ಗಂಗೊಳ್ಳಿಯಲ್ಲಿ ವಿರಾಟ್ ಹಿಂದು ಸಂಗಮ: ರಾಜ್ಯ ಸರ್ಕಾರವನ್ನು ಪ್ರಶ್ನಿಸಿದ ಹಿಂಜಾವೇ

ನಮಗೆ ಹಿಂದುತ್ವವೇ ಎಲ್ಲವೂ ಆಗಿದೆ ಎಂದ ಹಿಂದು ಜಾಗರಣ ವೇದಿಕೆ ರಾಜ್ಯ ಸಂಚಾಲಕ ಜಗದೀಶ ಕಾರಂತ
ಗಂಗೊಳ್ಳಿ: ಭಾರತ ಹಿಂದುಗಳ ತಾಯ್ನೆಲ, ಹಿಂದು ರಾಷ್ಟ್ರ ಎಂಬುದು ವಿವಾದಗಳಿಗೆ ಕಾರಣವಾಗಿರುವ ಪರಿಸ್ಥಿತಿ ನಿರ್ಮಾಣವಾಗಿರುವುದು ನಮ್ಮ ದುರಂತ. ಹಿಂದುಗಳು ತಮ್ಮ ಹಬ್ಬಹರಿದಿನಗಳನ್ನು ಆಚರಿಸುವಂತೆ ಇಲ್ಲ. ಹಕ್ಕುಗಳನ್ನು ಪ್ರತಿಪಾದಿಸುವಂತೆಯೂ ಇಲ್ಲ. ಧಾರ್ಮಿಕ ಆಚರಣೆಗಳನ್ನು ಮಾಡಲು ಸಾಧ್ಯವಿಲ್ಲ ದುಸ್ಥಿತಿ ಹಿಂದು ಸಮಾಜದಲ್ಲಿ ನಿರ್ಮಾಣವಾಗಿದೆ. ಹೀಗಾಗಿ ಹಿಂದುಗಳಲ್ಲಿ ಧಾರ್ಮಿಕ ಭಕ್ತಿ, ಸಾಮಾಜಿಕ ಶಕ್ತಿ ನಿರ್ಮಾಣ ಮಾಡುವುದು ಅನಿವಾರ್ಯವಾಗಿದೆ. ಹಿಂದುತ್ವವೇ ಭಾರತದ ರಾಷ್ಟ್ರೀಯತೆ. ಹಿಂದುತ್ವವೇ ಆತ್ಮ, ಪ್ರಾಣ, ಉಸಿರು, ಹಿಂದುತ್ವ ಸ್ವಾಭಿಮಾನ ಸಂಕೇತ ಎಂದು ಹಿಂದು ಜಾಗರಣ ವೇದಿಕೆಯ ರಾಜ್ಯ ಸಂಚಾಲಕ ಜಗದೀಶ ಕಾರಂತ ಹೇಳಿದರು.
      ಅವರು ಗಂಗೊಳ್ಳಿಯ ಹಿಂದು ಜಾಗರಣ ವೇದಿಕೆ ಆಶ್ರಯದಲ್ಲಿ ೫೦೫ ಕಲಶಗಳ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆಯ ಅಂಗವಾಗಿ ಸ್ಥಳೀಯ ಸ.ವಿ.ಪದವಿಪೂರ್ವ ಕಾಲೇಜಿ ಮೈದಾನದಲ್ಲಿ ಜರಗಿದ ವಿರಾಟ್ ಹಿಂದು ಸಂಗಮ ಕಾರ್ಯಕ್ರಮದಲ್ಲಿ ಪ್ರಮುಖ ಭಾಷಣಕಾರರಾಗಿ ಮಾತನಾಡಿದರು.
