ಫೆ. 21: ಜೀವಂತ ಸಮಾಧಿ ಜಾದೂ ಪ್ರದರ್ಶನ

ಉಡುಪಿ: ಉಡುಪಿಯ ಪ್ರಸಿದ್ಧ ಜಾದೂಗಾರರಾದ ಪ್ರೊ.ಶಂಕರ್ ಹಾಗೂ ಜೂನಿಯರ್ ಶಂಕರ್ ಅವರ ಗಿಲಿಗಿಲಿ ಮ್ಯಾಜಿಕ್ ಸಂಸ್ಥೆಯ ಆಶ್ರಯದಲ್ಲಿ ಕೆನಡಾದ ಪ್ರಸಿದ್ಧ ಎಸ್ಕೇಪ್ ಆರ್ಟಿಸ್ಟ್ ಡೀನ್ ಗುನರ್ಸನ್ ಅವರ 'ಜೀವಂತ ಸಮಾಧಿ '(ಬರೀಡ್ ಅಲೈವ್) ರೋಮಂಚಕ ಜಾದೂ ಪ್ರದರ್ಶನ ಫೆ.21ರಂದು ಉಡುಪಿಯ ಕ್ರಿಶ್ಚಿಯನ್ ಹೈಸ್ಕೂಲ್ ಪಿಯು ಕಾಲೇಜ್ ಮೈದಾನದಲ್ಲಿ ಸಂಜೆ 6 ಗಂಟೆಗೆ ನಡೆಯಲಿದೆ. ಜಾದೂಗಾರರಾದ ಪ್ರೊ.ಶಂಕರ್ ಹಾಗೂ ಜೂನಿಯರ್ ಶಂಕರ್ ಅವರು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಫೆ.21ರಂದು ಕೆನಡಾದ ಜಾದೂಗಾರ ಡೀನ್ ಗುನರ್ಸನ್ ಅವರನ್ನು 6 ಅಡಿ ಆಳದಲ್ಲಿ ಹೂಳಲಾಗುವುದು. ಸುಮಾರು 24ಗಂಟೆಗಳ ಸಮಾಧಿಯ ನಂತರ ಅಂದರೆ ಫೆ.22ರಂದು ಸಂಜೆ 6 ಗಂಟೆಗೆ ಅವರು ಜೀವಂತವಾಗಿ ಹೊರ ಬರಲಿದ್ದಾರೆ ಎಂದು ಅವರು ತಿಳಿಸಿದರು.

ಈ ಕಾರ್ಯಕ್ರಮದ ಪೂರ್ವಭಾವಿಯಾಗಿ ಫೆ.18ರಂದು ಸಂಜೆ 7-30ಕ್ಕೆ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಪರ್ಯಾಯ ಶ್ರೀ ವಿದ್ಯಾವಲ್ಲಭ ತೀರ್ಥ ಸ್ವಾಮೀಜಿ ಅವರ ಉಪಸ್ಥಿತಿಯಲ್ಲಿ ಡೀನ್ ಗುನರ್ಸನ್ ಅವರಿಗೆ ಸನ್ಮಾನ ಕಾರ್ಯಕ್ರಮವಿದೆ. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಬೆಂಗಳೂರಿನ ವಿನಯ ಹೆಗ್ಡೆ ಅವರಿಂದ ಗ್ಲೋ ಆರ್ಟ್ (ಬೆಳಕಿನ ಚಿತ್ತಾರ ), ಭಾರ್ಗವಿ ನೃತ್ಯ ತಂಡದಿಂದ ನೃತ್ಯ ಪ್ರದರ್ಶನ ಹಾಗೂ ಪ್ರೊ.ಶಂಕರ್ ಅವರ ಗಿಲಿಗಿಲಿ ಮ್ಯಾಜಿಕ್ ಶೋ ನಡೆಯಲಿದೆ.

ಡೀನ್ ಗುನರ್ಸನ್ ಅವರು 2001ರಲ್ಲಿ ಗಿಲಿಗಿಲಿ ಮ್ಯಾಜಿಕ್ ನಡೆಸಿದ ಅಂತರಾಷ್ಟ್ರೀಯ ಜಾದೂಗಾರರ ಸಮ್ಮೇಳನದಲ್ಲಿ 100 ಅಡಿ ಎತ್ತರದಲ್ಲಿ ಸ್ಟ್ರೈಟ್ ಜಾಕೆಟ್ ಎಸ್ಕೇಪ್ ಕಾರ್ಯಕ್ರಮವನ್ನು ನಡೆಸಿದ್ದರು. ಸುಮಾರು 50ಸಾವಿರ ಮಂದಿ ಈ ರೋಮಾಂಚಕ ಜಾದೂವಿಗೆ ಸಾಕ್ಷಿಯಾಗಿದ್ದರು.ಈ ಬಾರಿಯ ಕಾರ್ಯಕ್ರಮದಲ್ಲಿ ಡೀನ್ ಗುನರ್ಸನ್ ಅವರೊಂದಿಗೆ ಜಾದೂಗಾರ ಕ್ಯಾರಿ ಟಾರ್ಡಿ ಜತೆಗಿರುತ್ತಾರೆ. ಕೆನಡಾದ ಟಿವಿ ಸಂಸ್ಥೆ ಜಗತ್ತಿನಾದ್ಯಂತ ಪ್ರಸಾರ ಮಾಡಲು ರೆಕಾರ್ಡ್ ಮಾಡಲಿದೆ. ಅಲ್ಲದೆ ಈ ಎರಡೂ ಕಾರ್ಯಕ್ರಮಗಳಿಗೆ ಸಾರ್ವಜನಿಕರಿಗೆ ಉಚಿತ ಪ್ರವೇಶವಿದೆ ಎಂದು ಅವರು ತಿಳಿಸಿದರು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com