ಚಂದ್ರ ಕೆ. ಹೆಮ್ಮಾಡಿಗೆ ರಾಜೇಶ್ ಶಿಬಾಜೆ ಪತ್ರಿಕೋದ್ಯಮ ಗೌರವ

ಉಡುಪಿ: ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ ವಿಜೇತ ಪತ್ರಕರ್ತ ರಾಜೇಶ ಶಿಬಾಜೆ ಸ್ಮರಣಾರ್ಥ ಪತ್ರಕರ್ತರ ವೇದಿಕೆ(ರಿ) ಬೆಂಗಳೂರು ಇದರ ಉಡುಪಿ ಜಿಲ್ಲಾ ಘಟಕ ನೀಡುವ 2011 ಮತ್ತು 2012 ರ ಪ್ರಶಸ್ತಿಯು ಕರಾವಳಿ ಅಲೆಯ ಉಪಸಂಪಾದಕ ಧನಂಜಯ ಗುರ್‍ಪುರ  ಮತ್ತು ಉದಯವಾಣಿಯ ವರದಿಗಾರ ಚಂದ್ರ ಕೆ. ಹೆಮ್ಮಾಡಿ ಅವರಿಗೆ ನೀಡಲಾಗುತ್ತಿದೆ ಎಂದು ವೇದಿಕೆಯ ಜಿಲ್ಲಾಧ್ಯಕ್ಷ ಶೇಖರ ಅಜೆಕಾರು ತಿಳಿಸಿದ್ದಾರೆ.
   2011 ಮತ್ತು 2012 ನೇ ಸಾಲಿನ ಗೌರವ ಪ್ರಶಸ್ತಿಯನ್ನು ಫೆ.15 ರಂದು ಬ್ರಹ್ಮಾವರದ ನಾರಾಯಣಗುರು ಸಭಾಭವನದಲ್ಲಿ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಚಿತ್ತೂರು ಪ್ರಭಾಕರ ಆಚಾರ್ಯರ ಉಡುಪಿ ಮಿತ್ರ ಪತ್ರಿಕೆಯ 15 ನೇ ವಾರ್ಷಿಕ ವಿಶೇಷ ಕಾರ್ಯಕ್ರಮದಲ್ಲಿ ಗಣ್ಯರ ಉಪಸ್ಥಿತಿಯಲ್ಲಿ ಮಧ್ಯಾಹ್ನ 1:30ಕ್ಕೆ ವಿತರಿಸಲಾಗುತ್ತಿದೆ.
    ಅಪೂರ್ವ ಧೈರ್ಯಶಾಲಿ ಪತ್ರಕರ್ತ ರಾಜೇಶ ಶಿಬಾಜೆ ಅವರು 25 ವರ್ಷ ಬದುಕಿ ನೆರಿಯ ಗ್ರಾಮದ ಸ್ವಾತಂತ್ರ್ಯ ಹೋರಾಟ ಆಂದೋಲನವನ್ನು ಜನವಾಹಿನಿ ಪತ್ರಿಕೆಯ ಮೂಲಕ ನಡೆಸಿ ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪಡೆದರು. ಆದರೆ ಅದನ್ನು ಸ್ವೀಕರಿಸಲು ಅವರು ಬದುಕಿರಲಿಲ್ಲ, ಕುದುರೆಮುಖದ ಅಪಘಾತವೊಂದರಲ್ಲಿ ನಿಧನರಾಗಿದ್ದರು. ಅವರ ಹೆಸರಲ್ಲಿ ಕ್ರಿಯಾಶೀಲ ಪತ್ರಕರ್ತರಿಗೆ ಈ ಗೌರವ ನೀಡಲಾಗುತ್ತಿದೆ.

ಚಂದ್ರ ಕೆ. ಹೆಮ್ಮಾಡಿ:
   ಕುಂದಾಪುರ ತಾಲೂಕಿನ ಹೆಮ್ಮಾಡಿಯಲ್ಲಿದ್ದುಕೊಂಡು ವೈವಿಧ್ಯಮಯ, ಮಾಹಿತಿಪೂರ್ಣ ವರದಿಗಳ ಮೂಲಕ ಗಮನಸೆಳೆದ ಪತ್ರಕರ್ತ ಚಂದ್ರ ಕೆ. ಹೆಮ್ಮಾಡಿ. 
