ಪುರಸಭೆ ಸಾಮಾನ್ಯ ಸಭೆಯಿಂದ ಹೊರನಡೆದ ಆಡಳಿತ ಪಕ್ಷದ ಸದಸ್ಯರು

ಕುಂದಾಪುರ: ಇಲ್ಲಿನ ಪುರಸಭೆ ಸಭಾಂಗಣದಲ್ಲಿ ಜರುಗಿದ ಸಾಮಾನ್ಯ ಸಭೆಯು ಸಂಬಂಧಿತ ವಿಚಾರ ಕೇಂದ್ರಿತವಾಗಿರದೇ ಅಧ್ಯಕ್ಷರ ಪ್ರತಿಷ್ಠೆ, ಸದಸ್ಯರ ಆರೋಪ ಪ್ರತ್ಯಾರೋಪಗಳಿಗೆ ತುತ್ತಾಯಿತು. ಅಕ್ರಮ ಗೂಡಂಗಡಿ ತೆರವು ಪ್ರಕರಣವು ಸಭೆಯ ಕೊನೆಯವರೆಗೂ ಪ್ರತಿಧ್ವನಿಸಿದ್ದಲ್ಲದೇ ಆಡಳಿತ ಪಕ್ಷದ 13 ಕಾಂಗ್ರೆಸ್ ಬೆಂಬಲಿತ ಸದಸ್ಯರು ಅಧ್ಯಕ್ಷರ ಮಾತಿನಿಂದ ಆಕ್ರೋಶಗೊಂಡು ಸಭೆಯಿಂದ ಹೊರನಡೆದ ಪ್ರಕರಣ ನಡೆಯಿತು.
ಪುರಸಭಾ ಅಧ್ಯಕ್ಷೆ ಕಲಾವತಿ ಅಕ್ರಮ ಗೂಡಂಗಡಿ ವಿಚಾರವನ್ನು ಪ್ರಸ್ತಾವಿಸಿ ನಿರ್ಣಯ ಕೈಗೊಳ್ಳಲು ತಿಳಿಸಿದಾಗ ಪುರಸಭಾ ಸದಸ್ಯೆ ಪುಪ್ಪ ಶೇಟ್ ಮಾತನಾಡಿ, ಅಕ್ರಮ ಗೂಡಂಗಡಿಗಳನ್ನು ತೆರವುಗೊಳಿಸಲು ಸಾಕಷ್ಟು ಬಾರಿ ತಿಳಿಸಲಾಗಿತ್ತು. ಆದರೂ ಈವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದರು. ನಮ್ಮ ವಾರ್ಡಗಳಲ್ಲೂ ಇಂತಹ ಸಮಸ್ಯೆ ಸಾಕಷ್ಟಿವೆ ಈ ಬಗ್ಗೆಯೂ ಕ್ರಮ ಕೈಗೊಳ್ಳಬೇಕು ಮತ್ತು ಈ ಹಿಂದೆ ನೀಡಿರುವ ದೂರುಗಳು ಏನಾದವು ಎಂಬುದನ್ನೂ ಅಧ್ಯಕ್ಷರು ತಿಳಿಸಬೇಕು ಎಂದು ಆಗ್ರಹಿಸಿದರು. ಸದಸ್ಯರಾದ ಶ್ರೀಧರ ಶೇರೆಗಾರ್, ಚಂದ್ರಶೇಖರ ಖಾರ್ವಿ ಧ್ವನಿಗೂಡಿಸಿದರು.
ಈ ನಡುವೆ ಸದಸ್ಯ ರಾಜೇಶ್ ಕಾವೇರಿ ಮಾತನಾಡಿ ಯಾವುದೋ ಒಂದು ವಿಚಾರವನ್ನಿಟ್ಟುಕೊಂಡು ಗೂಡಂಗಡಿ ವಿಚಾರವನ್ನು ಮುಂದಿಟ್ಟಕೊಂಡು ಬಡವರ ಮೇಲಿನ ಸವಾರಿ ತರವಲ್ಲ. ನಾವು ಈ ಹಿಂದೆ ನೀಡಿದ ದೂರಗಳ ಬಗ್ಗೆ ಯಾಕೆ ಗಮನಹರಿಸಿಲ್ಲ. ಇಲ್ಲಿ ಪುರಸಭೆಯ ಎಲ್ಲಾ ಸದಸ್ಯರ ಮಾತುಗಳನ್ನು ಒಪ್ಪುವ ಬದಲಿಗೆ ಕೆಲವು ಸದಸ್ಯರುಗಳ ನಿರ್ಣಯಗಳಿಗೆ ಮಾತ್ರ ಮನ್ನಣೆ ನೀಡುವ ಕ್ರಮ ಸರಿಯಲ್ಲ ಎಂದು ವಾದಿಸಿದರು.

