ಫೆ.16: ಬುಡಕಟ್ಟು ಹಾಗೂ ಜನಪದ ಸಂಸ್ಕೃತಿಯ ಅನಾವರಣ

ಕುಂದಾಪುರ: ಇಲ್ಲಿನ ಭಂಡಾರ್‌ಕಾರ್ಸ್ ಕಲಾ ಮತ್ತು ವಿಜ್ಞಾನ ಕಾಲೇಜಿನ ಕಲಾ ವಿಭಾಗದ ಸಾರಥ್ಯದಲ್ಲಿ ಫೆ.16ರಂದು ಬೆಳಿಗ್ಗೆ 9:30ರಿಂದ ಆರ್.ಎನ್.ಶೆಟ್ಟಿ ಸಭಾಂಗಣದಲ್ಲಿ ಬುಡಕಟ್ಟು ಹಾಗೂ ಜನಪದ ಸಂಸ್ಕೃತಿ ಅನಾವರಣಗೊಳ್ಳಲಿದೆ ಎಂದು ಕಾಲೇಜಿನ ಪ್ರಾಂಶುಪಾಲರಾದ ಡಾ.ಎನ್.ನಾರಾಯಣ ಶೆಟ್ಟಿ ತಿಳಿಸಿದ್ದಾರೆ.

 ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಉಡುಪಿ ಜಿಲ್ಲೆಯಲ್ಲಿ ಕಾಲೇಜು ನೇತೃತ್ವದಲ್ಲಿ ನಡೆಯುವ ವಿಶಿಷ್ಠ ಕಾರ್ಯಕ್ರಮ ಇದಾಗಿದ್ದು, ಬುಡಕಟ್ಟು ಜನಾಂಗ ಸಂಸ್ಕೃತಿ, ಕಲಾ ಪ್ರಕಾರವನ್ನು ವಿದ್ಯಾರ್ಥಿಗಳಿಗೆ ತಿಳಿಯಪಡಿಸುವ, ಅವರಲ್ಲಿ ಆಸಕ್ತಿ ಮೂಡಿಸುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿದೆ. ಬುಡಕಟ್ಟು ಜನಾಂಗಗಳು ನಮ್ಮ ಸಂಸ್ಕೃತಿಯ ಬಹುದೊಡ್ಡ ಆಸ್ತಿಯಾಗಿದ್ದು, ವಿಭಿನ್ನ ಆಚರಣೆಗಳು ಮತ್ತು ವಿಚಾರಗಳ ಆಕರ ಅವರು.  ಆದರೆ ಆಧುನಿಕ ಪ್ರಪಂಚದ ನಾವಿನ್ಯತೆಯ ಸುಳಿಯಲ್ಲಿ ಬುಡಕಟ್ಟು ಜನಾಂಗಗಳ ಸಂಸ್ಕೃತಿಯ ವೈಶಿಷ್ಟ್ಯಪೂರ್ಣತೆಯನ್ನು ನೋಡುವುದೇ ಅಪರೂಪವಾಗಿದೆ. ಅಲ್ಲದೇ ಬುಡಕಟ್ಟು ಜನಾಂಗಗಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗುತ್ತಿದೆ. ಯುವಜನತೆಗೆ ಬುಡಕಟ್ಟು ಜನಾಂಗದ ಬಗ್ಗೆ ಮೂಡಿಸುವುದು ಅವರ ಸಂಸ್ಕೃತಿಯನ್ನು ಉಳಿಸಿ ಬೆಳೆಸುವುದು ಪ್ರಸ್ತುತದ ಅಗತ್ಯಗಳಲ್ಲಿ ಒಂದಾಗಿದ್ದು ಆ ನೆಲೆಯಲ್ಲಿ ಈ ಕಾರ್ಯಕ್ರಮ ನಡೆಯಲಿದೆ ಎಂದರು. 
