ಕೈರಳಿ ಸುಹ್ರದ್ವೇದಿ ಪ್ರಶಸ್ತಿ ಪ್ರದಾನ ಸಮಾರಂಭ

ಕುಂದಾಪುರ: ಕೈರಳಿ ಸುಹ್ರದ್ವೇದಿ ಸಂಸ್ಥೆ ಕೇರಳ ಕಲಾವಿದರನ್ನು ಪರಿಚಯ ಮಾಡುವುದರ ಜತೆಯಲ್ಲಿ ಕೇರಳ ರಾಜ್ಯದ ಅನೇಕ ಗಣ್ಯ ಸಾಧಕರನ್ನು ಗುರುತಿಸಿ ಗೌರವಿಸುವ ಮೂಲಕ ಕೇರಳ ಮತ್ತು ಕರ್ನಾಟಕದ ನಡುವಿನ ಬಾಂಧವ್ಯಕ್ಕೆ ಸಾಕ್ಷಿಯಾಗಿದೆ. ದೂರದ ಕೇರಳದಿಂದ ಆಗಮಿಸಿ ಕುಂದಾಪುರದಲ್ಲಿ ಮಣ್ಣಿನಲ್ಲಿ ನೆಲೆನಿಂತು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ. ಕೋಟ ಶಿವರಾಮ ಕಾರಂತರ ಹೆಸರಿನಲ್ಲಿ ಪ್ರತಿ ವರ್ಷ ಸಾಧಕರಿಗೆ ಪ್ರಶಸ್ತಿ ನೀಡುವ ಮೂಲಕ ಕನ್ನಡದ ಗೌರವ ಹೆಚ್ಚಿಸಿದ್ದಾರೆ ಎಂದು ಕುಂದಾಪುರ ಚಿನ್ಮಯಿ ಆಸ್ಪತ್ರೆಯ ಆಡಳಿತ ನಿರ್ದೇಶಕ ಡಾ.ಉಮೇಶ್ ಪುತ್ರನ್ ಹೇಳಿದರು. ಭಾನುವಾರ ಸಂಜೆ ಇಲ್ಲಿನ ಬೋರ್ಡ್ ಹೈಸ್ಕೂಲು ಮೈದಾನದಲ್ಲಿ ಕೈರಳಿ ಸುಹ್ರದ್ವೇದಿ ಸಂಘಟನೆ ಹಮ್ಮಿಕೊಂಡ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. 

ಕೇರಳ ರಾಜ್ಯದಲ್ಲಿ ಅಲ್ಪಸಂಖ್ಯಾತರು ಅತಿ ಹೆಚ್ಚಿನ ಸಂಖ್ಯೆಯಲ್ಲಿದ್ದರೂ ಕೋಮುವಿದ್ವೇಷ ಕಡಿಮೆ. ಸಾಮರಸ್ಯ ಮತ್ತು ಪ್ರೀತಿಯಿಂದ ನೆಲೆಕಂಡ ರಾಜ್ಯ. ಅಲ್ಲಿನ ನಿವಾಸಿಗಳು ಇಲ್ಲಿಯೂ ಕೂಡ ಅದೇ ಮಾದರಿಯಲ್ಲಿ ಬದುಕುತ್ತಿದ್ದಾರೆ ಎಂದು ಅವರು ಹೇಳಿದರು. 

ಕೈರಳಿ ಸುಹ್ರದ್ವೇದಿ ಸಂಘಟನೆ ಅಧ್ಯಕ್ಷ ಕೆ.ಪಿ.ಶ್ರೀಶನ್ ಅಧ್ಯಕ್ಷತೆ ವಹಿಸಿದ್ದರು. ಇದೇ ಸಂದರ್ಭದಲ್ಲಿ ಅಂತರಾಷ್ಟ್ರೀಯ ಖ್ಯಾತಿಯ ಬಹುಭಾಷಾ ಗಾಯಕ ಕೆ.ಪಿ.ಜಯನ್ ಅವರಿಗೆ ಡಾ.ಕೋಟ ಶಿವರಾಮ ಕಾರಂತ ಪ್ರಶಸ್ತಿ ಪ್ರದಾನ ಮಾಡಲಾಯಿತು. ತಮಿಳು, ತೆಲಗು ಚಲನಚಿತ್ರದ ಯುವ ಹಿನ್ನೆಲೆ ಗಾಯಕಿ ತುಲಸಿ ಜಯನ್ ಅವರಿಗೆ ಕೈರಳಿ ಸುಹ್ರದ್ವೇದಿ ಸಂಸ್ಥೆ ವತಿಯಿಂದ ಅಭಿನಂದಿಸಿ ಗೌರವಿಸಲಾಯಿತು. 

ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕಷ್ಣಪ್ರಸಾದ್ ಅಡ್ಯಂತಾಯ ಅಭಿನಂದನಾ ನುಡಿಗಳನ್ನಾಡಿದರು. ರೋಟರಿ ಸಹಾಯಕ ಗವರ್ನರ್ ಗಣೇಶ್ ಶೆಟ್ಟಿ ಮೊಳಹಳ್ಳಿ, ಕುಂದಾಪುರ ರೋಟರಿ ಕ್ಲಬ್ ಅಧ್ಯಕ್ಷ ಮನೋಜ್ ನಾಯರ್, ಪುರಸಭೆ ಅಧ್ಯಕ್ಷೆ ಕಲಾವತಿ ಉಪಸ್ಥಿತರಿದ್ದರು. ಕುಂದಪ್ರಭ ಸಂಪಾದಕ ಯು.ಎಸ್.ಶೆಣೈ ಸ್ವಾಗತಿಸಿದರು. ಡಾ.ಪಾರ್ವತಿ ಜಿ.ಐತಾಳ್ ಅತಿಥಿಗಳನ್ನು ಪರಿಚಯಿಸಿದರು. ಕೋಣಿ ಶಿವಾನಂದ ಕಾರಂತ ಸನ್ಮಾನ ಪತ್ರ ವಾಚಿಸಿದರು. ಪ್ರಿಯಾ ರೆಬೆಲ್ಲೊ ಕಾರ್ಯಕ್ರಮ ನಿರ್ವಹಿಸಿದರು. ಕೆ.ಕೆ.ರಾಮನ್ ವಂದಿಸಿದರು. ನಂತರ ಸಂಗೀತ ರಸಮಂಜರಿ ನಡೆಯಿತು. 
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com