ಚಿಕ್ಕದಿರುವ ಗೂಡಗಂಡಿಗಳನ್ನು ದೊಡ್ಡದಾಗಿ ಮಾಡಿಕೊಳ್ಳಲಾಗುತ್ತಿದೆ. ಒಬ್ಬರು ಮಾಡುವುದನ್ನು ನೋಡಿ ಬೇರೆಯವರೂ ಕೂಡ ಅರ್ಜಿ ಸಲ್ಲಿಸುತ್ತಿದ್ದಾರೆ. ಎಲ್ಲಾ ಗೂಡಂಗಡಿಗಳನ್ನು ದೊಡ್ಡದು ಮಾಡಿದರೆ ಪುರಸಭೆಯಲ್ಲಿ ಜಾಗದ ಸಮಸ್ಯೆ ಉದ್ಭವಿಸಲಿದೆ. ಈ ಸಮಸ್ಯೆಗೊಂದು ಸೂಕ್ತ ಪರಿಹಾರ ಕಂಡುಕೊಳ್ಳಬೇಕು ಎಂದು ಸದಸ್ಯರು ಆಗ್ರಹಿಸಿದಾಗ  ಈ ವಿಚಾರದಲ್ಲಿ ವಿಶೇಷ ಸಭೆ ಕರೆದು ಸೂಕ್ತ ನಿರ್ಣಯ ತೆಗೆದುಕೊಳ್ಳುವುದಾಗಿ ಅಧ್ಯಕ್ಷರು ತಿಳಿಸಿದರು. 

ಈ ನಡುವೆ ಸಾಮಾನ್ಯ ಸಭೆಯ ಹಾಜರಾತಿ ಪುಸ್ತಕಕ್ಕೆ ಸಹಿ ಹಾಕುವಂತೆ ಪುರಸಭಾ ಅಧ್ಯಕ್ಷರು ಮನವಿ ಮಾಡಿದರೂ ಕೂಡ, ಸರಿಯಾದ ನಿರ್ಣಯ ಕೈಗೊಳ್ಳದೇ ತಮ್ಮ ಸಹಿ ಹಾಕುವುದಿಲ್ಲ ಎಂದು ಆಡಳಿತ ಪಕ್ಷದ ಕಾಂಗ್ರೆಸ್ ಬೆಂಬಲಿತ ಮೂವರು ಸದಸ್ಯರು ಪಟ್ಟು ಹಿಡಿದಾಗ, ಸಾಮಾನ್ಯ ಸಭೆಗೆ ಹಾಜರಾದವರು ಸಹಿ ಹಾಕುವುದು ನಿಯಮ. ನಿಯಮ ಉಲ್ಲಂಗಿಸುವುದು ಸರಿಯಲ್ಲ ಎಂದು ಅಧ್ಯಕ್ಷರು ಹೇಳಿದರು. ಆದರೆ ಪಟ್ಟ ಬಿಡದ ಸದಸ್ಯರು ಸಹಿ ಹಾಕಲು ಸಾಧ್ಯವಿಲ್ಲ. ಇಲ್ಲಿ ಯಾವ ವಿಚಾರದ ಬಗ್ಗೆಯೂ ನಿರ್ಣಯ ಕೈಗೊಳ್ಳುತ್ತಿಲ್ಲ. ನಾವು ಜನರಿಗೆ ಉತ್ತರಿಸುವುದು ಹೇಗೆ ಎಂದು ಪ್ರಶ್ನಿಸಿದರು. 
     ಅದಕ್ಕೆ ಅಧ್ಯಕ್ಷರು ಸಹಿ ಹಾಕದೇ ಇದ್ದ ಮೇಲೆ ಸಭೆಯಲ್ಲಿರುವ ಅಗತ್ಯವಿಲ್ಲ, ಹೊರನಡೆಯಬಹುದು ಎಂದಾಗ ಆಕ್ರೋಶಗೊಂಡು ಕಾಂಗ್ರಸ್ ಬೆಂಬಲಿತ ಸದಸ್ಯರು ಹೊರನಡೆಯಲು ತಾವು ಹೇಳುವುದು ಬೇಡ. ನಾವೇ ಹೋಗುತ್ತೇವೆ ಎಂದು ಹೇಳಿ, ಪ್ರಭಾರಕ ಕೋಡಿ ಅವರನ್ನು ಹೊರತುಪಡಿಸಿ ಉಳಿದವರು ಸಭೆಯಿಂದ ಹೊರನಡೆದರು. 
   23 ಸದಸ್ಯರ ಪೈಕಿ ಮೂರನೇ ಒಂದರಷ್ಟು ಸದಸ್ಯರು ಹಾಜರಿದ್ದ ಕಾರಣ ಸಭೆಯನ್ನು ಮುಂದುವರಿಸಿಲಾಯಿತು. ಸಭೆಯಲ್ಲಿ ಸುಲಭ ಶೌಚಾಲಯ, ಕಿತ್ತು ಹೋದ ಹಂಪ್ಸ್, ನ್ಯೂ ಮೆಡಿಕಲ್ಸ್ ಮುಂಬಾಗದ ಜಾಗದ ತಕರಾರು, ಹಂದಿಗೂಡು ಮುಂತಾದ ವಿಚಾರಗಳು ಚರ್ಚೆಗೆ ಬಂದವು. 
    ಸಭೆಯಲ್ಲಿ ಉಪಾಧ್ಯಕ್ಷ ನಾಗರಾಜ ಕಾಮಧೇನು, ಸ್ಥಾಯಿ ಸಮಿತಿ ಅಧ್ಯಕ್ಷ ಸುರೇಶ್ ನಾಯಕ್, ಮುಖ್ಯಾಧಿಕಾರಿ ಗೋಪಾಲ ಶೆಟ್ಟಿ ಉಪಸ್ಥಿತಿರಿದ್ದರು.

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com