ಕಹಿಯನ್ನೂ ಅಮೃತವನ್ನಾಗಿಸುವ ಶಕ್ತಿ ಕನ್ನಡಕ್ಕಿದೆ: ಶ್ರೀಧರ ಬಳಗಾರ್

ಕುಂದಾಪುರದಲ್ಲಿ ನಡೆದ ವಿಜಯವಾಣಿ ಕನ್ನಡ ಅಭಿಯಾನ ಓದುಗರು ಚಿಂತಕರ ಸಂವಾದದಲ್ಲಿ ಬರಹಗಾರ ಶ್ರೀಧರ ಬಳಗಾರ್ ವಿಷಯ ಮಂಡಿಸಿದರು.

ಕುಂದಾಪುರ: ಕನ್ನಡದ ಕಹಿ ಬೇವಿನಂತಹದ್ದು, ಅದಕ್ಕೆ ವಿಷವನ್ನೂ ಅಮೃತ ಮಾಡುವ ಶಕ್ತಿಯಿದೆ. ಎಲ್ಲಾ ಗುಣಗಳನ್ನು ಹೊಂದಿರುವ ಕನ್ನಡಕ್ಕೆ ಇತರ ಭಾಷೆಗಳನ್ನು ಹೊಂದಿಸಿಕೊಂಡು ಹೋಗುವ ವಿಶೇಷ ಶಕ್ತಿಯಿರುವುದರಿಂದಲೇ ಕನ್ನಡ ಒಂದು ಭಾಷೆಯಾಗಿ ಉಳಿದಿದೆ ಎಂದರೆ ತಪ್ಪಾಗದು ಎಂದು  ಚಿಂತಕ ಶ್ರೀಧರ ಬಳಗಾರ್ ಕುಮುಟಾ ಹೇಳಿದರು.
       ಇಲ್ಲಿನ ರೋಟರಿ ಲಕ್ಷ್ಮೀ ನರಸಿಂಹ ಕಲಾಮಂದಿರದಲ್ಲಿ ವಿಜಯವಾಣಿ ಕನ್ನಡ ಅಭಿಯಾನದ ಅಂಗವಾಗಿ ಏರ್ಪಡಿಸಲಾಗಿದ್ದ ಓದುಗರು ಚಿಂತಕರ ಕನ್ನಡ ಸಂವಾದ ಕಾರ್ಯಕ್ರಮದಲ್ಲಿ ಶೈಕ್ಷಣಿಕ ಮಾಧ್ಯಮವನ್ನಾಗಿ ಕನ್ನಡ ಬಲಗೊಳಿಸುವ ಕುರಿತು ಅವರು ವಿಷಯ ಮಂಡಿಸಿದರು.

       ಕನ್ನಡ ಈ ಮಣ್ಣಿನ ಗುಣವನ್ನು ಹೊಂದಿದ್ದರೂ ಅದನ್ನು ಮಾರುಕಟ್ಟೆಯ ಭಾಷೆಗೆ ಒಗ್ಗಿಕೊಳ್ಳಲು ನಾವು ಎಡವುತ್ತಿದ್ದೆವೆ. ಆದ್ದರಿಂದಲೇ ಕನ್ನಡದ ಮೇಲೆ ಇತರ ಭಾಷೆಗಳ ಸವಾರಿ ಹೆಚ್ಚುತ್ತಿದೆ. ಕನ್ನಡದಲ್ಲಿ ಬದುಕನ್ನು ರೂಪಿಸುವಂತಹ ಅವಕಾಶಗಳನ್ನು ಸೃಷ್ಟಿಮಾಡುವ ಕೆಲಸ ಆಗಬೇಕು.  ಕನ್ನಡವನ್ನು ಜ್ಞಾನದ ಭಾಷೆ, ಅನ್ನದ ಭಾಷೆಯನ್ನಾಗಿಸುವಲ್ಲಿ ಶ್ರಮವಹಿಸಬೇಕಾಗಿದೆ ಎಂದರು.


