ಪ್ರಥಮ್‌ ಇನ್‌ ಅಮ್ಯೂಸ್‌ಮೆಂಟ್‌ ವಾಟರ್‌ ಪಾರ್ಕ್‌ನ ಸದಸ್ಯತ್ವ ಕಾರ್ಯಕ್ರಮ

ಜಪ್ತಿ:  ಪ್ರಕೃತಿ ಸೌಂದರ್ಯದ ನೆಲೆಬೀಡಾಗಿರುವ ಉಡುಪಿ ಜಿಲ್ಲೆಯಲ್ಲಿ ಪ್ರವಾಸೋದ್ಯಮ ಕೇಂದ್ರಗಳ ಸ್ಥಾಪನೆಗೆ ವಿಪುಲವಾದ ಅವಕಾಶವಿದೆ. ಪ್ರವಾಸೋದ್ಯಮದ ದಿಕ್ಕು ಬದಲಾಗಿರುವ ಈ ದಿಸೆಯಲ್ಲಿ ಯುವ ಉದ್ಯಮಿಗಳು ಈ ಒಂದು ಕ್ಷೇತ್ರದಲ್ಲಿ ತೊಡಗಿಸಿ ಕೊಳ್ಳುವುದರ ಮೂಲಕ ಹೊಸತನದಿಂದ ಕೂಡಿದ ಉದ್ಯಮ ಆರಂಭಗೊಳ್ಳುತ್ತಿರುವುದು ಗ್ರಾಮೀಣ ಪ್ರದೇಶದಲ್ಲೊಂದು ವಿಶೇಷ ಸಾಧನೆಯಾಗಿದೆ ಎಂದು ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಹೇಳಿದರು.

ಕುಂದಾಪುರ ತಾಲೂಕಿನ ಜಪ್ತಿಯಲ್ಲಿ  ನಡೆದ ಪ್ರಥಮ್‌ ಇನ್‌ ಅಮ್ಯೂಸ್‌ಮೆಂಟ್‌ ವಾಟರ್‌ ಪಾರ್ಕ್‌ನ ಸದಸ್ಯತ್ವ ಕಾರ್ಯಕ್ರಮವನ್ನು ಉದ್ಘಾಟಿಸಿ ಶಾಸಕರು ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಮಾಜಿ ಶಾಸಕ ಬಿ. ಅಪ್ಪಣ್ಣ ಹೆಗ್ಡೆ ಅವರು ಯುವ ಉದ್ಯಮಿ ಮರತ್ತೂರು ಸುರೇಶ ಶೆಟ್ಟಿ ಅವರ ಕ್ರಿಯಾಶೀಲತೆ ಹಾಗೂ ಕಾರ್ಯತತ್ಪರತೆಯನ್ನು ಶ್ಲಾಘಿಸಿ ಶುಭ ಹಾರೈಸಿದರು. 

ಕರ್ನಾಟಕ ಟೂರಿಸಮ್‌ ಡೆವಲಪ್‌ಮೆಂಟ್‌ ಕಾರ್ಪೊರೇಶನ್‌ನ ನಿವೃತ್ತ ಆಡಳಿತ ನಿರ್ದೇಶಕ ಡಾ| ದ್ಯಾವಯ್ಯನವರು ಮಾತನಾಡಿ ಪ್ರವಾಸೋದ್ಯಮ ಕೇಂದ್ರಗಳ ಮಹತ್ವವನ್ನು ವಿವರಿಸಿದರು. ಮುಂಬಯಿಯ ಪ್ರಥಮ್‌ ಗ್ರೂಫ್‌ ಆಫ್‌ ಕಂಪೆನಿಗಳ ಆಡಳಿತ ನಿರ್ದೇಶಕ ಮರತ್ತೂರು ಸುರೇಶ ಶೆಟ್ಟಿ ಅವರು ಮಾತನಾಡಿ ಹುಟ್ಟೂರಿನಲ್ಲಿ ಆರಂಭಿಸಲಾಗಿರುವ ವಾಟರ್‌ ಪಾರ್ಕ್‌ ಸೇರಿ ವೈವಿಧ್ಯಮಯ ವಿವಿಧ ಮಜಲಿನ ಈ ಒಂದು ಪ್ರಥಮ್‌ ಇನ್‌ ಅಮ್ಯೂಸ್‌ಮೆಂಟ್‌ ವಾಟರ್‌ ಪಾರ್ಕ್‌ ಗ್ರಾಮೀಣ ಪ್ರದೇಶಗಳ ಜನರಿಗೆ ರಜಾ ದಿನಗಳಲ್ಲಿ ಮನೋರಂಜನೆಯ ಕೇಂದ್ರವನ್ನಾಗಿಸಿ ಬೆಳೆಸುವುದರೊಡನೆ ದೇಶ ವಿದೇಶಗಳ ಪ್ರವಾಸಿಗರ ತಾಣವಾಗಿಸುವುದಾಗಿ ಹೇಳಿದರು. ಇದೇ ಸಂದರ್ಭ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿಯವರು ಪ್ರಥಮ್‌ ಇನ್‌ ಅಮ್ಯೂಸ್‌ಮೆಂಟ್‌ನ ಬ್ರೋಶ್ಚರ್‌ ಬಿಡುಗಡೆಗೊಳಿಸಿದರು.

ಮುಖ್ಯ ಅತಿಥಿಗಳಾಗಿ ಜಿ. ಪಂ. ಉಪಾಧ್ಯಕ್ಷ ಪ್ರಕಾಶ ಮೆಂಡನ್‌, ಮುಂಬಯಿ ಉದ್ಯಮಿಗಳಾದ ಎನ್‌. ಟಿ. ಪೂಜಾರಿ, ಸುರೇಶ ಕಾಂಚನ್‌, ಕೋಣಿ ಗ್ರಾ.ಪಂ. ಅಧ್ಯಕ್ಷೆ ರುಕ್ಕು ಪೂಜಾರಿ, ಪಂಚಾಯತ್‌ ಅಭಿವೃದ್ಧಿ ಅಧಿಧಿಕಾರಿ ವಸಂತಿ, ಉದ್ಯಮಿಗಳಾದ ಜಯಕರ ಶೆಟ್ಟಿ, ಕಿಶೋರ್‌ ಕುಮಾರ್‌ ಕುಂದಾಪುರ, ಬಳ್ಳಾರಿ ಸುರೇಶ ಶೆಟ್ಟಿ, ವಿ. ಕೆ. ಮೋಹನ್‌ ವಕ್ವಾಡಿ, ಪ್ರವೀಣ ಕುಮಾರ್‌ ಶೆಟ್ಟಿ ವಕ್ವಾಡಿ, ಸಂಸ್ಥೆಯ ಪಾಲುದಾರರಾದ ಗೌರೀಶ್‌ ಹೆಗ್ಡೆ, ದಿನೇಶ್‌ ಪೈ, ಭರತ್‌ ಶೆಟ್ಟಿ, ಅನಿಲ್‌ ಎಮ್‌. ನಾಯ್ಕ ಉಪಸ್ಥಿತರಿದ್ದರು. ಬಿ.ಎಂ. ವೆಂಕಟೇಶ್‌ ಸ್ವಾಗತಿಸಿ, ಪ್ರಥಮ್‌ ಗ್ರೂಪ್‌ನ ಸಿ.ಇ.ಒ. ದೇವೇಂದ್ರ ತೋಂಡ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಮರತ್ತೂರು ಸುರೇಶ ಶೆಟ್ಟಿ ವಂದಿಸಿದರು.    

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com