ಪೊಲೀಸರದ್ದು ಖಾಕಿ ಧರ್ಮ: ಡಿವೈಎಸ್ಪಿ ಮಂಜುನಾಥ ಶೆಟ್ಟಿ

ಕುಂದಾಪುರ: ಪೊಲೀಸರ ಮುಂದೆ ಧರ್ಮ, ಜಾತಿಯ ಪ್ರಶ್ನೆ ಇಡಬೇಡಿ. ನಮ್ಮದು ಏನಿದ್ದರೂ ಖಾಕಿ ಧರ್ಮ ಮಾತ್ರ. ಎಲ್ಲರನ್ನು ಸಮಾನ ದಷ್ಟಿಯಿಂದ ನೋಡಿಕೊಂಡು ಕೆಲಸ ಮಾಡುತ್ತಿದ್ದೇವೆ ಎಂದು ಕುಂದಾಪುರ ಡಿವೈಎಸ್ಪಿ ಮಂಜುನಾಥ ಶೆಟ್ಟಿ ಹೇಳಿದ್ದು, ನಾಗರಿಕರು ಊಹಾಪೋಹಗಳಿಗೆ ಕಿವಿಗೊಡಬಾರದು ಎಂದು ಮನವಿ ಮಾಡಿದ್ದಾರೆ. 

    ಇಲ್ಲಿನ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಭಾನುವಾರ ನಡೆದ ಕೋಡಿ ಘಟನೆಯ ಹಿನ್ನೆಲೆಯಲ್ಲಿ ಆಯೋಜಿಸಲಾಗಿದ್ದ ಕೋಡಿ ನಾಗರಿಕರ ಸಭೆಯಲ್ಲಿ ಅವರು ಮಾತನಾಡಿದರು. ಕೋಡಿಯಲ್ಲಿ ಶಾಂತಿ ಸುವ್ಯವಸ್ಥೆ ನೆಲೆಗೊಳ್ಳಲು ಎಲ್ಲಾ ಕೋಮಿನ ಪ್ರಜ್ಞಾವಂತರು ಮುಂದೆ ಬರಬೇಕು ಎಂದು ತಿಳಿಸಿದರು. 


ಪಿಎಸ್‌ಐ ನಾಸೀರ್ ಹುಸೇನ್ ಮಾತನಾಡಿ ಭಾನುವಾರದ ಘಟನೆ ಅನಿರೀಕ್ಷಿತ. ಗುಂಪುಘರ್ಷಣೆ ತಡೆಯಲು ಮುಂದಾದ ವೇಳೆ ಪೊಲೀಸರ ಮೇಲೆ ಅಚಾನಕ್ ದಾಳಿ ನಡೆದಿದೆ. ಈ ದಾಳಿಯ ಹಿಂದೆ ಕೋಡಿಯ ನಾಗರಿಕರು ಇದ್ದಾರೆ ಎಂದು ಅನ್ನಿಸುವುದಿಲ್ಲ. ಪೊಲೀಸರು ನಾಗರಿಕರ ಮೇಲೆ ಬಲಪ್ರಯೋಗ ನಡೆಸಿಲ್ಲ. ಘಟನೆಯಲ್ಲಿ ಮೂವರು ಸಿಬ್ಬಂದಿಗಳು ಗಾಯಗೊಂಡಿದ್ದಾರೆ ಎಂದು ಘಟನೆಯ ವಿವರ ನೀಡಿದರು. 


