ಶ್ರೀಘ ವಾರಾಹಿ ನೀರು ಹರಿಸಲು ಬದ್ಧ: ನಾಲ್ವರು ಸಚಿವರ ಭರವಸೆ. ಸತ್ಯಾಗ್ರಹ ಅಂತ್ಯ

ಸಿದ್ಧಾಪುರ: ಮುಂದಿನ ಏಪ್ರಿಲ್ ಒಳಗೆ ಎಡದಂಡೆ ವ್ಯಾಪ್ತಿಯಲ್ಲಿ ನೀರು ಹರಿಯಲಿದೆ ಎಂಬ ನಾಲ್ವರು ಸಚಿವರ ಭರವಸೆ ಮೇರೆಗೆ ಕಳೆದ 16 ದಿನಗಳಿಂದ ನಡೆಯುತ್ತಿರುವ ವಾರಾಹಿ ನೀರಿಗಾಗಿನ ಸತ್ಯಾಗ್ರಹವನ್ನು ಹಿಂಪಡೆಯಲಾಗಿದೆ. 

ನೀರಾವರಿ ಸಚಿವ ಎಂ.ಬಿ. ಪಾಟೀಲ್, ಅರಣ್ಯ ಸಚಿವ ರಮಾನಾಥ ರೈ, ಕಂದಾಯ ಸಚಿವ ಶ್ರೀನಿವಾಸ ಪ್ರಸಾದ್, ನಗರಾಭಿವೃದ್ಧಿ ಸಚಿವ ವಿನಯ ಕುಮಾರ್ ಸೊರಕೆ ಅವರು ಶುಕ್ರವಾರ ಸತ್ಯಾಗ್ರಹ ನಿರತರ ನಾಯಕರೊಂದಿಗೆ ಸಮಾಲೋಚನೆ ನಡೆಸಿದ ಬಳಿಕ 2015ರ ಏಪ್ರಿಲ್‌ನಲ್ಲಿ ಎಡದಂಡೆ ವ್ಯಾಪ್ತಿಯಲ್ಲಿ ನೀರು ಹರಿಸಲಾಗುವುದು, 2016ರ ಅಂತ್ಯದೊಳಗೆ ಎಲ್ಲ ಕಾಮಗಾರಿ ಮುಗಿಸಿ ಯೋಜನಾ ಪ್ರದೇಶದ ಎಲ್ಲ ಭಾಗಗಳಿಗೆ ನೀರು ಹರಿಸಲಾಗುವುದು ಎಂದು ಭರವಸೆ ನೀಡಿದರು. ಈ ಭರವಸೆ ಹಿನ್ನಲೆಯಲ್ಲಿ ಸತ್ಯಾಗ್ರಹ ಹಿಂಪಡೆದಿರುವುದಾಗಿ ಉಡುಪಿ ಜಿಲ್ಲಾ ರೈತ ಸಂಘದ ಅಧ್ಯಕ್ಷ ಕೆ. ಪ್ರತಾಪಚಂದ್ರ ಶೆಟ್ಟಿ ತಿಳಿಸಿದರು. 

ಇಲಾಖೆಗಳ ಸಮಾಲೋಚನೆ ಸಭೆ: ಶುಕ್ರವಾರ ಹೊಸಂಗಡಿ ಪ್ರವಾಸಿ ಮಂದಿರದಲ್ಲಿ ವಾರಾಹಿ ನೀರಾವರಿ ಯೋಜನೆ ಶೀಘ್ರ ಅನುಷ್ಠಾನ ಕುರಿತಂತೆ ಕಂದಾಯ, ನೀರಾವರಿ ಮತ್ತು ಅರಣ್ಯ ಇಲಾಖೆಯ ಜಂಟಿ ಸಮಾಲೋಚನಾ ಸಭೆ ನಡೆಯಿತು. ಅದರಲ್ಲಿ ಮಾತನಾಡಿದ ನೀರಾವರಿ ಸಚಿವ ಎಂ.ಬಿ. ಪಾಟೀಲ್, 2015ರ ಏಪ್ರಿಲ್ ಅಂತ್ಯದೊಳಗೆ ಎಡದಂಡೆ ವ್ಯಾಪ್ತಿಯಲ್ಲಿ ಮೊದಲ ಹಂತವಾಗಿ 3000 ಹೆಕ್ಟೇರ್ ಭೂಮಿಗೆ ವಾರಾಹಿ ನೀರು ಹರಿಯಲಿದೆ. ದ್ವಿತೀಯ ಹಂತದಲ್ಲಿ ಡಿಸೆಂಬರ್ ಅಂತ್ಯದೊಳಗೆ 5600 ಹೆಕ್ಟೇರ್ ಕೃಷಿ ಭೂಮಿಗೆ ನೀರು ಹರಿಸಲಾಗುವುದು ಎಂದರು. 

