ಸಂಘಟನೆಯಿಂದ ದಲಿತರ ಸ್ವಾಭಿಮಾನ ಜಾಗೃತಿ: ಶ್ಯಾಮರಾಜ್ ಬಿರ್ತಿ

ನಾಡ: ಸಂವಿಧಾನದತ್ತ ಹಕ್ಕುಗಳನ್ನು ಪಡೆದು ಸರ್ವಾಂರ್ಗೀಣ ಅಭಿವೃದ್ಧಿಯತ್ತ ಸಾಗಲು ದಲಿತರಿಗೆ ದಲಿತರೇ ಇಂದು ಅಡ್ಡಿಯಾಗುತ್ತಿರುವುದು ಆತಂಕಕಾರಿ ಬೆಳವಣಿಗೆ. ದಲಿತರಲ್ಲಿನ ಒಗ್ಗಟ್ಟನ್ನು ಮುರಿದು ದಲಿತ ಚಳವಳಿಯನ್ನು ಬಲಿತರು ಹತ್ತಿಕ್ಕುವಂತಾಗಿದೆ. ದಲಿತ ಸಂಘರ್ಷ ಸಮಿತಿ ಎಂದರೆ ಕೇವಲ ಗಲಾಟೆ-ಗದ್ದಲ, ಕೇಸು, ಕೋರ್ಟು-ಕಚೇರಿ ಎಂದಷ್ಟೇ ತಪ್ಪುತಿಳಿಯುವಂತಾಗಿದೆ. ದಲಿತ ಸಂಘಟನೆ ಎಂದರೆ ದಲಿತರ ಸ್ವಾಭಿಮಾನ ಜಾಗೃತಿಯೇ ವಿನಾ ಸಮಾಜದ ಸ್ವಾಸ್ಥ್ಯವನ್ನು ಕೆಡಿಸುವ, ಗೊಂದಲವನ್ನು ಸೃಷ್ಟಿಸುವುದಲ್ಲ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ(ರಿ) ಉಡುಪಿ ಜಿಲ್ಲಾ ಸಮಿತಿ ಸಂಚಾಲಕ ಶ್ಯಾಮರಾಜ್ ಬಿರ್ತಿ ಅವರು ಹೇಳಿದರು.
ಅವರು ನಾಡಾ ಗುಡ್ಡೆಅಂಗಡಿ ರಾಮಕೃಪಾ ಸಮುದಾಯ ಭವನದಲ್ಲಿ ಮಾರ್ಚ್ ೨೨ರಂದು ಜರಗಿದ ಸಮಾರಂಭದಲ್ಲಿ ದಸಂಸ ನಾಡಾ ನೂತನ ಗ್ರಾಮಶಾಖೆಯನ್ನು ಉದ್ಘಾಟಿಸಿ ಮಾತನಾಡಿದರು. ಮುಖ್ಯ ಅತಿಥಿ ಗಂಗೊಳ್ಳಿ ಆರಕ್ಷಕ ಠಾಣಾ ಉಪನಿರೀಕ್ಷಕ ಸುಬ್ಬಣ್ಣ ಬಿ. ಅವರು ಡಾ. ಬಿ. ಆರ್. ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು. ದಸಂಸ ಕುಂದಾಪುರ ತಾಲೂಕು ಸಂಚಾಲಕ ಕೆ. ಸಿ. ರಾಜು ಬೆಟ್ಟಿನಮನೆ ಗೋಪಾಡಿ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. 
  ಪ್ರಧಾನ ಭಾಷಣಕಾರ ದಲಿತ ಚಿಂತಕ ನಾರಾಯಣ ಮಣೂರು ಅವರು ಮಾತನಾಡಿ, ದಲಿತರಿಗೆ ಅಂಬೇಡ್ಕರ್ ಅವರೇ ಏಕಮೇವ ನಾಯಕ. ನಾಯಕತ್ವದ ಹೆಸರಿನಲ್ಲಿ ಕೆಲವರು ತಮ್ಮ ಸ್ವಾರ್ಥಸಾಧನೆಗಾಗಿ ದಲಿತ ಸಂಘಟನೆಗಳನ್ನು ಹೋಳು ಮಾಡಿದ್ದರಿಂದ ದಲಿತ ಸಮುದಾಯದ ಒಗ್ಗಟ್ಟು ಹಾಗೂ ಪ್ರಗತಿಗೆ ಭಾರೀ ಸವಾಲಾಗಿದೆ. ಅಸಮಾನ ವ್ಯವಸ್ಥೆಯ ವಿರುದ್ಧ, ದಾಸ್ಯದಿಂದ ಮುಕ್ತಿಗಾಗಿ, ಜ್ಞಾನಸಂಗ್ರಹ ಮತ್ತು ಅರಿವಿನತ್ತ ಸಾಗಲು, ಖಾಸಗೀಕರಣ ಮೂಲಕ ಸಂವಿಧಾನ ತಿರುಚುವ ಹುನ್ನಾರ ತಡೆಯಲು ಹಾಗೂ ದಲಿತ ಸಮುದಾಯದ ಅಭಿವೃದ್ಧಿಗಾಗಿ ದಲಿತ ಸಂಘಟನೆಗಳು ಕಾರ್ಯಪ್ರವೃತ್ತವಾಗಬೇಕು ಎಂದರು. 
