ಡಿಸಿಸಿ ಬ್ಯಾಂಕ್ ಕೋಟೇಶ್ವರ ಶಾಖೆ ಉದ್ಘಾಟನೆ

ಕುಂದಾಪುರ: 21 ವರ್ಷದ ಹಿಂದೆ ಕೇವಲ 60 ಕೋಟಿ ಠೇವಣಿ ಹೊಂದಿದ್ದ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಇಂದು 4300 ಕೋಟಿ ರೂ. ವ್ಯವಹಾರ ನಡೆಸುತ್ತಿದೆ. 2400 ಕೋಟಿ ರೂ. ಠೇವಣಿ ಹೊಂದಿದ್ದು, 19 ಸಾವಿರ ಕೋಟಿ ರೂ. ಸಾಲ ವಿತರಿಸಿದೆ. ಬ್ಯಾಂಕಿನ ಪ್ರಗತಿಗೆ ಗ್ರಾಹಕರೇ ಕಾರಣ ಎಂದು ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷ ಡಾ. ಎಂ.ಎನ್. ರಾಜೇಂದ್ರ ಕುಮಾರ್ ಹೇಳಿದರು. 
    ಕೋಟೇಶ್ವರದ ರತ್ನವನ ಕಾಂಪ್ಲೆಕ್ಸ್‌ನಲ್ಲಿ ಡಿಸಿಸಿ ಬ್ಯಾಂಕಿನ 93ನೇ ಕೋಟೇಶ್ವರ ಶಾಖೆ ಉದ್ಘಾಟಿಸಿ ಅವರು ಮಾತನಾಡಿದರು. ಬ್ಯಾಂಕ್ ಈ ಭಾಗದಲ್ಲಿ 18ನೇ ಆರ್ಥಿಕ ಸಂಸ್ಥೆಯಾಗಿ ಆರಂಭಗೊಂಡಿದೆ. ಇತರ ಆರ್ಥಿಕ ಸಂಸ್ಥೆಗಳ ಪ್ರಬಲ ಪೈಪೋಟಿಯ ನಡುವೆಯು ಆರಂಭದ ಲ್ಲಿಯೇ 8 ಕೋಟಿ ರೂ. ಠೇವಣಿ ಹಾಗೂ 1700 ಖಾತೆ ತೆರೆದಿರುವುದು ಶ್ಲಾಘನೀಯವಾಗಿದೆ. ಇಂದು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಹಕಾರಿ ಕ್ಷೇತ್ರಕ್ಕೆ ವಿಶೇಷ ಮನ್ನಣೆ ಇದೆ. ಇದಕ್ಕೆ ಪ್ರಮುಖ ಕಾರಣ ಸಹಕಾರಿ ರಂಗದ ನಗುಮುಖದ ಸೇವೆಯಾಗಿದೆ. ನಮ್ಮ ಬ್ಯಾಂಕ್ ಸಮಾಜದ ಕಟ್ಟಕಡೆಯ ವ್ಯಕ್ತಿಗೆ ಶಕ್ತಿ ತುಂಬುವ ಹಾಗೂ ಕೃಷಿಕರ ಬದುಕಿಗೆ ಅರ್ಥ ಕೊಡುವ ಕೆಲಸ ಮಾಡುತ್ತಿದೆ. ಜಿಲ್ಲೆಯ ಕೃಷಿಕರು ತಮ್ಮ ಕೃಷಿ ಸಾಲವನ್ನು ಶೇ. 100 ರಷ್ಟು ಮರುಪಾವತಿ ಮಾಡಿದ ದೇಶದಲ್ಲಿಯೇ ಮೊದಲ ಸ್ಥಾನ ಪಡೆದ ಹೆಗ್ಗಳಿಕೆ ಹೊಂದಿದ್ದಾರೆ ಎಂದರು. 