ಸಮಿತಿ ರಚನೆ: ಕಾಮಗಾರಿಯನ್ನು ತ್ವರಿತಗತಿಯಲ್ಲಿ ಮುಗಿಸುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿ ಅಧ್ಯಕ್ಷತೆಯ ತಜ್ಞರ ಸಮಿತಿ ರಚಿಸಲಾಗುತ್ತದೆ. ವಾರಾಹಿ ನಿಗಮದ ಮುಖ್ಯ ಎಂಜಿನಿಯರ್, ಡಿಎಫ್‌ಓ ಈ ಸಮಿತಿಯಲ್ಲಿರುತ್ತಾರೆ ಎಂದು ತಿಳಿಸಿದರು. 

1980ರಲ್ಲಿ ವಾರಾಹಿ ಯೋಜನೆ ಆರಂಭಗೊಂಡಿದ್ದರೂ ಅಧಿಕೃತ ಕಾಮಗಾರಿ ಶುರುವಾಗಿದ್ದು 2004ರ ಮಾ. 15ರಂದು ವಾರಾಹಿ ನೀರಾವರಿ ನಿಗಮ ರೂಪುಗೊಂಡ ಬಳಿಕ. ಸಿದ್ಧರಾಮಯ್ಯ ನೇತೃತ್ವದ ಸರಕಾರ ಕಳೆದ ಒಂದುವರೆ ವರ್ಷದಲ್ಲಿ ಶೇ.50ರಷ್ಟು ಕಾಮಗಾರಿ ಮುಗಿದಿದೆ. ಬಲದಂಡೆಯಲ್ಲಿ 18 ಕಿ.ಮೀ. ವ್ಯಾಪ್ತಿ, ಎಡದಂಡೆಯಲ್ಲಿ 0.30 ಕಿ.ಮೀ. ವ್ಯಾಪ್ತಿ ಹಾಗೂ 24 ಕಿ.ಮೀ. ಉದ್ದದ ಕಾಲುವೆ ಕಾಮಗಾರಿ ಮುಗಿಸಲಾಗಿದೆ ಎಂದರು. 

ತೊಡಕುಗಳ ನಿವಾರಣೆ: ಅರಣ್ಯ ಸಚಿವ ರಮಾನಾಥ ರೈ ಮಾತನಾಡಿ, ಯೋಜನೆಗೆ ಅಡ್ಡಿಯಾಗಿದೆ ಎನ್ನಲಾದ ಡೀಮ್ಡ್ ಫಾರೆಸ್ಟ್ ಗೊಂದಲ ನಿವಾರಿಸಿ 129 ಹೆಕ್ಟೇರ್ ಭೂಮಿ ಕ್ಲಿಯರೆನ್ಸ್ ಮಾಡಿಸಿದ್ದೇವೆ. ಹೆಚ್ಚುವರಿಯಾಗಿ 30 ಹೆಕ್ಟೇರ್ ಭೂಮಿ ನೀಡಲಾಗುವುದು, ಅರಣ್ಯ ಇಲಾಖೆಯಿಂದ ಇರುವ ಎಲ್ಲ ತೊಡಕುಗಳ ನಿವಾರಣೆಗೆ ಬದ್ಧನಾಗಿದ್ದೇನೆ. ಯೋಜನೆಯ ವಿಳಂಬ ಅಥವಾ ವೈಫಲ್ಯದ ಬಗ್ಗೆ ಚರ್ಚೆ ಮುಂದುವರಿಸುತ್ತಿರುವುದರಲ್ಲಿ ಅರ್ಥವಿಲ್ಲ. ಯೋಜನೆ ಬೇಗ ಮುಗಿಯಬೇಕು ಎಂದರು. 

