ರೈಲ್ವೇ ಸಂತ್ರಸ್ತರ ಪ್ರತಿಭಟನೆ: ಸಂಸದ, ಶಾಸಕರ ಭೇಟಿ

ಬೈಂದೂರು: ಕಂದಾಯ ಇಲಾಖೆ ಸರಕಾರದಿಂದ ಮಂಜೂರಾದ ಜಾಗದ ಗಡಿ ಗುರುತುಗಳನ್ನು ಗುರುತಿಸಿಕೊಡಬೇಕೆಂದು ಆಗ್ರಹಿಸಿ ಕಳೆದ ನಾಲ್ಕು ದಿನಗಳಿಂದ ರೈಲ್ವೆ ನಿರಾಶ್ರಿತರ ಹೋರಾಟ ಸಮಿತಿ ಬೈಂದೂರು ವಿಶೇಷ ತಹಶೀಲ್ದಾರರ ಕಛೇರಿ ಎದುರು ನಡೆಸುತ್ತಿರುವ ಅನಿರ್ಧಿಷ್ಟಾವಧಿ ಉಪವಾಸ ಸತ್ಯಾಗ್ರಹ ಸ್ಥಳಕ್ಕೆ ಶಿವಮೊಗ್ಗ ಲೋಕಸಭಾ ಸಂಸದ ಬಿ.ಎಸ್‌.ಯಡಿಯೂರಪ್ಪ ಹಾಗೂ ಬೈಂದೂರು ಶಾಸಕ ಕೆ.ಗೋಪಾಲ ಪೂಜಾರಿ ಭೇಟಿ ನೀಡಿದರು.

ಈ ಸಂದ‌ರ್ಭ ಮಾತನಾಡಿದ ಸಂಸದ ಯಡಿಯೂರಪ್ಪ ಬಡವರಿಗೆ ಅನ್ಯಾಯವಾಗುವುದನ್ನು ನಾನು ಯಾವತ್ತು ಸಹಿಸುವುದಿಲ್ಲ. ನ್ಯಾಯಕ್ಕಾಗಿ ಹೋರಾಡುವ ನಿಮ್ಮ ಜೊತೆ ಸದಾ ನಾನಿದ್ದೇನೆ ಈಗಾಗಲೇ ಜಿಲ್ಲಾಧಿಕಾರಿ ಹಾಗೂ ಸಹಾಯಕ ಕಮಿಷನರ್‌ ಜೊತೆ ಮಾತುಕತೆ ನಡೆಸಿದ್ದೇನೆ.ಕಾನೂನು ವ್ಯಾಪ್ತಿಯ  ಚೌಕಟ್ಟಿನಲ್ಲಿ  ಇತ್ಯರ್ಥಗೊಳಿಸುವ ಬಗ್ಗೆ ತಿಳಿಸಲಾಗಿದೆ ಎಂದರು. ಬೈಂದೂರು ಶಾಸಕ ಕೆ.ಗೋಪಾಲ ಪೂಜಾರಿ ಮಾತನಾಡಿ ಶೀಘ್ರದಲ್ಲಿ ಸಂಬಂಧಪಟ್ಟ ಇಲಾಖಾ ಅಧಿಕಾರಿಗಳ ಸಭೆ ನಡೆಸಿ ಬದಲಿ ಜಾಗ ನೀಡುವ ಬಗ್ಗೆ ಕ್ರಮ ಕೈಗೊಳ್ಳುತ್ತೇನೆ. ಜಿಲ್ಲಾಧಿಕಾರಿಗಳ ಮಾರ್ಗದರ್ಶನದಲ್ಲಿ ರೈಲ್ವೇ ಸಂತ್ರಸ್ಥರಿಗೆ ಸಮರ್ಪಕ ನ್ಯಾಯ ಒದಗಿಸುವ ಭರವಸೆ ನೀಡಿದರು.

ಬಳಿಕ ಪ್ರತಿಭಟನಾ ನಿರತರು ಶೀಘ್ರ ವ್ಯವಸ್ಥೆ ಕಲ್ಪಿಸುವವರೆಗೆ ಅಧಿಕಾರಿಗಳಿಗೆ ಸಮಯ ನೀಡುತ್ತೇವೆ ಹಾಗೂ ಸೂಕ್ತ ಸ್ಥಳ ಒದಗಿಸುವವರೆಗೆ ಉಪವಾಸ ಸತ್ಯಾಗ್ರಹ ಹಿಂಪಡೆಯುತ್ತೇವೆ ಎಂದು ರಾಘವೇಂದ್ರ ತಿಳಿಸಿದರು.

ಈ ಸಂದರ್ಭದಲ್ಲಿ ಸಹಾಯಕ ಕಮಿಷನರ್‌ ಚಾರುಲತಾ ಸೋಮಲ್‌, ಬೈಂದೂರು ವಿಶೇಷ ತಹಶೀಲ್ದಾರ್‌ ಹನುಮೇ ಗೌಡ, ವಲಯ ಅರಣ್ಯಾಧಿಕಾರಿ ಪ್ರಭಾಕರ ಕುಲಾಲ್‌, ಜಿಲ್ಲಾ ಬಿಜೆಪಿ ಅಧ್ಯಕ್ಷ ತಿಂಗಳೆ ವಿಕ್ರಮಾರ್ಜುನ ಹೆಗ್ಡೆ, ಕ್ಷೇತ್ರ ಬಿಜೆಪಿ ಅಧ್ಯಕ್ಷ ಸುಕುಮಾರ್‌ ಶೆಟ್ಟಿ, ರೈತ ಸಂಘದ ಅಧ್ಯಕ್ಷ ದೀಪಕ್‌ ಕುಮಾರ್‌ ಶೆಟ್ಟಿ, ಸದಾನಂದ ಉಪ್ಪಿನಕುದ್ರು, ಸದಾಶಿವ ಡಿ. ಪಡುವರಿ  ಹಾಜರಿದ್ದರು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com