ತಾಲೂಕು ವಿಚಾರದಲ್ಲಿ ಸರಕಾರ ಮಾತು ತಪ್ಪಿದೆ: ಕೋಟ ಶ್ರೀನಿವಾಸ ಪೂಜಾರಿ

ಕುಂದಾಪುರ: ಬೈಂದೂರು ಮತ್ತು ಬ್ರಹ್ಮಾವರವನ್ನು ಈ ಬಜೆಟ್ ತಾಲೂಕನ್ನಾಗಿ ಘೋಷಿಸುವ ಭರವಸೆ ನೀಡಿದ್ದ ಸಚಿವರು ತಮ್ಮ ಮಾತಿಗೆ ತಪ್ಪಿದ್ದಾರೆ. ಬಜೆಟ್ ಕುರಿತ ಚರ್ಚೆಯ ಸಮಯದಲ್ಲಾದರೂ ಮುಖ್ಯಮಂತ್ರಿಗಳು ತಾಲೂಕು ಘೋಷಣೆಯನ್ನು ಮಾಡಬೇಕು ಎಂದು ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ. 

 ಕುಂದಾಪುರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಸರಕಾರವಿದ್ದಾಗ ಘೋಷಿಸಿದ್ದ  43 ಹೊಸ ತಾಲೂಕುಗಳನ್ನು ತಡೆಹಿಡಿದಿದ್ದ ಸಿದ್ಧರಾಮಯ್ಯನವರ ಸರಕಾರ ಈ ಬಜೆಟ್ ನಲ್ಲಾದರೂ ಘೋಷಿಸಬಹುದೆಂಬ ನಿರೀಕ್ಷೆ ಇತ್ತು.  ಬಜೆಟ್ ಮಂಡನೆಗೆ ಮೊದಲು ಬ್ರಹ್ಮಾವರ, ಬೈಂದೂರಿನ ನಿಯೋಗ ಮನವಿ ಸಲ್ಲಿಸಿತ್ತು. ಆದರೆ ಇದ್ಯಾವುದಕ್ಕೂ ಸ್ಪಂದಿಸದೇ ಅನ್ಯಾಯವೆಸಗಿದ್ದಾರೆ ಎಂದು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು.

ಎಲ್ಲಾ ವರ್ಗದವರನ್ನೂ ಗಮನದಲ್ಲಿಟ್ಟುಕೊಂಡು ಬಜೆಟ್ ಮಂಡಿಸಿರುವುದು ಸ್ವಾಗತಾರ್ಹವಾದರೂ, ಕಳೆದ ಬಜೆಟ್ ನ ಹಲವು ಯೋಜನೆಗಳೇ ಯಶಸ್ವೀಯಾಗಿ ಅನುಷ್ಠಾನಗೊಳ್ಳದಿರುವಾಗ ಈ ಬಜೆಟ್ ನ ಯೋಜನೆಗಳು ಹೇಗೆ ಅನುಷ್ಠಾನಗೊಳ್ಳುತ್ತದೆ ಎಂದು ಪ್ರಶ್ನಿಸಿದರು. ಒಂದೆಡೆ ಬಡವರಿಗೆ ಉಚಿತ ಅಕ್ಕಿ ನೀಡುತ್ತೇವೆ ಎಂದಿದ್ದಾರೆ. ಮತ್ತೊಂದೆಡೆ ಪಡಿತರ ಚೀಟಿಯನ್ನು ಬ್ಲಾಕ್ ಮಾಡಲಾಗುತ್ತಿದೆ. ಇದು ಸರಿಯಲ್ಲ ಎಂದರು

 ಕುಂದಾಪುರ ತಾಪಂ ವ್ಯವಸ್ಥೆ ಹದಗೆಡಿಸುವ ಪ್ರಯತ್ನ ನಡೆಸುತ್ತಿರುವ ಜಿಲ್ಲಾಡಳಿತದ ವಿರುದ್ಧ ಬಿಜೆಪಿ ಹೋರಾಟ ನಡೆಸಲಿದೆ ಎಂದು ಅವರು ತಿಳಿಸಿದರು. ಪಂಚಾಯಿತಿರಾಜ್ ಕಾಯಿದೆ 143 ಪ್ರಕಾರ ವಿಶೇಷ ಸಂದರ್ಭದಲ್ಲಿ ಅಧಿಕಾರಿಗಳು ಸಭೆಗೆ ಹಾಜರಾಗಿ ಉತ್ತರಿಸಬೇಕೆಂಬ ನಿಯಮವನ್ನು ಸಾರಾಸಗಟಾಗಿ ಉಲ್ಲಂಘಿಸಿರುವ ಜಿಲ್ಲಾಧಿಕಾರಿ ತಾಪಂ ವ್ಯವಸ್ಥೆಗೆ ಅಗೌರವ ತೋರುತ್ತಿದ್ದಾರೆ. ವಿವಾದ ತಿಳಿಗೊಳಿಸಬೇಕಾಗಿರುವ ಉಸ್ತುವಾರಿ ಮಂತ್ರಿ ಮೌನ ವಹಿಸಿ ದ್ದಾರೆ. ಜಿಲ್ಲಾಧಿಕಾರಿಯವರು ಪ್ರಜಾಪ್ರಭುತ್ವ, ಪಂಚಾಯಿತಿರಾಜ್ ವ್ಯವಸ್ಥೆಯನ್ನು ಲಘುವಾಗಿ ಕಾಣುವುದನ್ನು ಪಕ್ಷ ಸಹಿಸುವುದಿಲ್ಲ ಎಂದರು. 

ಸುದ್ದಿಗೋಷ್ಠಿಯಲ್ಲಿ ರಾಜ್ಯ ಬಿಜೆಪಿ ಮೀನುಗಾರರ ಪ್ರಕೋಷ್ಠ ಸಂಚಾಲಕ ಕಿಶೋರ್ ಕುಮಾರ್, ಕುಂದಾಪುರ ಕ್ಷೇತ್ರ ಬಿಜೆಪಿ ಅಧ್ಯಕ್ಷ ರಾಜೇಶ್ ಕಾವೇರಿ, ಮುಖಂಡರಾದ ಚಂದ್ರ ಅಮೀನ್, ಮಹೇಶ್ ಪೂಜಾರಿ ಉಪಸ್ಥಿತರಿದ್ದರು. 
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com