        ನಾವು ಮಾತಿನಲ್ಲಿ ಕನ್ನಡದ ಬಗ್ಗೆ ಬಹುವಾಗಿ ಮಾತನಾಡುತ್ತೇವೆ. ಕನ್ನಡದ ಉಳಿವಿಗಾಗಿ ಮಾತನಾಡುವ ಮಾತುಗಳು ಎಷ್ಟರ ಮಟ್ಟಿಗೆ ಅನುಷ್ಟಾನಕ್ಕೆ ಬರುತ್ತಿವೆ ಎನ್ನುವುದರ ಬಗ್ಗೆ ನಾವೆಲ್ಲರೂ ಚಿಂತಿಸಬೇಕಾಗಿದೆ. ಘ್ರಭಾಷಾ ಸೂತ್ರವನ್ನು ಹಲವು ಬಾರಿ ಅನುಷ್ಟಾನಕ್ಕೆ ಬಂದಂತೆ ತೋರಿದರೂ ಯಾಕೆ ಯಶಸ್ವಿಯಾಗಿಲ್ಲ? ಶಿಕ್ಷಣ ಮಾಧ್ಯಮದಲ್ಲಿ ಕನ್ನಡವನ್ನೇ ಮಾಧ್ಯಮವಾಗಬೆಕು ಎನ್ನುವುದರ ಬಗ್ಗೆ ಸುಪ್ರೀಂ ಕೋರ್ಟು ತೀರ್ಪು ನೀಡಿದೆ. ಆದರೆ ಯಾಕೆ ಈ ಬಗ್ಗೆ ನಿರ್ಲಕ್ಷ್ಯವಾಗುತ್ತಿದೆ. ಬಹಳ ಸ್ಪಷ್ಟವಾಗಿ ಸಂವಿಧಾನದಲ್ಲಿ ಮಗು ಮತ್ತು ಮಗುವಿನ ಪಾಲಕರ ಇಚ್ಚೆಗೆ ವಿರುದ್ಧವಾಗಿ ಭಾಷೆ ಹೇರಿಕೆಯಾಗಕೂಡದು ಎನ್ನುವುದು ಆಂಗ್ಲಭಾಷೆಗೆ ಹೇರಿಕೆಯಾಗುವುದಕ್ಕೆ ಕಾರಣವಾಗಿದೆ ಎನ್ನುವ ಅಭಿಪ್ರಾಯಗಳೂ ಕೇಳಿ ಬರುತ್ತಿದೆ. ಪಂಪನಿಂದ ಹಿಡಿದು, ವಚನ ಸಾಹಿತ್ಯ, ದಾಸರ ಪದಗಳು, ಕನ್ನಡಕ್ಕಾಗಿ ಕೆಲಸ ಮಾಡಬೇಕಾದ ವಿಶ್ವವಿದ್ಯಾಲಯವಿದೆ. ವಿಜ್ಞಾನ, ತಂತ್ರಜ್ಞಾನಗಳಿವೆ. ಆದರೆ ಇವೆಲ್ಲಾ ಕಡೆ ಜ್ಞಾನ ಸೃಷ್ಟಿಯ ಕೊರತೆ ಇದಕ್ಕೆಲ್ಲಾ ಕಾರಣವಾಗುತ್ತಿದೆಯೇ ಎನ್ನುವ ಪ್ರಶ್ನೆ ನಮ್ಮೆಲ್ಲರನ್ನೂ ಕಾಡುತ್ತಿದೆ. ತಾಂತ್ರಿಕ, ವಿಜ್ಞಾನ ಕಲಿಕೆಗಳಲ್ಲಿ ಕನ್ನಡ ಮಾಧ್ಯಮ ಮಾಡಲು ನಮ್ಮ ಸರ್ಕಾರ ಯಾಕೆ ಹಿಂದೇಟು ಹಾಕುತ್ತಿದೆ ಎಂದರು.

