ಲೋಕಾರ್ಪಣೆಗೆ ಸಿದ್ಧವಾಗುತ್ತಿರುವ ಉಪ್ಪಿನಕುದ್ರು ಗೊಂಬೆಯಾಟ ಅಕಾಡೆಮಿ

ಉಪ್ಪಿನಕುದ್ರುವಿನಲ್ಲಿ ಯಕ್ಷಗಾನ ಗೊಂಬೆಯಾಟ ಈ ಕಲೆಯನ್ನು ವ್ಯವಸ್ಥಿತ ರೀತಿಯಲ್ಲಿ ಉಳಿಸಿ, ಬೆಳೆಸಿ, ಬೆಳಗಿಸುವಲ್ಲಿ ಸ್ಥಾಪಿತವಾದ ಉಪ್ಪಿನಕುದ್ರು ಶ್ರೀ ದೇವಣ್ಣ ಪದ್ಮನಾಭ ಕಾಮತ್ ಮೆಮೋರಿಯಲ್ ಯಕ್ಷಗಾನ ಗೊಂಬೆಯಾಟ ಟ್ರಸ್ಟ್ (ರಿ) . ಇದರ ಸಾಧನೆಯ ಕೂಸೇ ಈ ಗೊಂಬೆಯಾಟ ಅಕಾಡೆಮಿ ಕಟ್ಟಡ. ಬೆಂಗಳೂರಿನ ಸೆಂಚುರಿ ಬಿಲ್ಡರ‍್ಸ್ ನ ಡಾ. ಪಿ. ದಯಾನಂದ ಪೈ ಮತ್ತು ಇನ್ಫೋಸಿಸ್ ಫೌಂಡೇಶನ್ ನ ಡಾ. ಸುಧಾಮೂರ್ತಿಯವರ ಸಹಕಾರದಿಂದ ಈ ಯೋಜನೆ ಸಾಕಾರಗೊಂಡಿದೆ. ಸರಕಾರದ ಪ್ರೋತ್ಸಾಹಕ್ಕೆ ಕಾದು ಕೂರದೆ ಅವಿರತ ಸಾಧನೆ, ಪರಿಶ್ರಮದಡಿ ಈ ಅಪರೂಪದ ಸುಂದರ ಕಟ್ಟಡ ಉಪ್ಪಿನಕುದ್ರಿನ ಗೊಂಬೆಯಾಟ ಟ್ರಸ್ಟ್ ನ ಜಾಗದಲ್ಲಿ ತಲೆ ಎತ್ತಿ ನಿಂತಿದೆ. ಇದು ಇದೇ ಮಾರ್ಚ್ ೭ ನೇ ತಾರೀಕಿನಂದು ಲೋಕಾರ್ಪಣೆಗೊಳ್ಳಲಿದೆ ಅಂತ ಟ್ರಸ್ಟ್ ನ ಅಧ್ಯಕ್ಷ, ರಾಜ್ಯಪ್ರಶಸ್ತಿ ವಿಜೇತ ಶ್ರೀ. ಭಾಸ್ಕರ್ ಕೊಗ್ಗ ಕಾಮತ್ ತಿಳಿಸಿದ್ದಾರೆ.
   ನಾಡಿನ ಹಲವು ಗಣ್ಯರ ಸಮ್ಮುಖದಲ್ಲಿ ಉದ್ಘಾಟನೆಗೊಳ್ಳುವ ಈ ಕಟ್ಟಡದಲ್ಲಿ ಅಂದು ಹತ್ತು  ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು, ಪ್ರಪ್ರಥಮವಾಗಿ ಕೊಗ್ಗ ಕಾಮತ್ ಪ್ರಶಸ್ತಿಗೆ ಗೊಂಬೆಯಾಟದ ಹಿರಿಯ ಕಲಾವಿದ ಯು. ವಾಮನ ಪೈ ಯವರನ್ನು ಆಯ್ಕೆ ಮಾಡಲಾಗಿದ್ದು ಅಂದಿನ ಸಮಾರಂಭದಲ್ಲಿ ಶ್ರೀಯುತರಿಗೆ ಪ್ರಶಸ್ತಿ ಫಲಕ, ಶಾಲು, ಹಣ ನೀಡಿ ಅದ್ದೂರಿಯಾಗಿ ಗೌರವಿಸಲು ತೀರ್ಮಾನಿಸಲಾಗಿದೆ. ೬ ನೇ ತಲಾಂತರದಲ್ಲಿ ನಡೆಯುತ್ತಿರುವ ಗೊಂಬೆಯಾಟ ಪರಂಪರೆ ೩೫೦ ವರ್ಷಗಳ ಸುಧೀರ್ಘ ಹಿನ್ನೆಲೆ ಹೊಂದಿದ್ದು  ಇಂದು ಇತಿಹಾಸದಲ್ಲೇ ಪ್ರಪ್ರಥಮವೆನ್ನುವ ಗೊಂಬೆಯಾಟ ಅಕಾಡೆಮಿ ಚೌಕಟ್ಟು ಪಡೆಯುತ್ತಿರುವುದು ಗೊಂಬೆಯಾಟ ಕಲಾವಿದರಿಗೆ, ಆಸಕ್ತರಿಗೆ, ಅಭಿಮಾನಿಗಳಿಗೆ ಆಕರ್ಷಣೆ ಕೇಂದ್ರವಾಗಲಿರುವುದಂತೂ ಖಂಡಿತ. ಈ ಒಂದು ಬಹು ದೊಡ್ಡ ಯೋಜನೆಯನ್ನು ಪೂರ್ಣ ಪ್ರಮಾಣದಲ್ಲಿ ಸಾಕಾರಗೊಳಿಸವಲ್ಲಿ ಎಲ್ಲರೂ ತನು-ಮನ-ಧನ ನೀಡಿ ಸಫಲಗೊಳಿಸಬೇಕಾಗಿದೆ ಎಂದು ಪ್ರಕಟನೆಯಲ್ಲಿ ಕೋರಲಾಗಿದೆ.

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com