ಕೋಣಿಯಲ್ಲಿ ಸಿಐಟಿಯು ಕಾರ್ಮಿಕರ ಸಮಾವೇಶ

ಕುಂದಾಪುರ: ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್ (ಸಿಐಟಿಯು) ಕುಂದಾಪುರ ತಾಲೂಕು ಸಮಿತಿ ನೇತೃತ್ವದಲ್ಲಿ ಸಿಐಟಿಯು ಗೆ ಸೇರ್ಪಡೆಗೊಂಡ ಕೋಣಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಕೋಣಿ, ಕಂದಾವರ ಗ್ರಾಮಗಳ - ಕಟ್ಟಡ ಮತ್ತು ಇತರೇ ನಿರ್ಮಾಣ ಕಾರ್ಮಿಕರು, ಹಂಚು ಕಾರ್ಖಾನೆ ಕಾರ್ಮಿಕರು, ಅಕ್ಷರ ದಾಸೋಹ, ಅಂಗನವಾಡಿ ನೌಕರರು, ಬೀಡಿ ಕಾರ್ಮಿಕರು ಹಾಗೂ ಮನೆ ನಿವೇಶನ ರಹಿತರ - ಬೃಹತ್ ಸಮಾವೇಶವು ಕೋಣಿಯ ವ್ಯವಸಾಯ ಸೇವಾ ಸಹಕಾರಿ ಸಂಘದ ಸಭಾಂಗಣದಲ್ಲಿ ನಡೆಯಿತು. 

ಸಿಐಟಿಯು ಕುಂದಾಪುರ ತಾಲೂಕು ಅಧ್ಯಕ್ಷ ಎಚ್. ನರಸಿಂಹ ಕಾರ್ಮಿಕರ ಬೃಹತ್ ಸಮಾವೇಶ ಉದ್ಘಾಟಿಸಿ ಮಾತನಾಡುತ್ತಾ ಸಿಐಟಿಯು ಕಾರ್ಮಿಕರ ಸಂಘಗಳ ಅಡಿಯಲ್ಲಿ ಗ್ರಾಮಾಂತರ ಪ್ರದೇಶದಲ್ಲಿರುವ ಕಾರ್ಮಿಕರು ಗ್ರಾಮದ ಮೂಲಭೂತ ಸೌಕರ್ಯಗಳನ್ನು ಹೊಂದಲು ಸ್ಥಳಿಯ ಸಂಸ್ಥೆಗಳ ವಿರುದ್ಧ ಸಂಘಟಿತ ಹೋರಾಟ ನಡೆಸಬೇಕು. ಕುಡಿಯುವ ನೀರು, ವಿದ್ಯುತ್ ದಾರಿ ದೀಪ, ರಸ್ತೆ ದುರಸ್ತಿ, ಪಡಿತರ ಚೀಟಿ ಬಗ್ಗೆ, ಮನೆ ನಿವೇಶನ ರಹಿತರಿಗೆ ಹಕ್ಕು ಪತ್ರ ಇತ್ಯಾದಿ ಬೇಡಿಕೆಗಳನ್ನು ಈಡೇರಿಸಲು ಸಿಐಟಿಯು ಹೋರಾಟ ಸಮಿತಿ  ನೇತೃತ್ವ ನೀಡುವುದು ಎಂದು ಹೇಳಿದರು. 
ಕೃಷಿ ಕೂಲಿಕಾರರ ಸಂಘದ ತಾಲೂಕು ಕಾರ್ಯದರ್ಶಿ ವೆಂಕಟೇಶ ಕೋಣಿ ಸಭೆಯನ್ನು ಉದ್ದೇಶಿಸಿ ಮಾತನಾಡಿ, ಕಳೆದ 2 ವರ್ಷಗಳಿಂದಲೂ ಮನೆ ನಿವೇಶನ ರಹಿತರು ನಿವೇಶನ ಕೋರಿ ಸಲ್ಲಿಸಿದ ಅರ್ಜಿಗಳನ್ನು ಕೋಣಿ ಗ್ರಾಮ ಪಂಚಾಯತ್ ಆಡಳಿತ ಈ ತನಕ ನಿವೇಶನ ರಹಿತರ ಅಂತಿಮ ಪಟ್ಟಿಯನ್ನು ಸಿದ್ಧಪಡಿಸದೇ ನಿಧಾನ ದ್ರೋಹ ಅನ್ಯಾಯ ವೆಸಗಿದ ಅಧಿಕಾರಿಗಳ ವರ್ತನೆಯನ್ನು ಖಂಡಿಸಿದರು. ನಿವೇಶನ ರಹಿತರ ಅಂತಿಮ ಪಟ್ಟಿ ಸಿದ್ಧ ಪಡಿಸಿ, ಮನೆ ನಿವೇಶನ ಸ್ಥಳ ಮಂಜೂರು ಮಾಡದ ಅಧಿಕಾರಿಗಳ ವರ್ತನೆ ಕಂಡಿಸಿ, ಕೋಣಿ ಗ್ರಾಮ ಪಂಚಾಯತ್ ಕಛೇರಿ ಎದುರು ಮಾರ್ಚ್ 26 ರಂದು ಸಿಐಟಿಯು ಹೋರಾಟ ಸಮಿತಿ ನೇತೃತ್ವದಲ್ಲಿ ಮನೆ ನಿವೇಶನ ರಹಿತರ ಬೃಹತ್ ಪ್ರತಿಭಟನೆ - ಸತ್ಯಾಗ್ರಹ ಹೋರಾಟ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು. 
    ಕೃಷಿ ಕೂಲಿ ಕಾರ್ಮಿಕರ ಮುಂಗಡರಾದ ನಾಗರತ್ನ ನಾಡ, ಕೋಣಿ ಶೇಖರ ಪೂಜಾರಿ, ಕೋಣಿ ಗಣಪತಿ ಶೇಟ್ ಕಟ್ಕೇರಿ, ರೇಷ್ಮಾ, ಸುಬ್ರಹ್ಮಣ್ಯ ಆಚಾರ್ ಕೋಣಿ, ಸಭೆಯಲ್ಲಿ ಉಪಸ್ಥಿತರಿದ್ದರು. 
    ಯು. ದಾಸ್ ಭಂಡಾರಿ ಸಭೆಯ ಅಧ್ಯಕ್ಷತೆ ವಹಿಸಿದ್ದರು. ವಿಜೇಂದ್ರ ಕೋಣಿ ವಂದಿಸಿದರು. ಕೋಣಿ ಗ್ರಾಮದ ಸಿಐಟಿಯು ಹೋರಾಟ ಸಮಿತಿಗೆ ಕೋಣಿ ಶೇಖರ ಪೂಜಾರಿ, ವಿಜೇಂದ್ರ ಕೋಣಿ, ಗಣಪತಿ ಶೇಟ್ ಕಟ್ಕೇರೆ, ಇವರ ಸಂಚಾಲಕತ್ವದಲ್ಲಿ 30ಮಂದಿ ಕಾರ್ಯಕಾರಿ ಸಮಿತಿ ಸದಸ್ಯರನ್ನು ಆಯ್ಕೆ ಮಾಡಲಾಯಿತು. 
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com