇವ ಐತಾಳ್, ಎಂ.ಸುಬ್ರಾಯ ಆಚಾರ್ಯ, ಕಾರ್ಯನಿರ್ವಹಣಾಧಿಕಾರಿ ಟಿ.ಜಿ ಸುಧಾಕರ, ಜೀರ್ಣೋದ್ಧಾರ ಸಮಿತಿಯ ಸದಸ್ಯರಾದ ಜಡ್ಡಾಡಿ ವಿಜಯ ಕುಮಾರ್ ಶೆಟ್ಟಿ, ಜಿ.ಭರತ್ ಕುಮಾರ್ ಶೆಟ್ಟಿ, ಎಂ.ಶಿವ ಪೂಜಾರಿ, ಕೆ.ನರಸಿಂಹ ಪ್ರಭು, ಜಿ.ತಿಮ್ಮ ಪೂಜಾರಿ, ಕೆ.ಚಂದ್ರಶೇಖರ ಆಚಾರ್, ಪ್ರಭಾಕರ ಜೋಗಿ, ಶೇವಧಿ ಸುರೇಶ್ ಗಾಣಿಗ, ಭುಜಂಗ ಗುರಿಕಾರ ಉಪಸ್ಥಿತರಿದ್ದರು. 

ದೇವಳದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಆನಂದ ಸಿ.ಕುಂದರ್ ಸ್ವಾಗತಿಸಿದರು. ಮುಖ್ಯ ಶಿಕ್ಷಕರಾದ ಗಣೇಶ್ ಚೆಲ್ಲಿಮಕ್ಕಿ, ರಾಜಾರಾಂ ಐತಾಳ್ ದಾನಿಗಳ ಪಟ್ಟಿ ವಾಚಿಸಿದರು. ಶಿಕ್ಷಕ ನರೇಂದ್ರ ಕುಮಾರ್ ಕೋಟ ಕಾರ್ಯಕ್ರಮ ನಿರೂಪಿಸಿದರು. ರಾಜೀವ ದೇವಾಡಿಗ ವಂದಿಸಿದರು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com