ಫೆ.26: ಯಕ್ಷಗಾನ ಅಕಾಡೆಮಿ ಪ್ರಶಸ್ತಿ ಪ್ರದಾನ

ಸಾಲಿಗ್ರಾಮ: ರಾಜ್ಯ ಯಕ್ಷಗಾನ ಬಯಲಾಟ ಅಕಾಡೆಮಿ ಕೊಡಮಾಡುವ 2012-13 ಮತ್ತು 14ನೇ ಸಾಲಿನ ಪಾರ್ತಿಸುಬ್ಬ ಪ್ರಶಸ್ತಿ ಹಾಗೂ ಗೌರವ ಪ್ರಶಸ್ತಿ ಪ್ರದಾನ ಸಮಾರಂಭ ಫೆ. 26ರಂದು ಸಾಲಿಗ್ರಾಮದ ಶ್ರೀ ಗುರುನರಸಿಂಹ ದೇವಳದ ಬಯಲು ರಂಗಮಂಟಪದಲ್ಲಿ ಸಂಜೆ 5 ಗಂಟೆಗೆ ನಡೆಯಲಿದೆ. 
   2012ನೇ ಸಾಲಿನ ಪಾರ್ತಿಸುಬ್ಬ ಪ್ರಶಸ್ತಿಯನ್ನು ಡಾ. ಶಿಮಂತೂರು ನಾರಾಯಣ ಶೆಟ್ಟಿ, 2013ನೇ ಸಾಲಿನ ಪ್ರಶಸ್ತಿಯನ್ನು ಎಂ.ಆರ್. ರಂಗನಾಥ ರಾವ್ ಹಾಗೂ 2014ನೇ ಸಾಲಿನ ಪುರಸ್ಕಾರವನ್ನು ಜಿ. ಎಸ್. ಭಟ್ಟ ಅವರಿಗೆ ಪ್ರದಾನ ಮಾಡಲಾಗುವುದು. ಪ್ರಶಸ್ತಿ ತಲಾ 1 ಲಕ್ಷ ರೂ. ನಗದು, ಪ್ರಶಸ್ತಿ ಪತ್ರವನ್ನೊಳಗೊಂಡಿದೆ. 
     ಇದೇ ಸಂದರ್ಭದಲ್ಲಿ 2013ನೇ ಸಾಲಿನ ಅಕಾಡೆಮಿ ಗೌರವ ಪ್ರಶಸ್ತಿಯನ್ನು ಯಕ್ಷಗಾನ ಸಾಧಕರುಗಳಾದ ಮಲ್ಪೆ ವಾಸುದೇವ ಸಾಮಗ, ಕಪ್ಪೆಕೆರೆ ಸುಬ್ರಾಯ ಭಾಗವತ, ಪ್ರೊ.ಎಸ್.ವಿ. ಉದಯ ಕುಮಾರ್ ಶೆಟ್ಟಿ, ಕೊಕ್ಕಡ್ತಿ ಕೃಷ್ಣಮೂರ್ತಿ, ಬಂಟ್ವಾಳ ಜಯರಾಮ ಆಚಾರ್ಯ, ಬಿ.ಎಂ. ನಿಂಬಗಲ್ಲು ರುದ್ರಯ್ಯ, ನಾರಾಯಣಪ್ಪ ಕಾರಿಗನೂರು, ಎ.ಎನ್. ಚನ್ನಬಸವಯ್ಯ, ಬಸವಲಿಂಗಪ್ಪ ಗುರುಬಸಪ್ಪ ವಿಭೂತೆ ಹಾಗೂ ಈಶ್ವರಚಂದ್ರ ಬೆಟಗೇರಿ ಅವರಿಗೆ ಪ್ರದಾನ ಮಾಡಲಾಗುವುದು. 
     2014ನೇ ಸಾಲಿನ ಗೌರವ ಪ್ರಶಸ್ತಿಯನ್ನು ಉದ್ಯಾವರ ಜಯ ಕುಮಾರ್, ಎಂ.ಎ. ನಾಯ್ಕ್, ಕೃಷ್ಣ ಭಂಡಾರಿ, ಮುದುಕಪ್ಪ ಹನುಮಪ್ಪ ಹೊಸೂರ, ಸತ್ಯಕ್ಕ, ಸಣ್ಣಪಾಲಯ್ಯ, ನೆಲ್ಲಿಗೆರೆ ತಿಮ್ಮಪ್ಪಾಚಾರ್, ಮಹದೇವಪ್ಪ ಅವರಾಧಿ, ಸಣ್ಣಬಸಣ್ಣ ಹಾಗೂ ಕರ್ನಾಟಕ ಸಾಂಸ್ಕೃತಿಕ ಕಲಾ ಪ್ರತಿಷ್ಠಾನ ಸಂಸ್ಥೆಗೆ ಪ್ರದಾನ ಮಾಡಲಾಗುವುದು. ಪ್ರಶಸ್ತಿ 10 ಸಾವಿರ ರೂ. ನಗದು, ಪ್ರಶಸ್ತಿಪತ್ರವನ್ನೊಳಗೊಂಡಿದೆ ಎಂದು ಅವರು ತಿಳಿಸಿದರು. 
    ಬೆಳಗ್ಗೆ 10 ಗಂಟೆಗೆ ಕಾರ್ಯಕ್ರಮವನ್ನು ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳದ ಅನುವಂಶಿಕ ಮೊಕ್ತೇಸರ ಹರಿನಾರಾಯಣ ಆಸ್ರಣ್ಣ ಉದ್ಘಾಟಿಸುವರು. ಅಕಾಡೆಮಿ ಅಧ್ಯಕ್ಷ ಬೆಳಗಲ್ಲು ವೀರಣ್ಣ ಅಧ್ಯಕ್ಷತೆ ವಹಿಸುವರು. 
   ಸಂಜೆ 5 ಗಂಟೆಗೆ ನಡೆಯುವ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ರಾಜ್ಯ ಕನ್ನಡ ಮತ್ತು ಸಂಸ್ಕೃತಿ ಸಚಿವೆ ಉಮಾಶ್ರೀ ಪ್ರಶಸ್ತಿ ಪ್ರದಾನ ಮಾಡುವರು. ಅಕಾಡೆಮಿ ಅಧ್ಯಕ್ಷ ಬೆಳಗಲ್ಲು ವೀರಣ್ಣ ಅಧ್ಯಕ್ಷತೆ ವಹಿಸುವರು ಎಂದು ಅಕಾಡೆಮಿ ಸದಸ್ಯರುಗಳಾದ ಅಂಬಾತನಯ ಮುದ್ರಾಡಿ ಹಾಗೂ ಪಿ. ಕಿಶನ್ ಹೆಗ್ಡೆ ಅವರು ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ,
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com