     ಸಂವಾದಕಾರರಾಗಿ ಭಾಗವಹಿಸಿದ್ದ ಉಪನ್ಯಾಸಕಿ, ಲೇಖಕಿ ರೇಖಾ ಬನ್ನಾಡಿ ಮಾತನಾಡುತ್ತಾ ಬದಲಾವಣೆಯ ಕಾಲಘಟ್ಟದಲ್ಲಿ ಭಾಷಿಕ ನೆಲೆಯಲ್ಲಿಯೂ ಆಗುತ್ತಿರುವ ಬದಲಾವಣೆ ಅನಿವಾರ್ಯತೆ ಅನಿಸುತ್ತದೆ. ಭಾಷೆಯ ಬಗ್ಗೆ ಕೇವಲ ಭಾಷಣದಲ್ಲಿ ಅರಿವು ಮೂಡಿಸಲು ಸಾಧ್ಯವಿಲ್ಲ. ಭಾಷೆಯ ಉಳಿಯುವಿಕೆಯ ಬಗ್ಗೆ ಒತ್ತಾಸೆ ನಮ್ಮಲ್ಲಿ ಬೆಳೆಯಬೇಕು. ಭಾಷೆಗೆ ವ್ಯವಸ್ಥಿತವಾದ ಅವಕಾಶಗಳು ಸಿಕ್ಕಿದಾಗ, ಅದು ಅನ್ನ ಕೊಡಲು ಸಾಧ್ಯ ಎನ್ನುವ ಭ್ರಮೆ ಬಂದಾಗ ಭಾಷೆಯ ಬಗ್ಗೆ ಜನ ವಿಶ್ವಾಸವನ್ನು ಹೊಂದಲು ಸಾಧ್ಯವಿದೆ. ಮುಖ್ಯವಾಗಿ ಭಾಷಾಭಿಮಾನ ಕನ್ನಡಿಗರಲ್ಲಿ ಜಾಗೃತವಾಗಬೇಕು. ಅಂತರಂಗದ ಒತ್ತಾಸೆಯ ಸಂಕಲ್ಪವಾಗಬೇಕು. ನಮ್ಮ ಮಕ್ಕಳಿಗೆ ಕನ್ನಡ ಭಾಷೆಯ ಬಗ್ಗೆ ತಿಳಿಸುವ ಕೆಲಸ ಪೋಷಕರು ಮಾಡಬೇಕು ಎಂದರು.

     ಬಸ್ರೂರು ಶ್ರೀ ಶಾರದಾ ಕಾಲೇಜು ಉಪನ್ಯಾಸಕ ಹಳ್ನಾಡು ಪ್ರಾತಪ್ಚಂದ್ರ ಶೆಟ್ಟಿ ಪ್ರತಿಕ್ರಿಯಿಸಿ, ಕನ್ನಡ ಭಾಷೆಯ ಭೌಗೋಳಿಕ ಆವರಣಕ್ಕೂ ಆಂಗ್ಲ ಭಾಷೆಯ ಭೌಗೋಳಿಕ ಆವರಣಕ್ಕೂ ಬಹಳಷ್ಟು ಅಂತರವಿರುವುದೂ ಕೂಡಾ ಕನ್ನಡ ಅಭಿವೃದ್ಧಿಗೆ ತೊಡಕು ಎನ್ನಬಹುದು. ಶಿಕ್ಷಣ ಕ್ಷೇತ್ರದಲ್ಲಿ ನಿರೀಕ್ಷೆಯ ಮಟ್ಟದಲ್ಲಿ ಕೆಲಸಗಳಾಗಿಲ್ಲ ಎನ್ನುವ ಅಂಶಗಳೂ ಕನ್ನಡದ ಅಭಿವೃದ್ಧಿಗೆ ತೊಡಕು ಎನ್ನುವುದೂ ಕೂಡಾ ಗಮನಾರ್ಹ. ಕನ್ನಡ ವಿಶ್ವವಿದ್ಯಾಲಯದಲ್ಲಿ ಕೆಲವು ವರ್ಷಗಳ ವರೆಗೆ ಜ್ಞಾನ ಸೃಷ್ಟಿಯಾಗುತ್ತಿತ್ತು. ಆಧರೆ ಅಲ್ಲಿಯೂ ಎಲ್ಲೋ ಒಂದು ಹಂತಕ್ಕೆ ಅದು ನಿಂತಿದೆ ಎನ್ನುವಂತೆ ಅನ್ನಿಸತೊಡಗಿದೆ. ಈ ನಿಟ್ಟಿನಲ್ಲಿ ಕನ್ನಡ ಭಾಷೆಯ ಬಗ್ಗೆ ಈಗಿನದ್ದೆಲ್ಲವನ್ನೂ ಮೀರಿ ಕ್ರಾಂತಿಯಾಗಬೇಕಾದ ಅಗತ್ಯವಿದೆ ಎಂದರು.

