ದೇಶದ ಶೆ.75ರಷ್ಟು ಜನರ ತಲಾ ಆದಾಯ 25ರೂ. ದಾಟಿಲ್ಲ: ಕಾಮ್ರೇಡ್ ಯು. ಬಸವರಾಜ್

ಕುಂದಾಪುರ: ಭಾರತಕ್ಕೆ ಸ್ವಾಂತತ್ರ್ಯ ಬಂದು ಎಪ್ಪತ್ತು ವರ್ಷಗಳಾದರೂ ದುಡಿಯುವ ವರ್ಗಗಳಿಗೆ ಏನನ್ನು ಮಾಡಿದ್ದೇವೆ ಎಂಬ ಪ್ರಶ್ನೆ ಮೂಡುತ್ತದೆ. ದೇಶದ ಶೇ.75ರಷ್ಟು ಜನರ ತಲಾ ಆದಾಯ 25ರೂಪಾಯಿಗಳಿಗಿಂತಲೂ ಕಡಿಮೆ ಇದೆ ಎಂಬ ನಾಚಿಕೆಯ ಸಂಗತಿಯನ್ನು ಕೇಂದ್ರ ಹಾಗೂ ರಾಜ್ಯ ಸರಕಾರಗಳು ಒಪ್ಪಿಕೊಳ್ಳುತ್ತಿದೆ. ಹಾಗಾದರೆ ದೇಶ ಯಾವ ದಿಕ್ಕಿನಲ್ಲಿ ಸಾಗುತ್ತಿದೆ. ಇಷ್ಟುವರ್ಷ ಮಂಡಿಸಿದ ಲಕ್ಷಕೋಟಿಯ ಬಜೆಟ್ ಹಣ ಯಾರಿಗೆ ಸೇರುತ್ತಿದೆ ಎಂಬ ಪ್ರಶ್ನೆ ಮೂಡುತ್ತಿದೆ ಎಂದು ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯ ಸಮಿತಿಯ ಪ್ರಧಾನ ಕಾರ್ಯದರ್ಶಿ ಯು. ಬಸವರಾಜ್ ಹೇಳಿದರು.
ಅವರು ಇಲ್ಲಿನ ರಾಜ್ಯ ಸರಕಾರದ ನೌಕರರ ಸಂಘದ ನೇತಾಜಿ ಸಭಾಂಗಣದಲ್ಲಿ ಆಯೋಜಿಸಲಾದ ರೈತ ಮತ್ತು ಕೂಲಿಕಾರರ ಬೃಹತ್ ಸಮಾವೇಶವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.

ದೇಶದಲ್ಲಿ ರೈತರು ದೊಡ್ಡ ಪ್ರಮಾಣದಲ್ಲಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಆದಾಯದ ದುಸ್ಥಿತಿಯಿಂದಾಗಿ ನಿಮಿಷವೊಂದಕ್ಕೆ 5ಜನ ಹಸಿವಿನಿಂದ ಸಾಯುತ್ತಿದ್ದಾರೆ. ಶೇ.60ರಷ್ಟು ಮಹಿಳೆಯರು ರಕ್ತ ಹೀನತೆಯಿಂದ, ಶೇ.65ರಷ್ಟು ಮಕ್ಕಳು ಕಡಿಮೆ ತೂಕದ ಕಾರಣದಿಂದ ಬಳಲುತ್ತಿದ್ದಾರೆ. ಪ್ರತಿ ಮೂರು ದಿನಕ್ಕೆ ಒಬ್ಬ ಆದಿವಾಸಿ ಇಲ್ಲವೇ ದಲಿತರ ದೌರ್ಜನ್ಯ ನಡೆಯುತ್ತಿದ್ದರೇ, 20 ನಿಮಿಷಕ್ಕೊಂದರಂತೆ ಮಹಿಳೆಯರ ಮೇಲೆ ಅತ್ಯಾಚಾರವಾಗುತ್ತಲಿದೆ. 2ಕೋಟಿಯಷ್ಟು ಯುವಜನರು ನಿರುದ್ಯೋಗದಿಂದ ಬಳಲುತ್ತಿದ್ದಾರೆ. ಇವರೆಲ್ಲರ ಜೀವನಮಟ್ಟವನ್ನು ಹೆಚ್ಚಿಸುವತ್ತ ಸರಕಾರಗಳು ಚಿಂತಿಸಬೇಕಿದೆ ಎಂದ ಅವರು ವಿದೇಶಿ ಕಂಪೆನಿಗಳಿಗೆ ಕೇಂದ್ರ ಸರಕಾರ ಭೂಮಿಯನ್ನು ನೀಡಿ ರೈತರನ್ನು ಒಕ್ಕಲೆಬ್ಬಿಸುವ ಹುನ್ನಾರವನ್ನು ಭೂಸ್ವಾಧೀನ ಕಾಯಿದೆಯ ಮೂಲಕ ಮಾಡುತ್ತಿರುವುದನ್ನು ನಿಲ್ಲಿಸಬೇಕು ಎಂದರು.
ಸಮಾವೇಶದ ಅಧ್ಯಕ್ಷತೆಯನ್ನು ಕರ್ನಾಟಕ ರಾಜ್ಯ ರೈತ ಸಂಘದ ಉಡುಪಿ ಜಿಲ್ಲಾಧ್ಯಕ್ಷ ಯು. ದಾಸ ಭಂಡಾರಿ, ಕರ್ನಾಟಕ ಪ್ರಾಂತ ಕೃಷಿಕೂಲಿ ಸಂಘದ ಕುಂದಾಪುರ ತಾಲೂಕು ಸಮಿತಿಯ ಅಧ್ಯಕ್ಷ ರಾಜೀವ ಪಡುಕೋಣೆ ವಹಿಸಿದ್ದರು.

