ಬೈಂದೂರು - ಕಾಸರಗೋಡು ಪ್ಯಾಸೆಂಜರ್‌ ರೈಲಿಗೆ ಹಸಿರು ನಿಶಾನೆ

ಬೈಂದೂರು : ಬೈಂದೂರು - ಕಾಸರಗೋಡು ಪ್ಯಾಸೆಂಜರ್‌ ರೈಲು ಸಂಚಾರಕ್ಕೆ ಶಿವಮೊಗ್ಗ ಸಂಸದ ಬಿ.ಎಸ್‌. ಯಡಿಯೂರಪ್ಪ ಅವರು ಬೈಂದೂರಿನ ಮೂಕಾಂಬಿಕಾ ರೈಲು ನಿಲ್ದಾಣದಲ್ಲಿ ಹಸಿರು ನಿಶಾನೆ ತೋರಿ ಮಾತನಾಡಿ ಕರ್ನಾಟಕದಲ್ಲಿ ರೈಲು ಯಾನದ ಅಭಿವೃದ್ಧಿಯಲ್ಲಿ ಹಿನ್ನೆಡೆಯಿದೆ. ನಷ್ಟದಲ್ಲಿರುವ ಕೊಂಕಣ ರೈಲ್ವೇ ಅಭಿವೃದ್ಧಿ ಉದ್ದೇಶದಿಂದ ಮಂಗಳೂರು ಬಂದರು ಪ್ರದೇಶವನ್ನು ಕೊಂಕಣ ರೈಲ್ವೇ ವ್ಯಾಪ್ತಿಗೆ ಒಳಪಡಿಸುವ ಕುರಿತು ಕೇಂದ್ರ ರೈಲ್ವೇ ಸಚಿವರ ಜತೆ ಚರ್ಚಿಸಿದ್ದೇನೆ. ನೂತನ ಬೈಂದೂರು-ಕಾಸರಗೋಡು ರೈಲನ್ನು ಗುರುಧಿವಾಯೂರು ವರೆಗೆ ವಿಸ್ತರಿಸಿ 'ಮುರಳಿ-ಮುಕಾಂಬಿಕಾ' ರೈಲು ಎಂದು ನಾಮಕರಣ ಮಾಡುವ ಚಿಂತನೆಯಿದೆ. ಸಚಿವರೊಂದಿಗೆ ಮಾತನಾಡಿ ಶೀಘ್ರ ಅನುಧಿಷ್ಠಾನಗೊಳಿಸಲಾಗುವುದು ಎಂದು  ಹೇಳಿದರು.

ಬೈಂದೂರಿನಲ್ಲಿ ಮರುಸಾಗರ ಹಾಗೂ ಮಂಗಳ ಎಕ್ಸ್‌ಪ್ರೆಸ್‌ ರೈಲುಗಳನ್ನು ವಾರದ ಎಲ್ಲ ದಿನ ಗಳಲ್ಲಿ ನಿಲುಗಡೆಗೊಳಿಸುವ ಬಗ್ಗೆ ಅಧಿಕಾರಿಗಳೊಂದಿಗೆ ಮಾತನಾಡಿ ಕ್ರಮ ಕೈಗೊಳ್ಳುತ್ತೇನೆ ಎಂದರು.

ಉಡುಪಿ ಸಂಸದೆ ಶೋಭಾ ಕರಂದ್ಲಾಜೆ ಮಾತನಾಡಿ, ಕೊಂಕಣ ರೈಲ್ವೇ ಕರಾವಳಿಯ ಜೀವನಾಡಿ. ವಿದೇಶಗಳಲ್ಲಿ ಜನರು ರೈಲುಗಳನ್ನು ಸಮರ್ಪಕವಾಗಿ ಬಳಸುತ್ತಿದ್ದಾರೆ. ಉತ್ತರ ಭಾರತಕ್ಕೆ ಹೋಲಿಸಿದರೆ ದಕ್ಷಿಣ ಭಾರತದಲ್ಲಿ ರೈಲ್ವೇ ಬಳಕೆ ಕಡಿಮೆಯಾಗಿದೆ. ಅಭಿವೃದ್ಧಿಯ ಹಿತದೃಷ್ಟಿಯಿಂದ ಕೊಂಕಣ ರೈಲು ದ್ವಿಪಥಗೊಳ್ಳಬೇಕು. ಹಾಗೂ ವಿದ್ಯುದೀಕರಣಗೊಳ್ಳಬೇಕು ಎಂದರು.

ಜಿಲ್ಲಾ ಬಿಜೆಪಿ ಅಧ್ಯಕ್ಷ ತಿಂಗಳೆ ವಿಕ್ರಮಾರ್ಜುನ ಹೆಗ್ಡೆ, ಬೈಂದೂರು ಬಿಜೆಪಿ ಕ್ಷೇತ್ರಾಧ್ಯಕ್ಷ ಬಿ.ಎಂ. ಸುಕುಮಾರ ಶೆಟ್ಟಿ, ಜಿ.ಪಂ. ಶಿಕ್ಷಣ ಸ್ಥಾಯೀ ಸಮಿತಿ ಅಧ್ಯಕ್ಷೆ ಗೌರಿ ದೇವಾಡಿಗ, ಜಿ.ಪಂ. ಸದಸ್ಯರಾದ ಬಾಬು ಶೆಟ್ಟಿ, ಸುಪ್ರೀತಾ ದೀಪಕ್‌ ಕುಮಾರ್‌ ಶೆಟ್ಟಿ, ಗೀತಾಂಜಲಿ ಸುವರ್ಣ, ತಾ.ಪಂ. ಸದಸ್ಯರಾದ ರಾಜು ಪೂಜಾರಿ, ಪ್ರಸನ್ನ ಕುಮಾರ್‌ ಉಪ್ಪುಂದ,
ಕೊಲ್ಲೂರು ದೇವಸ್ಥಾನದ ಆಡಳಿತ ಧರ್ಮದರ್ಶಿ ಕೃಷ್ಣಪ್ರಸಾದ್‌ ಅಡ್ಯಂತಾಯ, ಯಡ್ತರೆ ಗ್ರಾ.ಪಂ. ಅಧ್ಯಕ್ಷ ನಾಗರಾಜ ಶೆಟ್ಟಿ ಬೈಂದೂರು ರೈಲ್ವೇ ಯಾತ್ರಿ ಸಂಘದ ಅಧ್ಯಕ್ಷ ವೆಂಕಟೇಶ ಕಿಣಿ ಉಪಸ್ಥಿತರಿದ್ದರು.

ಕೊಂಕಣ ರೈಲ್ವೇ ಸಿಎಂಡಿ ಭಾನುಪ್ರಕಾಶ್‌ ಥಯಾಲ್‌ ಅವರು ಸ್ವಾಗತಿಸಿದರು. ರಘುನಾಥ ನಾಯಕ್‌ ಕಾರ್ಯ ಕ್ರಮ ನಿರೂಪಿಸಿದರು. ಸಂಜಯ್‌ಗಾಪ್ತಾ ಅವರು ವಂದಿಸಿದರು.

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com