     ಕೋಟೇಶ್ವರ ಸಹಕಾರಿ ವ್ಯವಸಾಯಿಕ ಸಂಘದ ಅಧ್ಯಕ್ಷ ದಯಾನಂದ ಹೆಗ್ಡೆ ಗಣಕೀಕರಣ ಉದ್ಘಾಟಿಸಿದರು, ಗ್ರಾ.ಪಂ.ಅಧ್ಯಕ್ಷ ರಾಜಶೇಖರ ಶೆಟ್ಟಿ, ತಾ.ಪಂ. ಸದಸ್ಯ ಮಂಜು ಬಿಲ್ಲವ, ಕೋಟಿಲಿಂಗೇಶ್ವರ ದೇವಳದ ಆಡಳಿತ ಮಂಡಳಿಯ ಅಧ್ಯಕ್ಷ ಪ್ರಭಾಕರ ಶೆಟ್ಟಿ ಎಂ., ಕಟ್ಟಡ ಮಾಲಕ ರಿತೇಶ್ ಶೆಟ್ಟಿ, ಜಿಲ್ಲಾ ಬ್ಯಾಂಕಿನ ನಿರ್ದೇಶಕರಾದ ಕಿಶನ್ ಹೆಗ್ಡೆ ಕೊಳ್ಕೆಬೈಲ್, ಬಿ.ರಘುರಾಮ ಶೆಟ್ಟಿ, ರಾಜೇಶ್‌ರಾವ್, ಕುಂದಾಪುರ ಎಪಿಎಂಸಿ ಅಧ್ಯಕ್ಷ ಬಾಂಡ್ಯ ಸುಧಾಕರ ಶೆಟ್ಟಿ, ಬಸ್ರೂರು ವಿಎಸ್‌ಎಸ್ ಅಧ್ಯಕ್ಷ ಗೋಪಾಲ ಪೂಜಾರಿ, ಕುಂದಾಪುರ ವಿಎಸ್‌ಎಸ್ ಅಧ್ಯಕ್ಷ ಮಧುಕರ್, ಕಾವ್ರಾಡಿ ವಿಎಸ್‌ಎಸ್ ಅಧ್ಯಕ್ಷ ಸೀತಾರಾಮ ಶೆಟ್ಟಿ ಉಪಸ್ಥಿತರಿದ್ದರು.
   ಇದೇ ಸಂದರ್ಭದಲ್ಲಿ ಕೋಟೇಶ್ವರ ವ್ಯವಸಾಯ ಸೇವಾ ಸಹಕಾರಿ ಸಂಘ, ಆನಂದ ಎಸ್. ಎನ್., ಗಣಪ ಅವರಿಗೆ ಸಾಂಕೇತಿಕವಾಗಿ ಠೇವಣಿ ಪತ್ರ ವಿತರಿಸಲಾಯಿತು. ಕೋಟೇಶ್ವರದ ಎಸ್.ಕೆ ಗೋಲ್ಡ್ ಇಂಡಸ್ಟ್ರೀಯಲ್ ಕೋ. ಆಪ್ ಸೊಸೈಟಿ, ಕೆ.ಆರ್. ಸಂಜೀವ, ಸತೀಶ ಎಂ. ನಾಯಕ್ ಅವರಿಗೆ ಸಂಚಯ ಖಾತೆ ಪಾಸ್ ಪುಸ್ತಕ ವಿತರಿಸಲಾಯಿತು. ಆದರ್ಶ ಐತಾಳ್, ಶಿವಾನಂದ, ಸದಾನಂದ, ಗೋಪಾಲ, ಮಂಜುನಾಥ, ಅವರಿಗೆ ವಾಹನ ಸಾಲ ಪತ್ರ ವಿತರಿಸಲಾಯಿತು. ರಮೇಶ್, ಮೈದಿನ್ ಸಾಹೇಬ್ ಅವರಿಗೆ ಆಪ್ತ ಸಾಲಪತ್ರ ವಿತರಿಸಲಾಯಿತು. ಉಷಾ ಆರ್ ಭಾಯಿ ಹಾಗೂ ಶಿವಾನಂದ ಐತಾಳ್ ಅವರಿಗೆ ಲಾಕರ್ ಕೀ ವಿತರಿಸಲಾಯಿತು. ಬ್ಯಾಂಕಿನ ನಿರ್ದೇಶಕ ರಾಜು ಪೂಜಾರಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com