    ರಾಜ್ಯದ ವಿವಿಧೆಡೆ ಹಿಂದು ಸಮಾವೇಶಗಳನ್ನು ಆಯೋಜಿಸಿ ಒಟ್ಟಾಗಿ ಮೆರವಣಿಗೆ ನಡೆಸಿದರೂ ಒಂದೇ ಒಂದು ಅಹಿತಕರ ಘಟನೆ ನಡೆದಿದಲ್ಲ. ಆದರೆ ಇತ್ತೀಚಿಗೆ ಶಿವಮೊಗ್ಗದಲ್ಲಿ ಪೊಪ್ಯೂಲರ್ ಫ್ರಂಟ್ ಆಫ್ ಇಂಡಿಯಾ ಸಂಘಟನೆ ನಡೆಸಿದ ಮೆರವಣಿಗೆ ಸಂದರ್ಭ ವ್ಯಾಪಕ ಹಿಂಸಾಚಾರ, ಗಲಭೆ, ಬೆಂಕಿ, ಲೂಟಿ ಸಾವು ನೋವು ಸಂಭವಿಸಿದೆ. ಹಿಂದುಗಳು ನಡೆಸುವ ಕಾರ್ಯಗಳ ಮೇಲೆ ವಿಧಿಸುವ ನಿರ್ಬಂಧವನ್ನು ಪೊಪ್ಯೂಲರ್ ಫ್ರಂಟ್ ಆಫ್ ಇಂಡಿಯಾ ಸಂಘಟನೆ ನಡೆಸುವ ಕಾರ್ಯಕ್ರಮದ ಮೇಲೆ ವಿಧಿಸಿದ್ದರೆ ಅಹಿತಕರ ಘಟನೆ ಸಂಭವಿಸುತ್ತಿರಲಿಲ್ಲ. ಲೂಟಿ ಹೊಡೆದ ಮೇಲೆ ಕೋಟೆ ಬಾಗಿಲು ಹಾಕಿದ್ದಂತಾಗಿದೆ ಎಂದು ಇಲಾಖೆಯ ಹಾಗೂ ಸರಕಾರದ ಕ್ರಮವನ್ನು ಅವರು ಬಲವಾಗಿ ಖಂಡಿಸಿದರು.
     ರಾಜ್ಯದ ವಿವಿಧೆಡೆ ನಡೆಯುತ್ತಿರುವ ಅಹಿತಕರ ಘಟನೆಗಳು ಅನಿರೀಕ್ಷಿತವಲ್ಲ. ಹಿಂದು ಸಮಾಜೋತ್ಸವವನ್ನು ನಿರ್ಬಂಧಿಸುವ, ಪ್ರವೀಣ್ ಬಾ ತೊಗಾಡಿರವರಿಗೆ ನಿಷೇಧ ಹೇರುವ ತೀರ್ಮಾನ ಪೊಲೀಸ್ ಇಲಾಖೆಯದ್ದಲ್ಲ. ಬದಲಾಗಿ ಇದು ಸರಕಾರದ ತೀರ್ಮಾನ. ಹಿಂದುಗಳು ಒಟ್ಟಾಗದಂತೆ ತಡೆಯಲು, ಹಿಂದುಗಳನ್ನು ಒಡೆಯಲು, ಹಿಂದುಗಳ ಹೋರಾಟವನ್ನು ಹತ್ತಿಕ್ಕಲು, ಒಂದು ಸಮುದಾಯವನ್ನು ತುಷ್ಟೀಕರಿಸಲು ಸರಕಾರ ಅನುಸರಿಸುತ್ತಿರುವ ಇಬ್ಬಗೆಯ, ದ್ವಂದ್ವ ನೀತಿಗಳನ್ನು ಟೀಕಿಸಿದ ಅವರು ಸರಕಾರ ಓಟಿನ ಆಸೆಗಾಗಿ ದೇಶದ್ರೋಹಿಗಳನ್ನು ರಕ್ಷಿಸುತ್ತಿದೆ. ತ್ಯಾಗ ಬಲಿದಾನ ಇಲ್ಲದೆ ಧರ್ಮ ದೇಶ ಉಳಿಯಲು ಸಾಧ್ಯವಿಲ್ಲ. ಮುಂದಿನ ದಿನಗಳಲ್ಲಿ ಇನ್ನಷ್ಟು ಕಠೋರ ದಿನಗಳು ಎದುರಾಗಲಿದ್ದು, ಈ ನಿಟ್ಟಿನಲ್ಲಿ ಸಮಸ್ತ ಹಿಂದು ಸಮಾಜ ಜಾಗೃತವಾಗಬೇಕಿದೆ ಎಂದರು.
