ವಿಚಾರಕ್ಕೆ ಕೊನೆಯೆಂಬುದಿಲ್ಲ: ಪ್ರೊ. ವಿ. ಎನ್. ಲಕ್ಷ್ಮೀನಾರಾಯಣ

ಕುಂದಾಪುರ: ವೈವಿಧ್ಯವೆನ್ನುವುದು ಪ್ರಕೃತಿಯಲ್ಲಿನ ಸಹಜ ಅಂಶವೆನ್ನುವುದನ್ನು ಅರಿತರೆ ನಾವು ವಿಚಾರವಂತರಾಗುತ್ತೇವೆ. ವಿಚಾರಕ್ಕೆ ಕೊನೆಯೆಂಬುದಿಲ್ಲ ವಿಜ್ಞಾನದ ಸಂಶೋಧನೆಯ ಹಾಗೆ ನಿರಂತರವಾಗಿರುತ್ತದೆ ಎಂದು ಪ್ರೊ. ವಿ. ಎನ್. ಲಕ್ಷ್ಮೀನಾರಾಯಣ ಮೈಸೂರು ಹೇಳಿದರು. 

    ಅವರು  ಕನ್ನಡ ಪುಸ್ತಕ ಪ್ರಾಧಿಕಾರ, ಸಾಹಿತ್ಯ ಸಮುದಾಯ ಮತ್ತು ಕುಂದಾಪುರದ ಸಮುದಾಯ ಸಾಂಸ್ಕೃತಿಕ ಸಂಘಟನೆಯ ಸಹಕಾರದೊಂದಿಗೆ ಭಂಡಾರ್ಕಾರ್ಸ್ ಕಾಲೇಜಿನ ಶ್ರವಣ ದೃಶ್ಯ ಸಭಾಂಗಣದಲ್ಲಿ ಹಮ್ಮಿಕೊಂಡ ರಾಜ್ಯಮಟ್ಟದ ವಾಚನಾಭಿರುಚಿ ಕಮ್ಮಟವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
    ಇಂದ್ರಿಯಗಳ ಮೂಲಕ ನಮಗೆ ದಕ್ಕುವುದನ್ನು ವಿಂಗಡಿಸಿಕೊಳ್ಳುವ ಕ್ರಮವನ್ನು ವಿಚಾರ ಎನ್ನಬಹುದು. ಪ್ರಶ್ನೆಯೆಂಬುದು ಇಲ್ಲಿ ಪ್ರಮುಖವಾದುದು. ಇಲ್ಲಿ ಆಯ್ಕೆಗಳಿದೆ ಆದರೆ ಅಂತ್ಯವೆಂಬುದಿಲ್ಲ ಎಂದರು.  
       ಮುಖ್ಯ ಅತಿಥಿಗಳಾಗಿ ಲೇಖಕಿ ನಾಡೋಜ ಡಾ. ಸಾರಾ ಅಬೂಬಕ್ಕರ್ ಮಾತನಾಡಿ ಕರ್ನಾಟಕದ ಯುವಜನತೆಯನ್ನು ಓದುಗರನ್ನಾಗಿ ತರಬೇತುಗೊಳಿಸುವುದು ಅಗತ್ಯವಿದೆ. ಇಂದಿನ ಪ್ರಾಥಮಿಕ ಶಿಕ್ಷಣದ ಕುರಿತು ಗಮನ ಹರಿಸಬೇಕಾಗಿದೆ. ಈ ಹಂತದಲ್ಲಿ ಮಕ್ಕಳಿಗೆ ಮಾತೃಭಾಷೆಯ ಶಿಕ್ಷಣ ಅವಶ್ಯ ಎಂದರು.
     ಕನ್ನಡ ಪುಸ್ತಕ ಪ್ರಾಧಿಕಾರ ಅಧ್ಯಕ್ಷರಾದ ಡಾ. ಬಂಜಗೆರೆ ಜಯಪ್ರಕಾಶ್ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ ಭಾರತದಲ್ಲಿ ಅನುಭವಕ್ಕೆ ವಿಚಾರದ, ವಿಚಾರಕ್ಕೆ ಅನುಭವದ ಆಧಾರವೇ ಇರುವುದಿಲ್ಲ. ಕಾಣದ್ದನ್ನು ನಂಬುವ ಆಧ್ಯಾತ್ಮದ ಒಲವು ನಮ್ಮಲ್ಲಿ ಹೆಚ್ಚು. ಆದರೆ ಯಾವುದಕ್ಕೂ ಕೊನೆಯಿಲ್ಲವೆಂದು ನಂಬುವಂತಹ ವೈಚಾರಿಕರಾಗುವುದು ಅಗತ್ಯ. ಎಂದರು.       ಸಂವಿಧಾನವೇ ನಮಗೆ ಪವಿತ್ರ ಗ್ರಂಥ. ಒಂದು ಪಂಥಕ್ಕೆ ಸೇರಿದ ಭಗವದ್ಗೀತೆಯನ್ನು ರಾಷ್ಟ್ರೀಯ ಗ್ರಂಥವನ್ನಾಗಿಸುವುದು ಸರಿಯಲ್ಲ ಎಂದರು.
ಮುಖ್ಯ ಅತಿಥಿಗಳಾಗಿ ಮಣಿಪಾಲ ಅಕಾಡೆಮಿ ಆಫ್ ಜನರಲ್ ಎಜ್ಯುಕೇಷನ್ ಆಡಳಿತಾಧಿಕಾರಿ ಡಾ. ಎಚ್. ಶಾಂತಾರಾಮ ಉಪಸ್ಥಿತರಿರುವರು.
    ಕನ್ನಡ ಪುಸ್ತಕ ಪ್ರಾಧಿಕಾರದ ಸದಸ್ಯೆ ಮಾಧವಿ ಭಂಡಾರಿ ಕೆರೆಕೋಣ ಪ್ರಸ್ತಾವನೆಗೈದರು, ಕಮ್ಮಟದ ನಿರ್ದೇಶಕ ಡಾ. ಎಂ.ಜಿ. ಹೆಗಡೆ, ಕುಮಟಾ ಆಶಯ ನುಡಿಗಳನ್ನಾಡಲಿದ್ದಾರೆ. ಸಮುದಾಯ ಕುಂದಾಪುರ ಉಪಾಧ್ಯಕ್ಷ ಜಿ. ವಿ. ಕಾರಂತ ವಂದಿಸಿದರು. ಸದಾನಂದ ಬೈಂದೂರು ಕಾರ್ಯಕ್ರಮ ನಿರೂಪಿಸಿದರು.
     ಮಧ್ಯಾಹ್ನ ಡಾ| ಕೆ. ಕೇಶವ  ಶರ್ಮ, ಶಿವರಾಮ ಕಾರಂತರ ಓದನ್ನು ಹಾಗೂ ಪ್ರೊ. ವರದೇಶ ಹಿರೇಗಂಗೆ ಗೌರೀಶ್ ಕಾಯ್ಕಿಣಿಯವರ ಪಠ್ಯವನ್ನು ಓದಿದರು. ಶಿಬಿರಾರ್ಥಿಗಳು ಪಠ್ಯದ ಬಗ್ಗೆ ಚರ್ಚಿಸಿದರು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com