  ಮುಖ್ಯ ಅತಿಥಿ ದಸಂಸ ಜಿಲ್ಲಾ ಸಂಘಟನಾ ಸಂಚಾಲಕ ಟಿ. ಮಂಜುನಾಥ ಗಿಳಿಯಾರು ಅವರು ದಸಂಸ ಗ್ರಾಮಶಾಖೆಯ ನೂತನ ಪದಾದಿಕಾರಿಗಳಿಗೆ ಪದಗ್ರಹಣ ನೆರವೇರಿಸಿ ಮಾತನಾಡಿ ಸಂಘಟನೆ ಹೆಸರಿನಲ್ಲಿ ನಾಯಕತ್ವಕ್ಕಾಗಿ ಪ್ರತಿಷ್ಠೆ ಮೆರೆಸುವುದು, ಪರಸ್ಪರ ಕಚ್ಚಾಟ ಮಾಡುವುದು, ಸಂಗಟನೆಯನ್ನು ಒಡೆಯುವುದು ಮೊದಲಾದುವನ್ನು ದಲಿತ ಮುಖಂಡರು ಚಿಂತನೆಗೆ ಹಚ್ಚಬೇಕಿದೆ. ಅಂಬೇಡ್ಕರ್ ಅವರ ತತ್ವ, ಸಿದ್ಧಾಂತಗಳಲ್ಲಿ ನಂಬಿಕೆ ಮತ್ತು ಬದ್ಧತೆಯನ್ನು ಪ್ರದರ್ಶಿಸುವ ಮೂಲಕ ದಲಿತ ಸಮುದಾಯ ಒಗ್ಗಟ್ಟಿನ ಹಾದಿಯಲ್ಲಿ ಮುನ್ನಡೆಯಬೇಕು ಎಂದರು. 
   ನಾಡಾ ಗ್ರಾಮ ಪಂಚಾಯತ್ ಅಧ್ಯಕ್ಷ ಕೆ. ಪ್ರವೀಣ್‌ಕುಮಾರ್ ಶೆಟ್ಟಿ, ಮುಖಂಡರಾದ ಚಂದ್ರ ಹಳಗೇರಿ, ವಾಸುದೇವ ಮುದೂರು, ತಾಲೂಕು ಸಂಘಟನಾ ಸಂಚಾಲಕ ಮಹೇಶ್ ಜಿ. ಕೆ., ನ್ಯಾಯವಾದಿ ಗಿರೀಶ್‌ಕುಮಾರ್ ಗಂಗೊಳ್ಳಿ, ಸೇನಾಪುರ ಕೊಂಕಣ ರೈಲ್ವೇಯ ಉಮೇಶ್‌ಕೃಷ್ಣ, ನಾಡಾ ಶಾಖೆ ಸಂಚಾಲಕ ಪರಮೇಶ್ವರ ರಾಮನಗರ, ಪದಾದಿಕಾರಿಗಳಾದ ಚಂದ್ರ ಡ್ರೈವರ್, ಜಯಕುಮಾರ್ ಸೇನಾಪುರ, ಅಕ್ಷಯ ಗುಡ್ಡೆಹೋಟೆಲ್, ಉಮೇಶ್ ಪಡುಕೋಣೆ ಮತ್ತು ಭಾಸ್ಕರ ಡ್ರೈವರ್ ರಾಮನಗರ, ಬಸವ ಸೇನಾಪುರ, ಕುಪ್ಪ ಮೇಸ್ತ್ರಿ ಗೋಳಿಹಕ್ಲು, ನರಸಿಂಹ ನಾಡಾ ಮತ್ತು ಅಣ್ಣಪ್ಪ ಗುಡ್ಡೆಹೋಟೆಲ್ ಮೊದಲಾದವರು ಉಪಸ್ಥಿತರಿದ್ದರು. 
   ಅಣ್ಣಪ್ಪ ತೆಂಕಬೈಲು ಅವರು ಸ್ವಾಗತಿಸಿದರು. ಕೆ. ಗೋಪಾಲಕೃಷ್ಣ ನಾಡಾ ಅವರು ಪ್ರಾಸ್ತಾವಿಕ ಮಾತುಗಳನ್ನಾಡಿದರು. ಪತ್ರಕರ್ತ ಚಂದ್ರ ಕೆ. ಹೆಮ್ಮಾಡಿ ಅವರು ಕ್ರಾಂತಿಗೀತೆಯೊಂದಿಗೆ ಕಾರ್ಯಕ್ರಮ ನಿರ್ವಹಿಸಿದರು. ಅರುಣ ಹಕ್ಲಾಡಿ ಅವರು ವಂದಿಸಿದರು. 

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com