     ಭಯೋತ್ಪಾದನಾ ಕೃತ್ಯಗಳಲ್ಲಿ ತೊಡಗಿಕೊಂಡವರಿಗೆ ರಕ್ಷಣೆ ನೀಡುತ್ತಿರುವ, ಭಯೋತ್ಪಾದನಾ ಕೃತ್ಯದ ಆರೋಪದಲ್ಲಿ ಬಂಧಿತರಾಗಿರುವ ಆರೋಪಿಗಳ ಕುಟುಂಬಗಳಿಗೆ ಆರ್ಥಿಕ ನೆರವು ನೀಡುವ ಸರಕಾರದ ಕ್ರಮವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡ ಅವರು ದಬ್ಬಾಳಿಕೆಯಿಂದ ಹಿಂದು ಸಮಾಜದ ಹಕ್ಕು ಕಸಿದುಕೊಳ್ಳುವ ಪ್ರಯತ್ನವನ್ನು ಸರಕಾರ ಮಾಡುತ್ತಿದೆ. ನಮ್ಮನ್ನು ಆಳುವವರು ಭಯೋತ್ಪಾದಕ, ದೇಶ ದ್ರೋಹಿಗಳಿಗೆ ಕುಮ್ಮಕ್ಕು ನೀಡುತ್ತಿದ್ದರೆ ದೇಶವನ್ನು ರಕ್ಷಣೆ ಮಾಡುವವರು ಯಾರು ಎಂದು ಪ್ರಶ್ನಿಸಿದ ಅವರು ಜೆಹಾದ್ ಹೆಸರಿನಲ್ಲಿ ಭಾರತದ ನೆಲದಲ್ಲಿ ಇಸ್ಲಾಮಿನ ಹೆಸರಿನಲ್ಲಿ ಬಾಂಬ್ ಸ್ಫೋಟಿಸಿ ಗಲಭೆ ಸೃಷ್ಟಿಸಲಾಗುತ್ತಿದೆ. ಭಯೋತ್ಪಾದನೆ ಹೆಸರಿನಲ್ಲಿ ಬಂಧಿತರಾದವರು ಅಮಾಯಕರು ಎಂದು ಸರ್ಟಿಫಿಕೇಟ್ ಕೊಡಲು ರಾಜ್ಯದ ಗೃಹ ಸಚಿವ ಜಾರ್ಜ್ ಯಾರು ಎಂದು ಪ್ರಶ್ನಿಸಿ ಅವರು, ಇದನ್ನು ನಿರ್ಧರಿಸಲು ನ್ಯಾಯಾಲಯ ಇದೆ ಎಂದು ಖಾರವಾಗಿ ಹೇಳಿದ ಅವರು ಒಂದು ಸಮಾಜದ ಓಲೈಕೆಗಾಗಿ ಅಮಾಯಕರ ಹೆಸರಿನಲ್ಲಿ ಬಂಧಿತರನ್ನು ಬಿಡುಗಡೆ ಮಾಡಲಾಗುತ್ತಿದೆ ಎಂದು ಅವರು ಆರೋಪಿಸಿದರು.
      ಭಯೋತ್ಪಾದನೆಯ ತಾಣವಾಗಿರುವ ಭಟ್ಕಳ ದೇಶದ್ರೋಹಿಗಳ ತಾಯ್ನೆಲ ಎಂದ ಅವರು ಮುಂದಿನ ದಿನಗಳಲ್ಲಿ ಗಂಗೊಳ್ಳಿ ಇನ್ನೊಂದು ಭಟ್ಕಳ ಆಗದಂತೆ ಹಿಂದು ಸಮಾಜ ಜಾಗೃತಗೊಂಡು ಯಾವ ಬೆಲೆಯನ್ನಾದರೂ ತೆತ್ತು, ನಿಷೇಧ, ನಿರ್ಬಂಧ ಅಡ್ಡಿ ಆತಂಕಗಳು ಬಂದರು ಎದೆಗುಂದದೆ ಗಂಗೊಳ್ಳಿಯನ್ನು ಕಾಪಾಡುವ, ಹೊಣೆಗಾರಿಕೆ ಜವಾಬ್ದಾರಿ ನಮ್ಮ ಮೇಲಿದೆ. ಹಿಂದು ಸಮಾಜದ ಜಾಗೃತಿಯೇ ಹಿಂದು ಜಾಗರಣ ವೇದಿಕೆ ಉದ್ದೇಶ, ಹಿಂದು ಧರ್ಮ, ಹಿಂದು ಸಮಾಜ, ಹಿಂದು ಸಂಸ್ಕೃತಿ, ಭಾರತ ಮಾತೃ ಭೂಮಿ ಹಾಗೂ ಭಾರತ ಹಿಂದುಸ್ಥಾನ ಎಂಬ ಭಾವನೆಯನ್ನು ಹಿಂದುಗಳ ಹೃದಯದಲ್ಲಿ ಜಾಗೃತಗೊಳಿಸುವ ಆಂದೋಲನವೇ ಹಿಂದು ಜಾಗರಣ ವೇದಿಕೆ. ಹಿಂದು ಸಮಾಜ ಜಾಗೃತವಾಗಬೇಕು, ಸಂಘಟಿತವಾಗಬೇಕು ಸಮಾಜವನ್ನು ರಕ್ಷಿಸುವ ಕೆಲಸ ಮಾಡಬೇಕು ಎಂದು ಅವರು ಹೇಳಿದರು.
