ಮರವಂತೆ ಕಡಲತೀರಕ್ಕೆ ಪುಣೆಯ ಅಧಿಕಾರಿ ಭೇಟಿ

ಮರವಂತೆ: ಮರವಂತೆಯಲ್ಲಿ ರೂ. 54. 7 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಮೀನುಗಾರಿಕಾ ಹೊರಬಂದರು ಕಾಮಗಾರಿ ಪ್ರದೇಶಕ್ಕೆ ಪುಣೆಯ ಕೇಂದ್ರೀಯ ಜಲಶಕ್ತಿ ಸಂಶೋಧನಾ ಕೇಂದ್ರದ ಜಂಟಿ ನಿರ್ದೇಶಕ ಎಂ. ಡಿ. ಕುಡಾಲೆ, ಸುರಕ್ಷತಾ ಸಂಶೋಧನಾಧಿಕಾರಿ ಮಹಾಲಿಂಗಯ್ಯ ಭೇಟಿ ನೀಡಿದರು. 

ಬಂದರಿನ ದಕ್ಷಿಣ ತಡೆಗೋಡೆಯ ಬದಿಗೆ ಟೆಟ್ರಾಪಾಡ್‌ಗಳನ್ನು ಅಳವಡಿಸುತ್ತಿರುವುದನ್ನು ಅವರು ಪರಿಶೀಲಿಸಿ ಮುಂದೆ ಅನುಸರಿಸಬೇಕಾದ ಕ್ರಮದ ಬಗ್ಗೆ ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆಯ ಅಧೀಕ್ಷಕ ಎಂಜಿನಿಯರ್ ಜಂಬಾಳೆ ಮತ್ತು ಕಾರ‌್ಯನಿರ್ವಾಹಕ ಎಂಜಿನಿಯರ್ ಟಿ. ಎಸ್. ರಾಥೋಡ್ ಅವರಿಗೆ ಮಾರ್ಗದರ್ಶನ ನೀಡಿದರು. ಭಾಗಶ: ನಿರ್ಮಾಣವಾದ ದಕ್ಷಿಣ ಮತ್ತು ಉತ್ತರ ದಿಕ್ಕಿನ ತಡೆಗೋಡೆಗಳು ಮಳೆಗಾಲದಲ್ಲಿ ಕುಸಿದಿರುವುದನ್ನು ಗಮನಿಸಿದ ಅವರು ಗೋಡೆ ನಿರ್ಮಾಣದ ಜತೆಗೆ ಅವುಗಳ ಹೊರಬದಿಗೆ ಟೆಟ್ರಾಪಾಡ್ ಅಳವಡಿಸುವ ಕೆಲಸವೂ ನಡೆಯಬೇಕು. ಹಾಗೆ ಮಾಡದಿದ್ದರೆ ಸಮುದ್ರದ ಉಬ್ಬರದ ಅಲೆಗಳು ಅಪ್ಪಳಿಸಿ, ಗೋಡೆ ಕುಸಿಯುತ್ತದೆ ಎಂದರು. ಬಂದರಿನೊಳಗೆ ದೋಣಿಗಳ ಪ್ರವೇಶಕ್ಕೆ ಒದಗಿಸಲು ಉದ್ದೇಶಿಸಿರುವ 150 ಮೀಟರ್ ದ್ವಾರವನ್ನು 200 ಮೀಟರ್‌ಗೆ ಹೆಚ್ಚಿಸಬೇಕು ಎಂಬ ಸ್ಥಳೀಯ ಮೀನುಗಾರರ ಅಪೇಕ್ಷೆಗೆ ಸಹಮತ ವ್ಯಕ್ತಪಡಿಸಿದ ಅವರು ಅಲ್ಲಿ ಉಳಿಕೆಯಾಗುವ ಅಂತರದ ಕಾಮಗಾರಿಯನ್ನು ದಕ್ಷಿಣದ ಗೋಡೆಯ ವಿಸ್ತರಣೆಗೆ ಬಳಸಬಹುದೆಂದು ಸಲಹೆಯಿತ್ತರು. 