ರೈತರಿಗೆ ಪರಿಹಾರ: ಕಂದಾಯ ಸಚಿವ ಶ್ರೀನಿವಾಸ ಪ್ರಸಾದ್ ಮಾತನಾಡಿ, ಭೂಮಿ ಕಳೆದುಕೊಂಡ ರೈತರಿಗೆ ಸೂಕ್ತ ಪರಿಹಾರ, ಯೋಜನೆಗೆ ಬೇಕಾದ ಭೂಮಿ ನೀಡುವಲ್ಲಿ ಕಂದಾಯ ಇಲಾಖೆ ಸಂಪೂರ್ಣ ಸಹಕಾರ ನೀಡಲಿದೆ ಎಂದು ತಿಳಿಸಿದರು. 

ಉಸ್ತುವಾರಿ ಸಚಿವ ವಿನಯ ಕುಮಾರ ಸೊರಕೆ ಮಾತನಾಡಿ, ನೀರು ವಾರಾಹಿ ತರುವ ಪ್ರಯತ್ನದಲ್ಲಿ ಎಲ್ಲರೂ ಕೈಜೋಡಿಸಬೇಕು. ರೈತ ಸಂಘದ ಹೋರಾಟ ಸರಕಾರಕ್ಕೆ ಚುರುಕು ಮುಟ್ಟಿಸಿದೆ ಎಂದರು. 

ರಾಜ್ಯಸಭೆ ಸದಸ್ಯ ಆಸ್ಕರ್ ಫರ್ನಾಂಡಿಸ್, ಶಾಸಕರಾದ ಹಾಲಾಡಿ ಶ್ರೀನಿವಾಸ ಶೆಟ್ಟಿ , ಕೆ. ಪ್ರತಾಪಚಂದ್ರ ಶೆಟ್ಟಿ , ಕೆ. ಗೋಪಾಲ ಪೂಜಾರಿ, ಪ್ರಮೋದ್ ಮಧ್ವರಾಜ್, ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಕುಂದಾಪುರ ತಾಪಂ ಅಧ್ಯಕ್ಷ ಭಾಸ್ಕರ ಬಿಲ್ಲವ, ತಾಪಂ ಸದಸ್ಯರಾದ ನವೀನ್‌ಚಂದ್ರ ಶೆಟ್ಟಿ, ಕೆದೂರು ಸದಾನಂದ ಶೆಟ್ಟಿ, ಪ್ರದೀಪ್‌ಚಂದ್ರ ಶೆಟ್ಟಿ, ರೈತ ಸಂಘದ ಪ್ರತಿನಿಧಿಗಳಾದ ವಿಕಾಸ್ ಹೆಗ್ಡೆ, ಪ್ರಕಾಶ್ಚಂದ್ರ ಶೆಟ್ಟಿ ಅಭಿಪ್ರಾಯ ಮಂಡಿಸಿದರು. ಮಾಜಿ ಸಂಸದ ಕೆ. ಜಯಪ್ರಕಾಶ್ ಹೆಗ್ಡೆ, ಬ್ಲೋಸಂ ಫರ್ನಾಂಡಿಸ್, ಮಂಜುನಾಥ ಭಂಡಾರಿ, ಎಂ.ಎ. ಗಫೂರ್, ಬದ್ರುದ್ದೀನ್, ಉಡುಪಿ ಡೀಸಿ ಡಾ. ವಿಶಾಲ್, ಎಸಿ ಚಾರುಲತಾ ಸೋಮಲ್, ತಹಸೀಲ್ದಾರ್ ಗಾಯತ್ರಿ ಎನ್. ನಾಯಕ್, ಉಡುಪಿ ಜಿ.ಪಂ. ಉಪಾಧ್ಯಕ್ಷ ಪ್ರಕಾಶ್ ಮೆಂಡನ್, ಜಿ.ಪಂ. ಸದಸ್ಯರಾದ ಗಣಪತಿ ಟಿ.ಶ್ರೇಯಾನ್, ಮಮತಾ ಶೆಟ್ಟಿ, ವಾರಾಹಿ ನೀರಾವರಿ ನಿಗಮ ಎಂಡಿ ರುದ್ರಯ್ಯ, ಮುಖ್ಯ ಎಂಜಿನಿಯರ್ ನಟರಾಜ್, ರೈತ ಸಂಘದ ಪ್ರತಿನಿಗಳಾದ ಸಂಪಿಗೇಡಿ ಸಂಜೀವ ಶೆಟ್ಟಿ, ಪ್ರಕಾಶ್ಚಂದ್ರ ಶೆಟ್ಟಿ, ವಿಕಾಸ್ ಹೆಗ್ಡೆ, ಹರಿಪ್ರಸಾದ್ ಶೆಟ್ಟಿ ಇದ್ದರು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com