     ಸಮಾರಂಭದಲ್ಲಿ ಆಶೀರ್ವಚನ ನೀಡಿ ಮಾತನಾಡಿದ ಗುರುಪುರ ಶ್ರೀ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ, ನಾವು ನಮ್ಮಲ್ಲಿನ ಜಾತಿಯನ್ನು ಕಿತ್ತೊಗೆದು ಒಟ್ಟಾಗಿ, ರಾಜಕೀಯ ಷಡ್ಯಂತ್ರವನ್ನು ಬದಿಗೊತ್ತಿ ಸಂಘಟಿತರಾಗಬೇಕಿದೆ. ರಾಜಕೀಯ ದಾಸ್ಯದ ಪ್ರಭಾವದಿಂದ ಹಿಂದುಗಳಿಗೆ ಬರಗಾಲ ಬಂದಂತಾಗಿದೆ. ಸರಕಾರದ ಅಲ್ಪಸಂಖ್ಯಾತ ಸಮುದಾಯಕ್ಕೆ ಅನೇಕ ಯೋಜನೆಗಳನ್ನು ನೀಡುತ್ತಿದ್ದರೂ ಹಿಂದು ಸಮಾಜಕ್ಕೆ ಯಾವುದೇ ಯೋಜನೆ ನೀಡುತ್ತಿಲ್ಲ ಎಂದು ಸರಕಾರದ ಶಾದಿಭಾಗ್ಯ ಯೋಜನೆಯನ್ನು ಟೀಕಿಸಿದರು. 
    ಚಾರ್ಜ್ ಇಲ್ಲದ ರಾಜ್ಯದ ಗೃಹ ಸಚಿವ ಜಾರ್ಜ್‌ನಿಂದ ಇಲಾಖೆ ಮಲಗಿದೆ. ಸರಕಾರಕ್ಕೆ ಲಂಗು ಲಗಾಮಿಲ್ಲ. ಸರಕಾರ ಹಿಂದುಗಳ ಸರಕಾರ ಎಂದು ಹೇಳುತ್ತಿರುವುದು ಹಾಸ್ಯಾಸ್ಪದ ಎಂದು ಲೇವಡಿ ಮಾಡಿದ ಶ್ರೀಗಳು ಹಿಂದು ಶಾಸಕರಿದ್ದೂ ಇಲ್ಲದಂತಾಗಿದ್ದಾರೆ. ಸಮಾಜೋತ್ಸವ ನಡೆಸಲು ನಿರ್ಬಂಧ ನಿಷೇಧ ಹೇರಲಾಗುತ್ತಿದೆ ಇನ್ಸ್‌ಪೆಕ್ಟರ್ ಮಲ್ಲಿಕಾರ್ಜುನ ಬಂಡೆ ಸಾವಿನ ತನಿಖೆ ಇನ್ನೂ ನಡೆದಿಲ್ಲ. ಸಮಾಜದ ಏಳು ಬೀಳು, ಏರುಪೇರುಗಳನ್ನು ಹೇಳಲು ಪ್ರವೀಣ್ ತೊಗಾಡಿಯಾ ಆಗಮಿಸುತ್ತಿದ್ದರೂ ಅವರಿಗೆ ನಿಷೇಧ ಹೇರುವ ಕೆಲಸವನ್ನು ಸರಕಾರ ಮಾಡುತ್ತಿದೆ. ನಕ್ಸಲವಾದಿಗಳನ್ನು ಬೆಂಬಲಿಸುತ್ತಿರುವ ಸರಕಾರ ನಕ್ಸಲ್ ಚಟುವಟಿಕೆಯಲ್ಲಿದ್ದವರನ್ನು ಕೆಂಪು ಹಾಸನ್ನು ಹಾಸಿ ಸ್ವಾಗತಿಸುವ ಮೂಲಕ ದಾಸ್ಯದ ರಾಜಕಾರಣ ಮಾಡುತ್ತಿದೆ ಎಂದರು.