ಬಂದರಿನ ವಿನ್ಯಾಸವನ್ನು ಸಾಕಷ್ಟು ಅಧ್ಯಯನ ಮತ್ತು ಅನುಭವದ ಹಿನ್ನೆಲೆಯಲ್ಲಿ ತಮ್ಮ ಸಂಸ್ಥೆ ಸಿದ್ಧಪಡಿಸಿದ್ದು, ಅದನ್ನು ಇಲಾಖೆ ತನ್ನದೇ ನೆಲೆಯಲ್ಲಿ ಬದಲಾವಣೆ ಮಾಡದಿರುವಂತೆ ಸೂಚಿಸಿದರು. ಈ ಸಂದರ್ಭದಲ್ಲಿ ಹಾಜರಿದ್ದ ಸ್ಥಳೀಯ ಮೀನುಗಾರರ ಉಸ್ತುವಾರಿ ಸಮಿತಿಯ ಅಧ್ಯಕ್ಷ ಎಂ. ರಾಮಕಷ್ಣ ಖಾರ್ವಿ ಕಾಮಗಾರಿ ಪೂರ್ಣಗೊಳಿಸಲು ನಿಗದಿಯಾಗಿದ್ದ 36 ತಿಂಗಳ ಅವಧಿಯಲ್ಲಿ ಈಗಾಗಲೇ 24 ತಿಂಗಳು ಕಳೆದಿದ್ದು, ಅರ್ಧಕ್ಕಿಂತಲೂ ಅಧಿಕ ಪ್ರಮಾಣದ ಕಾಮಗಾರಿ ಬಾಕಿ ಇರುವುದರತ್ತ ಮತ್ತು ಮುಂದಿನ ಮಳೆಗಾಲದೊಳಗೆ ಪಶ್ಚಿಮದ ತಡೆಗೋಡೆ ನಿರ್ಮಾಣವಾಗದಿದ್ದರೆ ಬಂದರಿನ ಆವರಣದೊಳಗಿನ ತೀರ ಪ್ರದೇಶದಲ್ಲಿ ತೀವ್ರ ಸ್ವರೂಪದ ಕೊರತೆ ಸಂಭವಿಸುವ ಸಾಧ್ಯತೆಯತ್ತ ಅಧಿಕಾರಿಗಳೊಂದಿಗೆ ಆತಂಕ ವ್ಯಕ್ತಪಡಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಅಧಿಕಾರಿಗಳು ಮತ್ತು ಗುತ್ತಿಗೆದಾರರು ಮಳೆಗಾಲ ಆರಂಭಕ್ಕೆ ಮುನ್ನ ಸಾಧ್ಯವಾದಷ್ಟು ಹೆಚ್ಚು ಕೆಲಸ ನಡೆಸುವ ಭರವಸೆಯಿತ್ತರು. 

ಸಮಿತಿಯ ಕಾರ್ಯದರ್ಶಿ ಗಣಪತಿ ಖಾರ್ವಿ, ಸದಸ್ಯರಾದ ಚಂದ್ರ ಖಾರ್ವಿ, ಅಣ್ಣಪ್ಪ ಖಾರ್ವಿ, ಕರುಣಾಕರ ಖಾರ್ವಿ, ಸಂಜೀವ ಖಾರ್ವಿ, ಸ್ಥಳೀಯ ಪ್ರಮುಖರಾದ ಟಿ. ಕೆ. ಖಾರ್ವಿ, ಎಂ. ವಿನಾಯಕ ರಾವ್, ಚಂದ್ರಶೇಖರ ಖಾರ್ವಿ, ಎಸ್. ಜನಾರ್ದನ, ಸಹಾಯಕ ಎಂಜಿನಿಯರ್ ನಾಗರಾಜ್, ಜೆ. ಆರ್. ಡಯಾಸ್, ರವೀಶ್ ಇದ್ದರು.

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com