ತಾ.ಪಂ.ಮಾಜಿ ಸದಸ್ಯೆ ಜಾನಕಿ ಬಿಲ್ಲವ ಮಾತನಾಡಿ ಕೋಡಿ ಪ್ರದೇಶದಲ್ಲಿ ಒಂದಿಷ್ಟು ಕಿಡಿಗೇಡಿಗಳು ನಡೆಸುತ್ತಿರುವ ಕತ್ಯದ ಬಗ್ಗೆ ಹಿಂದೆಯೂ ಇಲಾಖೆಗೆ ತಿಳಿಸಿದ್ದೇವೆ. ಅಂತವರಿಂದ ಇಡಿ ಊರಿನ ನೆಮ್ಮದಿ ಕದಡುತ್ತಿದೆ. ಅಂತವರ ವಿರುದ್ಧ ಇಲಾಖೆ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು. ಜಿ.ಪಂ.ಸದಸ್ಯ ಗಣಪತಿ ಟಿ.ಶ್ರೇಯಾನ್ ಮಾತನಾಡಿ ಇಲ್ಲಿನ ಪೊಲೀಸರು ನಾಗರಿಕರಿಗೆ ಗೌರವ ಕೊಡುವುದನ್ನು ಮೊದಲು ಕಲಿಯಬೇಕು. ಜನಸಾಮಾನ್ಯರ ವಿರುದ್ಧ ಏಕವಚನ ಪ್ರಯೋಗಿಸುವುದು, ಅವಾಚ್ಯಶಬ್ದಗಳ ಬಳಕೆ ಮಾಡಿ ಗದರಿಸುವುದು ನಿಲ್ಲಿಸಬೇಕು. ತಪ್ಪು ಎಸಗಿದ್ದಲ್ಲಿ ಕಾನೂನಿನಂತೆ ಕ್ರಮ ಜರುಗಿಸಬೇಕು ಎಂದರು. 


ಕೋಡಿಯ ಹಿರಿಯ ನಾಗರಿಕ ನಾಗರಾಜ ಬಿಲ್ಲವ ಮಾತನಾಡಿ ಇಂತಹ ಘಟನೆ ಮುಂದೆ ಮರುಕಳಿಸಬಾರದು. ಕೆಲವೊಂದು ಸ್ಥಾಪಿತ ಹಿತಾಸಕ್ತಿಗಳು ಸುಖಾಸುಮ್ಮನೆ ಕೋಡಿ ಪರಿಸರದಲ್ಲಿ ರಗಳೆ ಸಷ್ಟಿಸುತ್ತಿವೆ. ಕೋಡಿಯಲ್ಲಿ ಹಿಂದೂ-ಞ;ಮುಸ್ಲಿಂ ಬಾಂಧವರು ನೂರಾರು ವರ್ಷಗಳಿಂದ ಸಹಬಾಳ್ವೆಯಿಂದ ಬದುಕುತ್ತಿದ್ದಾರೆ. ಇದನ್ನು ಹಾಳುಗೆಡಹುವ ಪ್ರಯತ್ನಕ್ಕೆ ಅವಕಾಶ ಮಾಡಿಕೊಡಬಾರದು ಎಂದರು. 


ಕುಂದಾಪುರ ತಾ.ಪಂ.ಅಧ್ಯಕ್ಷ ಭಾಸ್ಕರ ಬಿಲ್ಲವ, ತಾ.ಪಂ.ಸದಸ್ಯ ಮಂಜು ಬಿಲ್ಲವ, ಕೋಡಿ ಅಬ್ದುಲ್ಲಾ, ಮಾರ್ಕೋಡು ಸುಧೀರಕುಮಾರ ಶೆಟ್ಟಿ, ಕೋಟೇಶ್ವರ ಗ್ರಾ.ಪಂ.ಅಧ್ಯಕ್ಷ ರಾಜಶೇಖರ ಶೆಟ್ಟಿ, ಬಿಜೆಪಿ ಯುವ ಮೋರ್ಚಾ ಕಾರ್ಯದರ್ಶಿ ಮಹೇಶ್ ಪೂಜಾರಿ, ಪ್ರಕಾಶ್ ಪೂಜಾರಿ ಬೀಜಾಡಿ, ಕುಂದಾಪುರ ಸರ್ಕಲ್ ಇನ್ಸ್‌ಪೆಕ್ಟರ್ ದಿವಾಕರ್ ಉಪಸ್ಥಿತರಿದ್ದರು. 

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com