   ಗ್ರಾಮೀಣ ಪತ್ರಿಕೋದ್ಯಮದಲ್ಲಿ ಸಾಧನೆ ಮಾಡಿದವರಿಗೆ ನೀಡಲಾಗುತ್ತಿರುವ ಈ ಪ್ರಶಸ್ತಿಯನ್ನು ಗ್ರಾಮೀಣ ಮತ್ತು ಸದಭಿರುಚಿಯ ವರದಿಗಳನ್ನು ಪ್ರಕಟಿಸಿ ಗಮನ ಸೆಳೆಯುತ್ತಿರುವ ಯುವ ಪತ್ರಕರ್ತ ಚಂದ್ರ ಕೆ. ಹೆಮ್ಮಾಡಿ ಅವರಿಗೆ ನೀಡಲಾಗುತ್ತಿದೆ. ಇವರು ತನ್ನ ಕಾರ್ಯವ್ಯಾಪ್ತಿಯ ಪ್ರದೇಶಗಳ ಕುಂದು ಕೊರತೆಗಳು, ವಿಶೇಷತೆ ಮತ್ತು ಪ್ರತಿಭೆಗಳ ಕುರಿತಾಗಿ ನಿರಂತರವಾಗಿ ವರದಿ ಮಾಡಿರುವುದಲ್ಲದೇ ಗ್ರಾಮೀಣ ಸೊಗಡು, ಸಂಸ್ಕೃತಿ ಹಾಗೂ ಸಾಮಾಜಿಕ ಕಳಕಳಿಯುಳ್ಳ ಲೇಖನಗನ್ನು ಪ್ರಕಟಿಸುವ ಮೂಲಕ  ಕ್ರೀಯಾಶೀಲ ಪತ್ರಕರ್ತರೆನಿಸಿಕೊಂಡಿದ್ದಾರೆ.
   ಎಂ. ಎ., ಬಿ. ಎಡ್ ಪದವಿಧರವಾಗಿರವ ಹೆಮ್ಮಾಡಿಯವರು ಪತ್ರಕರ್ತರಾಗಿ, ಕವಿಯಾಗಿ, ಲೇಖಕರಾಗಿ, ಗಾಯಕರಾಗಿ ಗುರುತಿಸಿಕೊಂಡಿದ್ದಾರೆ. ಕನ್ನಡದ ಉದಯವಾಣಿ, ವಿಜಯಕರ್ನಾಟಕ, ಜನವಾಹಿನಿ, ಕನ್ನಡ ಜನಾಂತರಂಗ ಮೊದಲಾದ ದಿನಪತ್ರಿಕೆಗಳು, ತರಂಗ, ಸುಧಾ, ಮಂಗಳ, ಕುಂದಪ್ರಭ ಮುಂತಾದ ವಾರಪತ್ರಿಕೆಗಳು, ಉತ್ಥಾನ, ಯುಗಪುರುಷ ಮತ್ತಿತರ ಮಾಸಪತ್ರಿಕೆಗಳಲ್ಲಿ ಕತೆ-ಕವನ, ಲೇಖನಗಳು, ಕಾಲೇಜು ಸಂಚಿಕೆ, ವಿಶೇಷ ಸಂಚಿಕೆಗಳಲ್ಲಿ ಇವರ ಬರಹಗಳು ಪ್ರಕಟಗೊಂಡಿವೆ.
