ರೈತರಿಗೆ ಶೀಘ್ರ ವಾರಾಹಿ ನೀರು: ಸಚಿವ ಪಾಟೀಲ್

ಸಿದ್ಧಾಪುರ: ವಾರಾಹಿ ಯೋಜನೆ ಯಾಕೆ ವಿಳಂಬವಾಯಿತು ಅನ್ನುವ ಚರ್ಚೆಗಿಂತಲೂ ಮುಖ್ಯವಾಗಿ ನನ್ನ ಅವಧಿಯಲ್ಲಿ ಯೋಜನೆ ಪೂರ್ಣಗೊಳಿಸಬೇಕೆಂಬ ಗುರಿ ಇಟ್ಟುಕೊಂಡಿದ್ದೇನೆ ಎಂದು ನೀರಾವರಿ ಸಚಿವ ಎಂ.ಬಿ. ಪಾಟೀಲ್ ಹೇಳಿದರು.

ಸಿದ್ದಾಪುರದಲ್ಲಿರುವ ವಾರಾಹಿ ನೀರಾವರಿ ನಿಗಮ ಕಚೇರಿ ಎದುರು ಉಡುಪಿ ಜಿಲ್ಲಾ ರೈತ ಸಂಘ ನಡೆಸುತ್ತಿರುವ ಧರಣಿ ಸ್ಥಳಕ್ಕೆ ಭೇಟಿ ನೀಡಿ ರೈತರನ್ನುದ್ದೇಶಿಸಿ ಮಾತನಾಡಿದರು.

2014ರ ಡಿಸೆಂಬರ್ ಅಂತ್ಯದೊಳಗೆ ನೀರು ನೀಡುವುದಾಗಿ ಭರವಸೆ ನೀಡಿದ್ದೆ. ಮಳೆ, ಪ್ರಾಕತಿಕ ಕಾರಣಗಳಿಂದ ಕಾಮಗಾರಿ ನಾವು ಇಚ್ಛಿಸಿದ ರೀತಿಯಲ್ಲಿ ನಡೆಸಲಾಗಲಿಲ್ಲ. 2015ರ ಏಪ್ರಿಲ್‌ನೊಳಗೆ ವಾರಾಹಿ ಯೋಜನೆಯ ಎಡದಂಡೆ ವ್ಯಾಪ್ತಿಯ 3 ಸಾವಿರ ಹೆಕ್ಟೇರ್ ಭೂಮಿಗೆ ನೀರು ಹರಿಯಲಿದೆ. ದ್ವಿತೀಯ ಹಂತದಲ್ಲಿ 5600 ಹೆಕ್ಟೇರ್ ಭೂಮಿಗೆ ನೀರು ನೀಡಲಾಗುತ್ತದೆ. ಮೂರನೇ ಹಂತದಲ್ಲಿ ಏತ ನೀರಾವರಿ ಪಾಯಿಂಟ್‌ನ ಕಾಮಗಾರಿ ಅಂತಿಮಗೊಳಿಸಿ ಇಡೀ ಯೋಜನಾ ಪ್ರದೇಶಕ್ಕೆ ನೀರು ಹಾಯಿಸಲಾಗುತ್ತದೆ ಎಂದು ಹೇಳಿದರು.

ವಾರಾಹಿ ನೀರಾವರಿ ಯೋಜನೆ ಪೂರ್ಣಗೊಳಿಸಿ ಬ್ರಹ್ಮಾವರ ಸಕ್ಕರೆ ಕಾರ್ಖಾನೆ ಪುನಶ್ಚೇತನಗೊಳಿಸಲು ಬದ್ಧರಾಗಿದ್ದೇವೆ. ಕಳೆದ 16 ದಿನಗಳಿಂದ ರೈತರು ಶಾಂತಿಯುತ ಹೋರಾಟ ನಡೆಸಿದ್ದೀರಿ. ಇಂದಿನ ಸಮಾ ಲೋಚನಾ ಸಭೆ ಅತ್ಯಂತ ಫಲಪ್ರದವಾಗಿದೆ. ರೈತರು ಹೋರಾಟ ಹಿಂಪಡೆಯಬೇಕು ಎಂದು ಮನವಿ ಮಾಡಿಕೊಂಡರು.

ಸಚಿವರ ಭರವಸೆಗೆ ಸಮ್ಮತಿ ನೀಡಿದ ರೈತರು ಹೋರಾಟ ಹಿಂಪಡೆಯುವ ನಿರ್ಧಾರ ಪ್ರಕಟಿಸಿದರು. ಭಾರತೀಯ ಕಿಸಾನ್ ಸಂಘದ ಉಡುಪಿ ಜಿಲ್ಲಾಧ್ಯಕ್ಷ ಬಿ.ವಿ. ಪೂಜಾರಿ ಮಾತನಾಡಿ, ನಮ್ಮ ಹೋರಾಟಕ್ಕೆ ಮನ್ನಣೆ ನೀಡಿ ನಾಲ್ವರು ಸಚಿವರು ಇಲ್ಲಿಯವರೆಗೆ ಆಗಮಿಸಿದ್ದೀರಿ. ನಿಮ್ಮ ಮನವಿಯಂತೆ ಹೋರಾಟ ಹಿಂಪಡೆದುಕೊಳ್ಳುತ್ತೇವೆ. ನೀರು ನೀಡುವ ನಿಮ್ಮ ಭರವಸೆ ಮತ್ತೆ ಹುಸಿಯಾಗದಿರಲಿ ಎಂಬ ಆಶಯ ನಮ್ಮದಾಗಿದೆ ಎಂದರು. ಉಡುಪಿ ಜಿಲ್ಲಾ ರೈತ ಸಂಘದ ಅಧ್ಯಕ್ಷ ಕೆ. ಪ್ರತಾಪಚಂದ್ರ ಶೆಟ್ಟಿ, ಸಚಿವ ವಿನಯಕುಮಾರ ಸೊರಕೆ, ಶಾಸಕ ಕೆ.ಗೋಪಾಲ ಪೂಜಾರಿ, ಮಾಜಿ ಸಂಸದ ಕೆ. ಜಯಪ್ರಕಾಶ್ ಹೆಗ್ಡೆ, ರೈತ ಸಂಘದ ಮುಖಂಡರು, ರೈತರು ಉಪಸ್ಥಿತರಿದ್ದರು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com