ಮರವಂತೆ ಗ್ರಾಪಂಗೆ ಪರಿಶೀಲನಾ ತಂಡ

ಮರವಂತೆ: ಈ ಸಾಲಿನ ರಾಷ್ಟ್ರೀಯ ಗೌರವ ಗ್ರಾಮಸಭೆ ಪುರಸ್ಕಾರಕ್ಕೆ ರಾಜ್ಯ ಸರಕಾರ ಶಿಫಾರಸು ಮಾಡಿದ ಗ್ರಾಮ ಪಂಚಾಯಿತಿಗಳ ಪೈಕಿ ಮರವಂತೆ ಗ್ರಾಮ ಪಂಚಾಯಿತಿಗೆ ಕೇಂದ್ರ ಸರ್ಕಾರದಿಂದ ನಿಯೋಜಿತವಾದ ಪರಿಶೀಲನಾ ತಂಡ ಶನಿವಾರ ಭೇಟಿ ನೀಡಿತು. 

ಈ ತಂಡದಲ್ಲಿ ಕೇರಳದ ಕೊಟ್ಟಾಯಮ್‌ನಲ್ಲಿರುವ ಸೆಂಟರ್ ಫಾರ್ ರೂರಲ್ ಮ್ಯಾನೇಜ್‌ಮೆಂಟ್‌ನ ಹಿರಿಯ ಸಂಶೋಧನಾಧಿಕಾರಿಗಳಾದ ಅಬ್ದುಲ್ ರಹೀಮ್ ಮತ್ತು ಸರೀನ್ ಬಾಬು ಪಿ. ಕೆ. ಇದ್ದರು. 

ತಂಡವು ಅಧ್ಯಕ್ಷೆ ಕೆ.ಎ.ಸುಗುಣಾ, ಉಪಾಧ್ಯಕ್ಷೆ ಪ್ರೇಮಾ ಪೂಜಾರಿ, ಸದಸ್ಯರು, ಅಭಿವೃದ್ಧಿ ಅಧಿಕಾರಿ ಪೂರ್ಣಿಮಾ, ಕಾರ‌್ಯದರ್ಶಿ ಹರಿಶ್ಚಂದ್ರ ಆಚಾರ್ಯ, ಕರ ಸಂಗ್ರಾಹಕ ಶೇಖರ ಅವರೊಡನೆ ಚರ್ಚೆ ನಡೆಸಿ ಗ್ರಾಮ ಪಂಚಾಯಿತಿ ಚಟುವಟಿಕೆಗಳ ಕುರಿತು ಮಾಹಿತಿ ಸಂಗ್ರಹಿಸಿತು. ದಾಖಲೆಗಳನ್ನು ಪರಿಶೀಲಿಸಿ, ಅವುಗಳ ಪ್ರತಿಗಳನ್ನು ಸಂಗ್ರಹಿಸಿತು. ಹಿರಿಯ ಸದಸ್ಯ, ಮಾಜಿ ಅಧ್ಯಕ್ಷ ಎಸ್. ಜನಾರ್ದನ ಪಂಚಾಯಿತಿ ಸಂಘಟಿಸಿದ ವಸತಿ ಸಭೆ, ವಾರ್ಡ್‌ಸಭೆ, ವಾರ್ಷಿಕ ಗ್ರಾಮಸಭೆ, ಮಕ್ಕಳ ಗ್ರಾಮಸಭೆ, ಮಹಿಳಾ ಗ್ರಾಮಸಭೆ, ಮೀನುಗಾರರ ಗ್ರಾಮಸಭೆ, ಹೆದ್ದಾರಿ ವಿಸ್ತರಣಾ ಕಾಮಗಾರಿ ಬಾಧಿತರ ಗ್ರಾಮಸಭೆ ಮತ್ತು ದಲಿತ ಗ್ರಾಮಸಭೆಗಳ ವಿವರಣೆ ನೀಡಿದರು. ಗ್ರಾಮಸಭೆಯ ನಡವಳಿಗಳ ಅನುಪಾಲನೆಗೆ ಕೈಗೊಳ್ಳಲಾಗುತ್ತಿರುವ ಕ್ರಮಗಳನ್ನು ವಿವರಿಸಿದರು. ಸಾಮಾಜಿಕ ನ್ಯಾಯ ಪಾಲನೆ, ಮಾನವ ಅಭಿವೃದ್ಧಿ, ಆಡಳಿತದಲ್ಲಿ ಪಾರದರ್ಶಕತೆ ಮತ್ತು ಉತ್ತರದಾಯಿತ್ವಕ್ಕೆ ನೀಡಿದ ಒತ್ತು ಕುರಿತು ಮಾಹಿತಿ ನೀಡಿದರು. ಗ್ರಾಮ ಪಂಚಾಯಿತಿಗೆ ಈವರೆಗೆ ಬಂದ ನಿರ್ಮಲ ಗ್ರಾಮ ರಾಷ್ಟ್ರೀಯ ಪುರಸ್ಕಾರ, ರಾಷ್ಟ್ರೀಯ ಪಂಚಾಯತ್‌ರಾಜ್ ಸಬಲೀಕರಣ ಪುರಸ್ಕಾರ, ಗಾಂಧಿ ಗ್ರಾಮ ರಾಜ್ಯ ಪುರಸ್ಕಾರ, ರಜತ ನೈರ್ಮಲ್ಯ ಪ್ರಶಸ್ತಿ, ನಗದು ಬಹುಮಾನಗಳ ವಿಚಾರ ತಿಳಿಸಿದರು. 

ತಂಡದ ಸದಸ್ಯರು ನಡೆಸಿದ ಕ್ಷೇತ್ರ ಭೇಟಿಯ ವೇಳೆ ಗ್ರಾಮದಲ್ಲಿ ಕೈಗೊಳ್ಳಲಾದ ರಸ್ತೆ ಅಭಿವೃದ್ಧಿ ಕಾಮಗಾರಿ, ವೈಯಕ್ತಿಕ ಮತ್ತು ಶಾಲಾ ಶೌಚಾಲಯ ನಿರ್ಮಾಣ, ಕೇಂದ್ರೀಕತ ಸೋಲಾರ್ ಬೀದಿದೀಪ ಅಳವಡಿಕೆ, ಕೊರಗ ಕಾಲೊನಿ ಅಭಿವದ್ಧಿ ಕಾರ್ಯಗಳನ್ನು ಪರಿಶೀಲಿಸಿದರು. ಪಂಚಾಯಿತಿಯ ಸಮಗ್ರ ಸಾಧನೆಯ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com