ಬೈಂದೂರು: ಮನುಷ್ಯ ವೈಯುಕ್ತಿಕವಾಗಿ ಉತ್ತುಂಗಕ್ಕೇರಿದರೂ ಸಾಂಘಿಕ ವ್ಯವಸ್ಥೆಯಲ್ಲಿ ಬೆರೆಯುವ ಮನಸ್ಸು ಕಲೆಯಿಂದ ಮಾತ್ರ ಸಾಧ್ಯ.ರಂಗ ಭೂಮಿ ಕ್ಷೇತ್ರದಲ್ಲಿ ಬೈಂದೂರಿನ ಆಸಕ್ತಿ ಅಪ್ರತಿಮವಾಗಿದೆ. ಮೂರು ದಶಕಗಳಿಂದ ಗ್ರಾಮೀಣ ಭಾಗದಲ್ಲಿ ಹವ್ಯಾಸಿ ತಂಡವಾಗಿ ರೂಪುಗೊಂಡಿರುವ ಲಾವಣ್ಯ ಬೈಂದೂರಿನ ಸಾಂಸ್ಕೃತಿಕ ಮುಕುಟ ಎಂದು ಕಿರುತೆರೆ ನಟಿ ರಂಗಭೂಮಿ ಕಲಾವಿದೆ ಡಾ| ಸೀತಾ ಕೋಟೆ ಹೇಳಿದ್ದಾರೆ.
ಅವರು ಯಡ್ತರೆ ಗ್ರಾ.ಪಂ.ಸಹಯೋಗದಲ್ಲಿ ಬೈಂದೂರು ಶಾರದಾ ವೇದಿಕೆಯಲ್ಲಿ ಲಾವಣ್ಯ ರಂಗ ತರಂಗ- 2015ರ ಮೂರನೇ ದಿನದ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಆಗಮಿಸಿ ಈ ಮಾತುಗಳನ್ನಾಡಿದರು.
ದುಬಾೖ ಕರ್ನಾಟಕ ಸಂಘದ ಮಾಜಿ ಅಧ್ಯಕ್ಷ ಬಿ.ಜಿ. ಮೋಹನದಾಸ್ ಮಾತನಾಡಿ ಸೀಮಿತ ಸಂಪನ್ಮೂಲಗಳ ಸದ್ಬಳಕೆ ಹಾಗೂ ರಂಗಾಸಕ್ತಿಯೊಂದಿಗೆ ಬೆಳೆದ ಲಾವಣ್ಯದಿಂದ ಬೈಂದೂರಿನ ಕೀರ್ತಿ ವೃದ್ಧಿಸಿದೆ. ಮುಂದೆ ದುಬಾೖ ಸಂಘಗಳ ಸಹಕಾರದಿಂದ ಲಾವಣ್ಯ ನಾಟಕಗಳು ವಿದೇಶದಲ್ಲೂ ಪ್ರದರ್ಶನಗೊಳ್ಳಲಿಎಂದರು.
ರಂಗ ಕಲಾವಿದ ಗಣೇಶ ಗಾಣಿಗರನ್ನು ಸಮ್ಮಾನಿಸಲಾಯಿತು.ಲಾವಣ್ಯ ವ್ಯವಸ್ಥಾಪಕ ಗಣೇಶ ಕಾರಂತ ಅಧ್ಯಕ್ಷತೆ ವಹಿಸಿದ್ದರು. ರಂಗ ನಿರ್ದೇಶಕ ರಾಜೇಂದ್ರ ಕಾರಂತ ಬೆಂಗಳೂರು, ಶ್ರೀನಿವಾಸ ಪ್ರಭು, ರಾಮ ಟೈಲರ್, ಯೋಗೇಶ್ ಬಂಕೇಶ್ವರ, ಕಲಾವತಿ ನಾಗರಾಜ್ ಉಪಸ್ಥಿತರಿದ್ದರು.
ಯೋಗೇಶ ಬಂಕೇಶ್ವರ ಸ್ವಾಗತಿಸಿ, ಸುಬ್ರಹ್ಮಣ್ಯ ಉಪ್ಪುಂದ ಕಾರ್ಯಕ್ರಮ ನಿರೂಪಿಸಿದರು. ಗಿರೀಶ್ ಬೈಂದೂರು ವಂದಿಸಿದರು.
0 comments:
Post a Comment