ಜೋಸೆಫ್ ವಾಜ್‌ಗೆ ಸಂತ ಪದವಿ: ಕುಂದಾಪುರದಲ್ಲಿ ಸಂಭ್ರಮಾಚರಣೆ

ಕುಂದಾಪುರ: ಕಳೆದ ಬುಧವಾರ ಶ್ರೀಲಂಕಾದ ಕೊಲೊಂಬೊದಲ್ಲಿ ಜೋಸೆಫ್ ವಾಜ್ ಅವರಿಗೆ ಸಂತ ಪದವಿ ಪ್ರದಾನ ಮಾಡಿದ ಆ ಘಳಿಗೆಯ ನೋಟ ಕುಂದಾಪುರ ಹೋಲಿ ರೋಜರಿ ಇಗರ್ಜಿಯ ಪವಿತ್ರ ಸ್ಥಳದಲ್ಲಿ ಕಾಣುವಂತಾಗಿದೆ. ಸಹಸ್ರಾರು ಭಕ್ತರು ಇಲ್ಲಿ ನೆರೆದಿರುವುದೇ ಇದಕ್ಕೆ ಸಾಕ್ಷಿ ಎಂದು ಮಂಗಳೂರು ಬೊಂದೆಲ್ ಚರ್ಚಿನ ರೆ.ಫಾ. ಅಂಡ್ರ್ಯೂ ಡಿಸೋಜ ಭಾವಪರವಶರಾಗಿ ನುಡಿದರು. 

ಮುಕ್ತಿಧರ ಜೋಸೆಫ್ ವಾಜರಿಗೆ ಸಂತ ಪದವಿ ಪ್ರದಾನಗೈದ ಅಂಗವಾಗಿ  ಕುಂದಾಪುರ ಹೋಲಿ ರೋಜರಿ ಇಗರ್ಜಿ ವಠಾರದಲ್ಲಿ ಜರುಗಿದ ಸಂತ ಘೋಷಣಾ ಸಂಭ್ರಮದಲ್ಲಿ ದೇವರ ವಾಕ್ಯದ ಪ್ರಬೋಧನೆ ವೇಳೆ ಅವರು ವಾಜರ ಬದುಕಿನ ಹಾದಿ ತೆರೆದಿಟ್ಟರು. 

300 ವರ್ಷಗಳ ಹಿಂದೆ ಜೋಸೆಫ್ ವಾಜರು ಕುಂದಾಪುರ ಹೋಲಿ ರೋಜರಿ ಇಗರ್ಜಿಯಲ್ಲಿ ಸೇವೆ ಸಲ್ಲಿಸುತ್ತಿರುವಾಗ ಧ್ಯಾನಸ್ಥ ಸ್ಥಿತಿಯಲ್ಲಿ ಗಾಳಿಯಲ್ಲಿ ತೇಲುತ್ತಿದ್ದ ಅವರನ್ನು ಕಂಡು ಸಹವರ್ತಿ ಧರ್ಮಗುರುಗಳು ಮೂಕವಿಸ್ಮಿತರಾಗಿದ್ದರು. ಗೋವಾದಿಂದ ಶ್ರೀಲಂಕಾದವರೆಗಿನ ಅವರ ಪಯಣ ಅಧ್ಯಾತ್ಮದ ದಿವ್ಯ ಪ್ರಖರತೆಯಾಗಿದೆ. ಪ್ರಾರ್ಥನೆಗಿಂತ ದೊಡ್ಡ ಶಕ್ತಿ ಬೇರೊಂದಿಲ್ಲ ಎಂದು ಸಾರಿದರು. ಅಲ್ಲದೆ ಅದನ್ನು ಸಾಬೀತುಪಡಿಸಿ ತೋರಿಸಿದರು. ಬಿಷಪ್ ಕಿರೀಟ ತೊರೆದು ಭಕ್ತರ ಕಣ್ಣೀರು ಒರೆಸಲು ಜೀವನ ತ್ಯಾಗಗೈದ ವಾಜರಿಗೆ ನೀಡಿರುವ ಸಂತ ಪದವಿ ಕೇವಲ ಗೋವಾ, ಕರ್ನಾಟಕ ಅಷ್ಟೇ ಅಲ್ಲ ವಿಶ್ವದ ಕ್ರೈಸ್ತ ಧರ್ಮಸಭೆಗೆ ಸಂದ ಬಹುದೊಡ್ಡ ಗೌರವ ಎಂದು ಬಣ್ಣಿಸಿದರು. 