     ಸಾಹಿತಿ ಎಎಸ್ಎನ್ ಹೆಬ್ಬಾರ್ ಪ್ರತಿಕ್ರಿಯಿಸಿ, ಭಾಷಾ ವ್ಯಾಮೋಹ ಅನ್ನುವುದು ಹುಟ್ಟುವಲ್ಲಿಂದಲೆ ಬರಬೇಕು. ಆಗ ಪ್ರತಿಯೊಬ್ಬರೂ ಮಾತೃಭಾಷೆಯ ನಂಟನ್ನು ಉಳಿಸಿಕೊಳ್ಳುವುದು ಸಾಧ್ಯ. ಶಿಕ್ಷಣ ಕ್ಷೇತ್ರದಲ್ಲಿ ಕನ್ನಡದ ಬಗ್ಗೆ ಸಾಕಷ್ಟು ಕೆಲಸಗಳಾಗುವ ಜೊತೆಜೊತೆಗೆ ಮನೆಯಲ್ಲಿಯೂ ಕನ್ನಡದ ಬಗ್ಗೆ ಆಸಕ್ತಿ ಮೂಡಿಸುವ ಕೆಲಸವಾಗಬೇಕು. ಕಚೇರಿಗಳಲ್ಲಿ ಕನ್ನಡದ ಬಳಕೆಯ ಬಗ್ಗೆ ಜಾಗೃತಿ ಮೂಡಿಸುವ ಕೆಲಸಗಳ ಜೊತೆಗೆ ನಾವೂ ಅದನ್ನು ಆಚರಣೆಗೆ ತರಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

     ಉಪನ್ಯಾಸಕಿ, ಲೇಖಕಿ ಡಾ.ಪಾರ್ವತಿ ಜಿ.ಐತಾಳ್ ಮಾತನಾಡಿ ಇವತ್ತಿನ ಸ್ಪರ್ಧಾತ್ಮಕ ಯುಗದಲ್ಲಿ ನೂರಾರು ಪತ್ರಿಕೆಗಳಿಗೆ. ವಿದ್ಯುನ್ಮಾನ ಮಾಧ್ಯಮಗಳ ನಡುವೆ ಪೈಪೋಟಿ ನೀಡುವ ಸಂದರ್ಭದಲ್ಲಿ ಪತ್ರಿಕೆಗಳು ತಮ್ಮದೇ ಆದ ಕಾಳಜಿಯನ್ನು ಕೂಡಾ ನಿರ್ವಹಿಸುತ್ತಿವೆ. ಅದರಲ್ಲಿಯೂ ವಿಜಯವಾಣಿ ಪತ್ರಿಕೆ ಮೂರು ವರ್ಷಗಳಲ್ಲಿ ಹಲವು ಹೊಸತುಗಳನ್ನು ಹುಟ್ಟು ಹಾಕಿದೆ. ಭಿನ್ನವಾದ ಪ್ರಯೋಗಗಳು ಜನಪ್ರಿಯತೆಗೆ ಸಾಕ್ಷಿಯಾಗಿದೆ. ವಿಜಯವಾಣಿಯ ಕನ್ನಡದ ಒಳನೋಟ ಎಲ್ಲಾ ಪತ್ರಿಕೆಗಳಿಗೆ ಮಾದರಿಯಾಗಬೇಕು. ಪತ್ರಿಕೆಯ ಜೊತೆಗೆ ಕನ್ನಡ ಉಳಿಸಿ ಬೆಳೆಸುವಲ್ಲಿ ಕೈಜೋಡಿಸಿದಾಗ ಕನ್ನಡ ಉಳಿವು ಬೆಳವಣಿಗೆ ಸಾಧ್ಯ ಎಂದರು.


       ಚಿಂತಕ ಕೃಷ್ಣ್ಣರಾಜ ಕರಬ, ಉಪನ್ಯಾಸಕ ರಂಜಿತ್ ಕುಮಾರ್ ಶೆಟ್ಟಿ, ಬಕುಳ ಸಾಹಿತ್ಯ ವೇದಿಕೆಯ ಸಂಚಾಲಕ ಕೋನಳ್ಳಿ ರಾಜೀವ ನಾಯ್ಕ ಸಂವಾದದಲ್ಲಿ ಭಾಗವಹಿಸಿದರು. ಉಪನ್ಯಾಸಕ ಸುರೇಂದ್ರ ಶೆಟ್ಟಿ ಸಮನ್ವಯಕಾರರಾಗಿ ಭಾಗವಹಿಸಿದ್ದರು.ಚಿತ್ರಗಳು: ರಾಘವೇಂದ್ರ ಬಳ್ಕೂರು

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com