    ಹಿಂದುಗಳು ಜಾತಿಯನ್ನು ಬಿಟ್ಟು ಒಂದೆಡೆ ಸಂಘಟಿತರಾದರೆ ಎಲ್ಲರೂ ಮಕಾಡೆ ಮಲಗಬೇಕಾಗುತ್ತದೆ. ಹಿಂದು ಸಂಘಟಿತರಾಗದಿದ್ದರೆ ಭವಿಷ್ಯದ ಭಾರತಕ್ಕೆ ದೃಢತೆ ಇಲ್ಲ. ಹಿಂದುಗಳು ಎಂದೂ ಹಿಂಸೆ ಮಾಡುವುದಿಲ್ಲ. ಹಿಂದುಗಳ ಮೇಲೆ ಹಿಂಸೆ ಆದರೆ ದೌರ್ಜನ್ಯ ನಡೆದರೆ ಅದನ್ನು ಎದುರಿಸಲು ಸಿದ್ಧರಿದ್ದಾರೆ. ಆದುದರಿಂದ ಸಮಸ್ತ ಹಿಂದುಗಳು ಒಂದಾಗುವ ಸಂಘಟಿತರಾಗುವ ಕಾಲ ಬಂದೊದಗಿದೆ ಎಂದು ಅವರು ಹೇಳಿದರು.
    ಬಳ್ಳಾರಿಯ ಉದ್ಯಮಿ ಕೊತ್ವಾಲ್ ಪದ್ಮನಾಭ ಶೇರುಗಾರ್ ಅಧ್ಯಕ್ಷತೆ ವಹಿಸಿದ್ದರು. ಪುರೋಹಿತರಾದ ವೇದಮೂರ್ತಿ ಜಿ.ವೇದವ್ಯಾಸ ಕೆ.ಆಚಾರ್ಯ, ಕಂಚುಗೋಡು ಶ್ರೀ ರಾಮ ದೇವಸ್ಥಾನದ ಅಧ್ಯಕ್ಷ ಮಡಿ ಶಂಕರ ಖಾರ್ವಿ, ಗಂಗೊಳ್ಳಿ ವಲಯ ನಾಡದೋಣಿ ಮೀನುಗಾರರ ಸಂಘದ ಅಧ್ಯಕ್ಷ ಮಂಜು ಬಿಲ್ಲವ, ಗಂಗೊಳ್ಳಿ ಶ್ರೀ ಇಂದುಧರ ದೇವಸ್ಥಾನದ ಮೊಕ್ತೇಸರ ಜಿ.ಟಿ.ಸಂಜೀವ, ಗೋಪಾಲ ಗಾಣಿಗ ಬೆಂಗಳೂರು, ಬೆಣ್ಗೆರೆ ಶ್ರೀ ನಾಗ ದೇವಸ್ಥಾನದ ಅಧ್ಯಕ್ಷ ಉಮೇಶ ಎಲ್.ಮೇಸ್ತ, ಗಂಗೊಳ್ಳಿ ಗ್ರಾಮ ಪಂಚಾಯತ್ ಅಧ್ಯಕ್ಷೆ ರೇಷ್ಮಾ ಆರ್.ಖಾರ್ವಿ ಉಪಸ್ಥಿತರಿದ್ದರು.
    ಗಂಗೊಳ್ಳಿ ಹಿಂದು ಜಾಗರಣ ವೇದಿಕೆ ಅಧ್ಯಕ್ಷ ಗೋವಿಂದ್ರಾಯ ಶೇರುಗಾರ್ ಸ್ವಾಗತಿಸಿ, ಸುಂದರ ಬಿ. ಕಾರ್ಯಕ್ರಮ  ನಿರೂಪಿಸಿದರು. ರಾಘವೇಂದ್ರ ಗಾಣಿಗ ವಂದಿಸಿದರು. ಕಾರ್ಯಕ್ರಮಕ್ಕೂ ಮುನ್ನ ಗಂಗೊಳ್ಳಿಯ ಶ್ರೀ ರಾಮ ಮಂದಿರದ ಬಳಿಯಿಂದ ಶ್ರೀ ವೀರೇಶ್ವರ ದೇವಸ್ಥಾನದ ವರೆಗೆ ಆಕರ್ಷಕ ಶೋಭಾಯಾತ್ರೆ ನಡೆಯಿತು. 
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com