ಮಕ್ಕಳ ಸಾಹಿತ್ಯ ಸಮ್ಮೇಳನ ಸಂಪನ್ನ

ಬಾರಕೂರು: ಮಕ್ಕಳು ಕನ್ನಡ ಮಾಧ್ಯಮದಲ್ಲಿ ಓದಿದರೆ ಉದ್ಯೋಗ ಮಾರುಕಟ್ಟೆಯಲ್ಲಿ ಹಿಂದುಳಿದಾರೆಂಬ ಭ್ರಮೆ ಪೋಷಕ ವರ್ಗದಲ್ಲಿ ಹೆಚ್ಚುತ್ತಿದೆ. ಆಂಗ್ಲ ಮಾಧ್ಯಮ ಶಾಲೆಗಳು ದಿನೇ ದಿನೇ ಮೇಲೇಳುತ್ತಿದ್ದರೆ ಕನ್ನಡ ಶಾಲೆಗಳು ವಿದ್ಯಾರ್ಥಿಗಳಿಲ್ಲದೆ ಬಾಗಿಲು ಮುಚ್ಚುತ್ತಿರುವ ಅತಂಕದಲ್ಲಿವೆ ಎಂದು 15ನೇ ಮಕ್ಕಳ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ, ಹೆಸ್ಕತ್ತೂರು ಸರಕಾರಿ ಪ್ರೌಢ ಶಾಲೆಯ ವಿದ್ಯಾರ್ಥಿ ಪ್ರವೀಣ್ ಎಸ್.ಹೇಳಿದರು. 

ಬಾರಕೂರು ಶ್ರೀಮತಿ ರುಕ್ಮಿಣಿ ಶೆಡ್ತಿ ಸ್ಮಾರಕ ನ್ಯಾಶನಲ್ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆರಂಭಗೊಂಡ ಎರಡು ದಿನಗಳ ಮಕ್ಕಳ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಸ್ಥಾನದಿಂದ ಅವರು ಮಾತನಾಡಿದರು. 

ಒಂದು ಭಾಷೆಯಾಗಿ ಇಂಗ್ಲೀಷ್ ಕಲಿಯಲೇಬೇಕು. ಆದರೆ ಎಲ್ಲ ವಿಷಯಗಳನ್ನು ಇಂಗ್ಲೀಷ್‌ನಲ್ಲೇ ಕಲಿಯಬೇಕೆಂಬ ಅಗತ್ಯವಿಲ್ಲ. ನಾನೊಬ್ಬ ಕನ್ನಡ ಮಾಧ್ಯಮ ವಿದ್ಯಾರ್ಥಿ ಎನ್ನಲು ನನಗೆ ಹೆಮ್ಮೆ ಇದೆ. ಇಲ್ಲಿ ನಡೆಯುತ್ತಿರುವ ಮಕ್ಕಳ ಸಾಹಿತ್ಯ ಸಮ್ಮೇಳನ ಭರವಸೆಯ ಬೆಳ್ಳಿ ಚುಕ್ಕಿ ಅಂತ ನನಗೆ ಅನ್ನಿಸುತ್ತದೆ ಎಂದವರು ನುಡಿದರು. 

ಬೆಂಗಳೂರಿನ ಸಂಗೀತ ನಿರ್ದೇಶಕಿ, ಸಾಹಿತಿ ಕಲಾಶ್ರೀ ಡಾ.ಜಯಶ್ರೀ ಅರವಿಂದ್‌ಸಮ್ಮೇಳ ಉದ್ಘಾಟಿಸಿದರು. ಬೆಂಗಳೂರಿನ ಕವಿ ಬಾಗೂರು ಮಾರ್ಕಾಂಡೇಯ ಮಕ್ಕಳ ಸ್ವರಚಿತ ಕವನ ಸಂಕಲನವನ್ನು ಬಿಡುಗಡೆ ಮಾಡಿದರು. ನಾನಾ ವಿಭಾಗದಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. 

ಕಾಲೇಜಿನ ಹಳೆ ವಿದ್ಯಾರ್ಥಿ, ಅಮೆರಿಕಾದ ಟೆಕ್ಸಸ್‌ನ ಮೆರಿಟಸ್ ಯುನಿವರ್ಸಿಟಿಯ ಪ್ರೊಫೆಸರ್ ಗೇಬ್ರಿಯಲ್ ಫೆರ್ನಾಂಡಿಸ್ ಶುಭಾಶಂಸನೆಗೈದರು. ಮುಖ್ಯ ಅತಿಥಿಯಾಗಿ ಬಾರಕೂರು ಕಾಲೇಜಿನ ಪ್ರಿನ್ಸಿಪಾಲ್ ವಸಂತ ರಾಜ್ ಶೆಟ್ಟಿ , ಜಿಪಂ ಸದಸ್ಯೆ ಮಲ್ಲಿಕಾ ಬಿ.ಪೂಜಾರಿ, ಶಾಂತಿವನ ಟ್ರಸ್ಟ್‌ನ ಸೀತಾರಾಮ್ ತೋಳಪಡಿತ್ತಾಯ, ಯೋಗ ನಿರ್ದೇಶಕ, ಶಶಿ ಕಾಂತ್ ಜೈನ್‌ ಮತ್ತು ಬಾರಕೂರು ಆನ್ ಲೈನ್‌ಡಾಟ್ ಕಾಂ ನ ಕಿಶೋರ್ ಗೊನ್ಸಾಲ್ವಿಸ್ ಉಪಸ್ಥಿತರಿದ್ದರು. 

ಪ್ರಧಾನ ಸಂಘಟಕ ರಾಮಭಟ್ಟ ಸಜಂಗದ್ದೆ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಬಿಎಮ್‌ಎಮ್ ಪ್ರೌಢ ಶಾಲೆಯ ವಿದ್ಯಾರ್ಥಿ ನಿಕೀಶ್ ಸ್ವಾಗತಿಸಿ, ಪ್ರಕಾಶ್ ಹೆಬ್ಬಾರ್ ಸನ್ಮಾನಿತರನ್ನು ಪರಿಚಯಿಸಿದರು. ವಿದ್ಯಾರ್ಥಿ ಅಕ್ಷಯ ಹೆಗಡೆ ವಂದಿಸಿದರು. ಶಿಶಿರ ಮತ್ತು ಚಿತ್ರಾವತಿ ಕಾರ್ಯಕ್ರಮ ನಿರೂಪಿಸಿದರು. 
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com