ಗ್ರಾಮಮಟ್ಟದಲ್ಲಿ ಕಸ್ತೂರಿರಂಗನ್ ವರದಿಯ ಸಾಧಕ ಬಾದಕಗಳ ಚರ್ಚೆ ನಡೆಸುತ್ತಿದ್ದೇವೆ: ಸಚಿವ ಸೊರಕೆ

ಬೈಂದೂರು: ಕಸ್ತೂರಿರಂಗನ್ ವರದಿಯ ಬಗೆಗೆ ಜನರಲ್ಲಿ ಸಾಕಷ್ಟು ತಪ್ಪು ಅಭಿಪ್ರಾಯಗಳಿವೆ. ಕಸ್ತೂರಿರಂಗನ್ ವರದಿಯ ಸಾಧಕ ಬಾಧಕ ಕುರಿತಂತೆ ಚರ್ಚೆ ಗ್ರಾಮ ಮಟ್ಟದಲ್ಲಿ ನಡೆಯಬೇಕು. ಬಳಿಕ ಸಚಿವ ಸಂಪುಟದ ಉಪ ಸಮಿತಿ ಏಪ್ರಿಲ್ ಮೊದಲ ವಾರದಲ್ಲಿ ಕೇಂದ್ರಕ್ಕೆ ಪೂರ್ಣ ವರದಿ ಸಲ್ಲಿಸಲಿದೆ ಎಂದು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ವಿನಯಕುಮಾರ ಸೊರಕೆ ತಿಳಿಸಿದ್ದಾರೆ. ಅವರು ಮಯ್ಯಾಡಿ ಶಾಲಾ ವಠಾರದಲ್ಲಿ ಕಸ್ತೂರಿರಂಗನ್ ವರದಿ ಕುರಿತಂತೆ ಬೈಂದೂರು ಗ್ರಾಮ ಪಂಚಾಯಿತಿ ಹಮ್ಮಿಕೊಂಡ ವಿಶೇಷ ಗ್ರಾಮಸಭೆಯಲ್ಲಿ  ಮಾತನಾಡಿದರು. 
ವರದಿಯ ಅನುಷ್ಠಾನದಿಂದ ವಿದ್ಯುತ್ ಉಷ್ಣ ಸ್ಥಾವರಗಳು, ಪರಿಸರಕ್ಕೆ ಹಾನಿಕಾರಕವಾದ ಕೆಂಪು ವರ್ಗದ ಕೈಗಾರಿಕೆಗಳು. 2,15,200ಅಡಿಗಿಂತಲೂ ಎತ್ತರದ ಕಟ್ಟಡಗಳು, ಹೊಸ ಗಣಿಗಾರಿಕೆ ಮತ್ತು ಮರಳುಗಾರಿಕೆ ಇಂತವುಗಳು ನಿಷೇಧಿಸಲ್ಪಡುವುದೇ ಹೊರತು ಮತ್ಯಾವುದಕ್ಕೂ ತೊಂದರೆ ಇಲ್ಲ. ವರದಿ ಬಗ್ಗೆ ತಪ್ಪು ಅಭಿಪ್ರಾಯ ಮೂಡಿಸಿದ್ದೇ ಈ ಗೊಂದಲಕ್ಕೆ ಕಾರಣ. ಆದ್ದರಿಂದ ವಿಶೇಷ ಗ್ರಾಮಸಭೆಗಳನ್ನು ಆಯೋಜಿಸಿ ಜನರಿಗೆ ಮಾಹಿತಿ ನೀಡುವ ಕೆಲಸ ಮಾಡುತ್ತಿದ್ದೇವೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಬೈಂದೂರು ಕ್ಷೇತ್ರದ ಶಾಸಕ ಗೋಪಾಲಪೂಜಾರಿ ಮಾತನಾಡಿ ಬೈಂದೂರು ನನ್ನ ಕಾರ್ಯಕ್ಷೇತ್ರ. ಮಾತ್ರವಲ್ಲದೇ ತಾಲೂಕು ಕೇಂದ್ರವಾಗಲಿರುವ ಪ್ರದೇಶ. ಕಸ್ತೂರಿ ರಂಗನ್ ವರದಿಯಂತೆ ಬೈಂದೂರಿನ ಹಳ್ಳಿಯನ್ನು ಪಶ್ಚಿಮ ಘಟ್ಟಗಳ ವ್ಯಾಪ್ತಿಗೆ ಸೇರಿಸಿದರೇ ತೊಂದರೆಯಾಗಲಿದೆ. ಕಂದಾಯ ಇಲಾಖೆ ಮತ್ತು ಅರಣ್ಯ ಇಲಾಖೆ ಜಂಟಿಯಾಗಿ ಮತ್ತೊಮ್ಮೆ ಸಮೀಕ್ಷೆ ಕೈಗೊಂಡು ನಿಖರವಾದ ವರದಿ ನೀಡುವುದು ಒಳಿತು ಎಂದರು.
ತಾ.ಪಂ ಸದಸ್ಯ ರಾಜು ಪೂಜಾರಿ ಮಾತನಾಡಿ ತಾಲೂಕು ಕೇಂದ್ರಸ್ಥಾನ ಸಾಕಷ್ಟು ಅಭಿವೃದ್ಧಿಯನ್ನು ಕಾಣಬೇಕಿದೆ. ಆದ್ದರಿಂದ ತಗ್ಗರ್ಸೆ ಗ್ರಾಮವನ್ನು ಕೈಬಿಟ್ಟಂತೆ ಈ ವರದಿಯಿಂದ ಬೈಂದೂರಿನ ನುಖ್ಯಾಡಿ ಮತ್ತು ಕ್ಯಾರ್ತೂರು ಹಳ್ಳಿಗಳನ್ನು ವರದಿಯಿಂದ ಕೈಬಿಡಬೇಕು ಎಂದು ಸೂಚಿಸಿದರು. ಗ್ರಾಮಸ್ಥರು ಇದಕ್ಕೆ ಅನುಮೂದಿಸಿದರು.
ಜಿ.ಪಂ. ಸದಸ್ಯರಾದ ಬಾಬು ಶೆಟ್ಟಿ, ರೈತ ಮುಖಂಡ ದೀಪಕ್ ಕುಮಾರ್ ಶೆಟ್ಟಿ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡರು. 
ಸಭೆಯಲ್ಲಿ ಜಿ.ಪಂ ಸದಸ್ಯೆ ಸುಪ್ರೀತಾ ದೀಪಕ್ ಕುಮಾರ್ ಶೆಟ್ಟಿ, ತಾ.ಪಂ ಸದಸ್ಯರಾದ ರಾಮ ಸೋಡಿತಾರ್, ಕುಂದಾಪುರದ ತಹಶೀಲ್ದಾರದಾದ ಗಾಯತ್ರಿ ನಾಯಕ್, ಅರಣ್ಯಾಧಿಕಾರಿ ಸತೀಶ್ ಬಾಬರ್, ವನ್ಯಜೀವಿ ವಿಭಾಗದ ಡಾ. ರಮೇಶ್, ಬೈಂದೂರು ಗ್ರಾ.ಪಂ ಅಧ್ಯಕ್ಷ ಜನಾರ್ಧನ, ವಿವಿಧ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಉಪಸ್ಥಿತರಿದ್ದರು. 
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com