ವೇದಿಕೆಯಲ್ಲಿ ಕರ್ನಾಟಕ ಪ್ರಾಂತ ರೈತ ಸಂಘದ ಕೊಡಗು ಜಿಲ್ಲಾ ಮುಖಂಡ ಡಾ| ದುರ್ಗಾಪ್ರಸಾದ್, ಸಾಮಾಜಿಕ ಕಾರ್ಯಕರ್ತ ಶರತಚಂದ್ರ ಹೆಗ್ಡೆ, ಕರ್ನಾಟಕ ಪ್ರಾಂತ ರೈತ ಸಂಘದ ಉಡುಪಿ ಜಿಲ್ಲಾ ಮುಖಂಡ ಕೆ. ಶಂಕರ್, ಸಿಐಟಿಯು ಕುಂದಾಪುರ ತಾಲೂಕು ಸಮಿತಿಯ ಅಧ್ಯಕ್ಷ ಎಚ್. ನರಸಿಂಹ, ಡಿವೈಎಫ್ಐ ಕುಂದಾಪುರ ತಾಲೂಕು ಅಧ್ಯಕ್ಷ ರಾಜೇಶ್ ವಡೇರಹೋಬಳಿ, ಎಸ್.ಎಫ್.ಐ ಕುಂದಾಪುರ ತಾಲೂಕು ಸಮಿತಿ ಕಾರ್ಯದರ್ಶಿ ಶ್ರೀಕಾಂತ ಹೆಮ್ಮಾಡಿ ಮೊದಲಾದವರು ಉಪಸ್ಥಿತಿರಿದ್ದರು.

ಕರ್ನಾಟಕ ಪ್ರಾಂತ ಕೃಷಿಕೂಲಿಕಾರರ ಸಂಘದ ಉಡುಪಿ ಜಿಲ್ಲಾ ಕಾರ್ಯದರ್ಶಿ ವೆಂಕಟೇಶ ಕೋಣಿ ಕಾರ್ಯಕ್ರಮ ನಿರೂಪಿಸಿದರು.

ಸಮಾವೇಶದಲ್ಲಿ ಬಹುರಾಷ್ಟ್ರೀಯ ಕಂಪೆನಿಗಳ ಪರವಾದ ಕೇಂದ್ರ ಸರಕಾರದ ಭೂಸ್ವಾಧೀನ ತಿದ್ದುಪಡಿ ಕಾಯ್ದೆಯನ್ನು ಕರ್ನಾಟಕದಲ್ಲಿ ಜಾರಿ ಮಾಡಬಾರದು, ವಸತಿರಹಿತರಿಗೆ ನಿವೇಶನ ಹಾಗೂ ಮನೆ ಕಟ್ಟಲು ಬಡ್ಡಿರಹಿತ 5ಲಕ್ಷದ ವರೆಗೆ ಸಾಲ ಸೌಲಭ್ಯ, ವಿವಿಧ ರೈತ ವಿರೋಧಿ ಹಾಗೂ ಬಡವರ ವಿರೋಧಿ ಕಾಯಿದೆಗಳಿಗೆ ತಿದ್ದುಪಡಿ, ಶುದ್ಧ ಕುಡಿಯುವ ನೀರು ಪೂರೈಕೆ, ಕಸ್ತೂರಿರಂಗನ್ ವರದಿಯಲ್ಲಿ ಪ್ರಸ್ತಾಪಿಸಿರುವ ಜನವಿರೋಧಿ ಶಿಪಾರಸ್ಸುಗಳನ್ನು ಕೈಬಿಡುವುದು ಹಾಗೂ ನರೇಗಾ ಯೋಜನೆಯಡಿಯಲ್ಲಿ ಕೂಲಿ ಕೆಲಸಗಳನ್ನು ಮಾಡಿದವರಿಗೆ ಬಾಕಿ ಇರುವ ಹಣವನ್ನು ಸರಕಾರ ಶೀರ್ಘ ಸಂದಾಯವಾಗುವಂತೆ ಮಾಡಬೇಕು ಮಂತಾದ ಬೇಡಿಕೆಗಳನ್ನು ಸಮಾವೇಶದಲ್ಲಿ ಪ್ರಸ್ತಾಪಿಸಲಾಯಿತು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com