ದೇವರ ಸೇವೆಯಲ್ಲಿ ಕಷ್ಟಸಂಕಷ್ಟ ಎದುರಿಸಿದರು. ಎಲ್ಲವನ್ನು ದೇವರ ಚಿತ್ತವೆಂಬಂತೆ ಅವರು ಸ್ವೀಕರಿಸಿದರು. ಇದು ಎಲ್ಲರಿಗೂ ಪಾಠ. ಬಾಲ್ಯದಿಂದಲೂ ಅಧ್ಯಾತ್ಮದತ್ತ ತುಡಿತ ಹೊಂದಿದ್ದ ವಾಜರ ಜೀವನಾದರ್ಶ ಸರ್ವರಿಗೂ ಆದರ್ಶಪ್ರಾಯವಾಗಿದೆ. ಮುಡಿಪು ಚರ್ಚ್‌ನಲ್ಲಿ ಅವರ ಪ್ರಾರ್ಥನಾ ಶಕ್ತಿಯಿಂದ ಉದ್ಭವಿಸಿದ ನೀರಿನ ಬುಗ್ಗೆಗಳು ಎಂದಿಗೂ ಬತ್ತಲಾರವು ಅನ್ನುವುದಕ್ಕೆ ನಾನು ಖುದ್ದು ಸಾಕ್ಷಿಯಾಗಿದ್ದೇನೆ. 7 ವರ್ಷಗಳ ಕಾಲ ಅಲ್ಲಿ ಸೇವೆ ಮಾಡಿದಾಗ ಇದನ್ನು ಕಣ್ಣಾರೆ ಕಂಡೆ. ಅಕ್ಕಪಕ್ಕದ ಬಾವಿಗಳು ನೀರಿಲ್ಲದೆ ಬತ್ತಿಹೋಗಿದ್ದರೆ ನೀರಿನ ಬುಗ್ಗೆಗಳು ಮಾತ್ರ ಸದಾ ತುಂಬಿರುತ್ತಿದ್ದವು ಎಂದು ಅವರು ಹೇಳಿದರು. 

ಉಡುಪಿ ಕ್ರೈಸ್ತ ಧರ್ಮಪ್ರಾಂತ್ಯದ ಬಿಷಪ್ ಡಾ.ಜೆರಾಲ್ಡ್ ಐಸಾಕ್ ಲೋಬೊ ದಿವ್ಯಬಲಿಪೂಜೆ ನೆರವೇರಿಸಿದರು. ಧರ್ಮಗುರುಗಳಾದ ಬ್ಯಾಪ್ಟಿಸ್ಟ್ ಮಿನೆಜಸ್ ಉಡುಪಿ, ಅನಿಲ್ ಡಿಸೋಜ ಕುಂದಾಪುರ, ಪ್ರವೀಣ್ ಅಮತ ಮಾರ್ಟಿಸ್ ಕುಂದಾಪುರ, ಪಾವ್ಲ್ ಪ್ರಕಾಶ್ ಡಿಸೋಜ ಕುಂದಾಪುರ, ಅಲ್ಪೋನ್ಸ್ ಡಿಲೀಮಾ ಗಂಗೊಳ್ಳಿ, ಸುನಿಲ್ ವೇಗಸ್ ತಲ್ಲೂರು, ವಿಶಾಲ್ ಲೋಬೊ ಬಸ್ರೂರು, ಜೋಸೆಫ್ ಮಚಾದೊ ಪಡುಕೋಣೆ, ಜಾನ್ ವಾಲ್ಟರ್ ಮೆಂಡೋನ್ಸಾ ಹಂಗಳೂರು, ಅನಿಲ್ ಕರ್ನೆಲಿಯೊ ತ್ರಾಸಿ, ರಾಯನ್ ಪಾಯಸ್ ಕೋಟೇಶ್ವರ, ವಿನ್ಸೆಂಟ್ ಡಿಸೋಜ ಕೋಟೇಶ್ವರ, ರೋನಾಲ್ಡ್ ಮಿರಾಂದ ಬೈಂದೂರು, ವಲೇರಿಯನ್ ಸಾಸ್ತಾನ, ಕ್ಸೇವಿಯರ್ ಪಿಂಟೊ ಕೆರೆಕಟ್ಟೆ, ಫಾದರ್ ಆನಂದ್ ತ್ರಾಸಿ, ಫಾದರ್ ಪ್ರತಾಪ್ ನಾಯ್ಕ್ ಗೋವಾ, ಫಾದರ್ ಡೆನ್ನಿಸ್ ಬೆಳ್ವೆ, ಇಗರ್ಜಿ ಆಡಳಿತ ಮಂಡಳಿ ಉಪಾಧ್ಯಕ್ಷ ವಿಲ್ಪ್ರೆಡ್ ಡಿಸೋಜ, ಜಾನ್ಸನ್ ಆಲ್ಮೇಡಾ, ವಿನೋದ್ ಗಂಗೊಳ್ಳಿ, ರಾಜೇಶ್ ಮೆಂಡೋನ್ಸಾ ಉಪಸ್ಥಿತರಿದ್ದರು. ದಿವ್ಯಬಲಿಪೂಜೆ, ವಿಶೇಷ ಪೂಜೆ ಪುನಸ್ಕಾರ, ವಿಶೇಷ ಪ್ರಾರ್ಥನೆ ಜರುಗಿದವು. ಜೋಸೆಫ್ ವಾಜರ ಪ್ರಾರ್ಥನಾ ಶಕ್ತಿಯ ಪ್ರತೀಕವಾಗಿ ಶ್ರೀಲಂಕಾದಲ್ಲಿ ಬರಗಾಲ ನೀಗಿಸಿದ ಸನ್ನಿವೇಶವನ್ನು ಪ್ರಹಸನದ ಮೂಲಕ ಪ್ರಸ್ತುತಪಡಿಸಲಾಯಿತು. ಡಾ.ಜೆರಾಲ್ಡ್ ಐಸಾಕ್ ಲೋಬೊ ಸಂತ ಘೋಷಣಾ ಸಂಭ್ರಮದ ದಿವ್ಯಬಲಿಪೂಜೆ ನೆರವೇರಿಸಿದರು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com