ಕಾರ್ಯಕ್ರಮದ ಸಂಚಾಲಕ ಪ್ರೋ|ಜಿ.ಎಂ.ಉದಯಕುಮಾರ್ ಮಾತನಾಡಿ, ಕಲಾವಿಭಾಗದ ವಿದ್ಯಾರ್ಥಿಗಳು ಆಸಕ್ತಿಯಿಂದ ಕಾರ್ಯಕ್ರಮ ರೂಪಿಸುತ್ತಿದ್ದು, ಬುಡಕಟ್ಟು ಜನಾಂಗದ ಕಲೆಯನ್ನು ಪ್ರದರ್ಶಿಸುವ ಜೊತೆಗೆ ಸಮಾಜದಲ್ಲಿ ಸಮಾನತೆ ತರುವ ಪ್ರಯತ್ನವೂ ಇದಾಗಿದೆ. ಈ ಆರ್ಟ್ ಫೆಸ್ಟ್‌ನಲ್ಲಿ  ಗಣೇಶ ಅವರ ನೇತೃತ್ವದಲ್ಲಿ ಕೊರಗ ಆದಿವಾಸಿ  ಸಮಾಜದ  ಸಾಂಸ್ಕೃತಿಕ ವೈಭವ, ಸೋಮಯ್ಯ ಗೊಂಡ ಬೈಂದೂರು ಅವರ ನೇತೃತ್ವದಲ್ಲಿ ಗೊಂಡ ಸಮುದಾಯದ ಸಾಂಸ್ಕೃತಿಕ ಕಾರ್ಯಕ್ರಮ, ಸಿದ್ದಿ ಬುಡಕಟ್ಟು ಕಲಾವಿದರ ತಂಡ ಯಲ್ಲಾಪುರ ಇವರಿಂದ ಡಮಾಮ ಕುಣಿತ, ಪುಗಡಿ ನೃತ್ಯ, ಮತ್ತು ಜಾನಪದ ಹಾಡುಗಳು, ಶ್ರೀ ನಾಗರಾಜ ಪಾಣಾರ ಮತ್ತು ಸಂಗಡಿಗರು ವಾಲ್ತೂರು ಇವರಿಂದ ಪಾಣಾರ ನೃತ್ಯ, ಡಕ್ಕೆ ಬಲಿ, ಶ್ರೀ ನಾರಾಯಣ ಮರಾಠಿ ನಾಗರಮಕ್ಕಿ ಇವರ ನೇತೃತ್ವದಲ್ಲಿ ಮರಾಠಿ ನಾಯ್ಕರ ಗುಮ್ಟೆ ಕುಣಿತ, ಕೋಲಾಟ, ಶ್ರೀ ಚಂದ್ರ ನಾಯ್ಕ ನೇತೃತ್ವದ ಶ್ರೀ ಮಲ್ಲಕಾರ್ಜುನ ಕುಡುಬಿ ಹೋಳಿ ಜನಪದ ಕಲಾ ಸಂಘದಿಂದ ಹೋಳಿ ಜಾನಪದ ನೃತ್ಯ, ಅಂಕೋಲದ ಹಾಲಕ್ಕಿ ಬುಡಕಟ್ಟು ಸಮುದಾಯದಿಂದ ಸುಗ್ಗಿ ಕುಣಿತ ಜಾನಪದ  ನೃತ್ಯ ಪ್ರಕಾರಗಳು ಪ್ರದರ್ಶನಗೊಳ್ಳಲಿವೆ ಎಂದರು.
ಕಾರ್ಯಕ್ರಮವನ್ನು ಉಪವಿಭಾಗಾಧಿಕಾರಿ ಚಾರುಲತಾ ಸೋಮಲ್ ಉದ್ಘಾಟಿಸಲಿದ್ದಾರೆ. ಅಕಾಡೆಮಿ ಆಫ್ ಜನರಲ್ ಎಜ್ಯುಕೇಶನ್ ಆಡಳಿತಾಧಿಕಾರಿ ಡಾ.ಎಚ್.ಶಾಂತಾರಾಮ್ ಅಧ್ಯಕ್ಷತೆ ವಹಿಸುವರು. ಅಪರಾಹ್ನ 4ಕ್ಕೆ ನಡೆಯುವ ಸಮಾರೋಪದಲ್ಲಿ ಪ್ರಾಂಶುಪಾಲರಾದ ಡಾ|ಎನ್.ಪಿ.ನಾರಾಯಣ ಶೆಟ್ಟಿ ಅಧ್ಯಕ್ಷತೆ ವಹಿಸಲಿದ್ದಾರೆ ಎಂದರು.
ಸಮಾಜ ಶಾಸ್ತ್ರ ವಿಭಾಗದ ಪ್ರೊ. ರಾಮಚಂದ್ರ ಅವರು ಮಾತನಾಡಿ, ಅವಿಭಜಿತ ದಕ ಜಿಲ್ಲೆಯಲ್ಲಿ ಕೊರಗರು, ಮರಾಠಿ ನಾಯ್ಕರು, ಮಲೆಕುಡಿಯ ಜನಾಂಗದವರು ಮಾತ್ರ ಕಾಣುತ್ತಿದ್ದು, ಉಡುಪಿ ಜಿಲ್ಲೆಯಲ್ಲಿ ಕೊರಗರು, ಮರಾಠಿಗರು ಮಾತ್ರ ಕಾಣಸಿಗುತ್ತಾರೆ. ಈ ಕಾರ್ಯಕ್ರಮದಲ್ಲಿ ಉಡುಪಿ-ಉ.ಕ ಜಿಲ್ಲೆಯ  ಕಲಾತಂಡಗಳು ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದು, ಉಭಯ ಜಿಲ್ಲೆಯ ಸಾಂಸ್ಕೃತಿಕ ವಿನಿಮಯ ಆಗಲಿದೆ. ಜನಪದ ಸಂಸ್ಕೃತಿಗೆ ಸಂಬಂಧಪಟ್ಟ ಅವನತಿಯ ಅಂಚಿಗೆ ಸರಿಯುತ್ತಿರುವ ವಸ್ತುಗಳ ಪ್ರದರ್ಶನ, ಬುಡಕಟ್ಟು ಸಮುದಾಯಗಳ ಅಪರೂಪದ ಛಾಯಾಚಿತ್ರಗಳ ಪ್ರದರ್ಶನವೂ ನಡೆಯಲಿದೆ. ಈ ಸಚಿದರ್ಭದಲ್ಲಿ ರಾಜ್ಯ ಶಾಸ್ತ್ರ ವಿಭಾಗದ ಉಪನ್ಯಾಸಕ ಪ್ರೊ.ಸುರೇಂದ್ರನಾಥ ಶೆಟ್ಟಿ ಉಪಸ್ಥಿತರಿದ್ದರು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com