  ಉಪ್ಪುಂದ ಜೇಸಿಐ 2012ರ ಸಾಧನಾಶ್ರೀ ಪ್ರಶಸ್ತಿಗೆ ಭಾಜನರಾಗಿರುವ ಇವರನ್ನು ಗಂಗೊಳ್ಳಿ ಮತ್ತು ಆಲೂರು ಮೊದಲಾದೆಡೆ ಸಂಘ-ಸಂಸ್ಥೆಗಳು ಸನ್ಮಾನಿಸಿ ಗೌರವಿಸಿವೆ. 2013ನೇ ಸಾಲಿನ ಉಡುಪಿ ಜಿಲ್ಲಾ ಸಂಕ್ರಾಂತಿ ಯುವ ಕವಿ ಗೋಷ್ಠಿಯ ಅಧ್ಯಕ್ಷತೆ, ಉತ್ಥಾನ ನಡೆಸಿದ ರಾಜ್ಯಮಟ್ಟದ ಕಥಾಸ್ಫರ್ಧೆಯಲ್ಲಿ ಬಹುಮಾನ. ಕುಂದಾಪುರ ತಾಲೂಕು ಸಾಹಿತ್ಯ ಪರಿಷತ್ ವತಿಯಿಂದ ನಡೆದ ಕಥಾಸ್ಫರ್ಧೆಯಲ್ಲಿ ಬಹುಮಾನ, ಜಿಲ್ಲಾ ಯುವಜನ ಮೇಳಗಳಲ್ಲಿ ಬಹುಮಾನ, ಮಂಗಳೂರು ಆಕಾಶವಾಣಿಯಲ್ಲಿ 13ಕ್ಕೂ ಹೆಚ್ಚು ಭಾವಗೀತ ಗಾಯನ ಕಾರ್ಯಕ್ರಮ, ಕವನವಾಚನ ಕಾರ್ಯಕ್ರಮ ಪ್ರಸಾರ, ಪ್ರಕಟಗೊಂಡ ವರದಿಗಳಿಗೆ ಅದ್ಭುತವಾದ ಸ್ಪಂದನೆ ಮುಂತಾದವುಗಳು ಇವರ ಸಾಧನೆಗೆ ಹಿಡಿದ ಕನ್ನಡಿಯಾಗಿದೆ.
    ಕುಂದಾಪುರ ತಾಲೂಕಿನ ಹೆಮ್ಮಾಡಿ ಗ್ರಾಮದ ಕಟ್ಟುವಿನಲ್ಲಿ ದಿ. ಕುಪ್ಪ ಮತ್ತು ಶ್ರೀಮತಿ ಸುಬ್ಬು ದಂಪತಿಗಳ ಮಗನಾಗಿ ಜನಿಸಿದ ಇವರು ಕಲೆ, ಸಂಗೀತ, ಸಾಹಿತ್ಯ, ಸಂಸ್ಕೃತಿ, ಕ್ರೀಡೆ ಮುಂತಾದವುಗಳು ಆಸಕ್ತಿ ಹೊಂದಿದ್ದು ಸಾಮಾಜಿಕ ಕಳಕಳಿ ಉಳ್ಳ ಪತ್ರಕರ್ತರೆನಿಸಿಕೊಂಡಿದ್ದಾರೆ.

ಧನಂಜಯ ಗುರ್‍ಪುರ:
ಮೂಡನಂಬಿಕೆ ಕುರಿತು ಮತ್ತು ಸಮಾಜದ ಅಂಕುಡೊಂಕುಗಳ ಕುರಿತು ತಮ್ಮ ನಿರ್ಭೀತ ಬರವಣಿಗೆಯಿಂದ ಮುಂಬಯಿಯಲ್ಲಿ ಮನೆ ಮಾತಾಗಿರುವ ಮತ್ತು ಕಳೆದ ಎಂಟು ವರ್ಷಗಳಿಂದ ಮಂಗಳೂರಿನ ಕರಾವಳಿ ಕಲೆಯಲ್ಲಿ ಉಪಸಂಪಾದಕರಾಗಿರುವ ಧನಂಜಯ ಗುರ್‍ಪುರ ಓರ್ವ ಕ್ರಿಯಾ ಶೀಲ ಪತ್ರಕರ್ತ.
ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಅವರು ಮುಂಬಯಿ ಸೇರಿ ಸಿಎ ಸಂಸ್ಥೆಯಲ್ಲಿ ಕೆಲಸ ಆರಂಭಿಸಿ ಕರ್ನಾಟಕ ಮಲ್ಲ ದಿನ ಪತ್ರಿಕೆಯಲ್ಲಿ ಉಪಸಂಪಾದಕರಾಗಿ ೧೫ ವರ್ಷ ಸೇವೆ 
ಸಲ್ಲಿಸಿದರು. ಮುಂಬಯಿಯ ಕನ್ನಡ ಭವನ ರಾತ್ರಿ ಪಿಯು ಕಾಲೇಜಿನಲ್ಲಿ ೩ ವರ್ಷ ಉಪನ್ಯಾಸಕರಾಗಿ ಕಾರ್ಯ ನಿರ್ವಹಿಸಿದರು. ಪತ್ರಿಕೆಯ ಅಂಕಣಗಳ ಮೂಲಕ ಮೌಢ್ಯಗಳ ವಿರುದ್ಧ ಸಮರ್ಥ ಹೋರಾಟ ನೀಡಿದವರು. ಯುವ ಪ್ರತಿಭಾ ವೇದಿಕೆ ಸೇರಿದಂತೆ ವಿವಿಧ ಸಂಘಟನೆಗಳಲ್ಲಿ ತೊಡಗಿರುವ ಅವರು ಉತ್ತಮ ಕವಿಗಳು, ವಿಮರ್ಶಕರು.
ಸಾಹಿತ್ಯ ಮತ್ತು ವಿಮರ್ಶೆ. ರಾಜಕೀಯ, ಕ್ರೀಡೆ ಮತ್ತು ಸಮಾಜಶಾಸ್ತ್ರ. ಅವರ ಆಸಕ್ತಿಯಾದರೆ, ಕವಿತೆ ಬರೆಯುವುದು. ಓದುವುದು ಅವರ ಹವ್ಯಾಸ.
ಸಾಹಿತ್ಯ ವಿದ್ಯಾರ್ಥಿಯಾಗಿದ್ದರೂ ರಾಜಕೀಯದಲ್ಲಿ ಆಸಕ್ತಿ ಬೆಳೆಸಿಕೊಂಡ ಅವರು ಅಸ್ತಿತ್ವವಾದದ ಮೇಲೆ ನಂಬಿಕೆ ಇಟ್ಟು ಕೊಂಡಿದ್ದು, ದೇವರ-ದೈವ-ದೆವ್ವ ಹೆಸರಿನಲ್ಲಿ ನಡೆಯುತ್ತಿರುವ ಮೂಢನಂಬಿಕೆ, ಅನಿಷ್ಠ ಪದ್ಧತಿ-ಆಚರಣೆ, ಕಾನೂನುಗಳ ‘ಬರೇ ಜಾರಿ ಮತ್ತು ಬಳಕೆಯಲ್ಲಿ ಸವೆತ’ ವಿಷಯದ ಮೇಲೆ ಕ್ಷ-ಕಿರಣ ಬೀರಲಾಗಿ, ಸಮಾಜದಲ್ಲಿ ಕಾಣುವ ಸತ್ಯದ ಮೇಲೆ ಸಾಮಾಜಿಕ ಕಳಕಳಿಯ ಕೆಲವಾರು ವಿಡಂಬನಾತ್ಮಕ ಲೇಖನ ಬರೆದಿದ್ದಾರೆ.
ಕಳೆದ ೨೫ ವರ್ಷಗಳಿಂದ ಪತ್ರಿಕಾರಂಗದಲ್ಲಿ ದುಡಿಯುತ್ತಿರು ಅವರು ಆಗಾಗ್ಗೆ ಕೆಲವು ಗಮನಾರ್ಹ ಲೇಖನ ಬರೆದಿದ್ದಾರೆ. . ವಸ್ತುನಿಷ್ಠ ಬರೆಹಕ್ಕೆ ಹೆಚ್ಚು ಆದ್ಯತೆ ನೀಡುವ ಅವರು ಬಹುತೇಕ ಎಲ್ಲ ಕ್ಷೇತ್ರಗಳ ಅಂಕುಡೊಂಕುಗಳ ಬಗ್ಗೆ ನಿರ್ಭೀತಿಯಿಂದ ಬರೆದಿದ್ದಾರೆ.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com