ಅಮಾಸೆಬೈಲಿನಲ್ಲಿ ವಿವಿಧ ಕಾಮಗಾರಿಗಳಿಗೆ ಚಾಲನೆ

ಕುಂದಾಪುರ: ತಾಲೂಕಿನ ಅಮಾಸೆಬೈಲಿನ ಪ್ರೌಢಶಾಲೆಯಲ್ಲಿ ಅಮಾಸೆಬೈಲು ಚಾರಿಟೇಬಲ್ ಟ್ರಸ್ಟ್, ಜಿಲ್ಲಾ ಹಾಗೂ ತಾ.ಪಂ, ಹಿಂ.ವರ್ಗ ಹಾಗೂ ಅಲ್ಪ ಸಂಖ್ಯಾಕರ ಕಲ್ಯಾಣ ಇಲಾಖೆ, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ, ಕರ್ನಾಟಕ ಬ್ಯಾಂಕ್ ಹಾಗೂ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಸಂಯುಕ್ತ ಆಶ್ರಯದಲ್ಲಿ ಅಮಾಸೆಬೈಲು ಗ್ರಾಮದಲ್ಲಿ ಅನುಷ್ಠಾನಗೊಳ್ಳಲಿರುವ ವಿವಿಧ ಕಾಮಗಾರಿಗಳ ಲೋಕಾರ್ಪಣೆ ಕಾರ್ಯಕ್ರಮ ಶುಕ್ರವಾರ ನಡೆಯಿತು.

ಹಿಂದುಳಿದ ವರ್ಗಗಳ ಬಾಲಕಿಯರ ವಿದ್ಯಾರ್ಥಿ ನಿಲಯವನ್ನು ಉದ್ಘಾಟಿಸಿದ ಜಿಲ್ಲಾ ಉಸ್ತುವಾರಿ ಸಚಿವ ವಿನಯಕುಮಾರ ಸೊರಕೆಯವರು ಗ್ರಾಮದ ಅಭಿವೃದ್ದಿಯಿಂದ ದೇಶದ ಅಭಿವೃದ್ದಿ ಸಾಧ್ಯ ಎನ್ನುವ ಪರಿಕಲ್ಪನೆಗಳು ಇಂದು ಸಾಕಾರಗೊಳ್ಳುತ್ತಿದೆ. ನಮ್ಮಲ್ಲಿ ದೊರಕುವ ಸಂಪನ್ಮೂಲಗಳನ್ನು ಸದ್ಭಳಿಕೆ ಮಾಡಿಕೊಳ್ಳುವ ಬುದ್ದಿವಂತಿಕೆ ನಮಗಿರಬೇಕು. ಮಕ್ಕಳಿಗೆ ಶಿಕ್ಷಣ ನೀಡುವುದರಿಂದ ಭವಿಷ್ಯದ ಭಾರತದ ಬುನಾದಿಯನ್ನು ಭದ್ರವಾಗಿ ಕಟ್ಟಲು ಸಾಧ್ಯ ಎನ್ನುವ ನಿಟ್ಟಿನಲ್ಲಿ ಸರ್ಕಾರ ಕಾರ್ಯಕ್ರಮಗಳನ್ನು ರೂಪಿಸುತ್ತಿದೆ ಎಂದರು.

ಕಾರ್ಯಕ್ರ,ದ ಅಧ್ಯಕ್ಷತೆ ವಹಿಸಿ ಮಾತನಾಡಿದ ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ, ಅಭಿವೃದ್ದಿ ಕಾರ್ಯಗಳ ಕುರಿತು ಚಿಂತಿಸುವ ಚಿಂತನಾಶೀಲ ವ್ಯಕ್ತಿಗಳು ಇದ್ದಾಗ ಮಾತ್ರ ಈ ಸಮಸ್ಯೆಗಳು ಪರಿಹಾರ ಕಾಣಲು ಸಾಧ್ಯ ಈ ನಿಟ್ಟಿನಲ್ಲಿ ಸರಕಾರದಿಂದ ಆಗಬೇಕಾಗಿದ್ದ ಮೂಲಸೌಕರ್ಯದ ಅಭಿವೃದ್ಧಿ ಕಾರ್ಯಗಳು ಚಾರಿಟೇಬಲ್ ಟ್ರಸ್ಟ್ ಮೂಲಕ ಇಲ್ಲಿ ನಡೆದಿದೆ ಎಂದರು.

ಕರ್ನಾಟಕ ಬ್ಯಾಂಕ್‌ನ ಅಧ್ಯಕ್ಷ ಅನಂತಕೃಷ್ಣ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಉಡುಪಿ-ಚಿಕ್ಕಮಗಳೂರು ಲೋಕಸಭಾ ಸದಸ್ಯೆ ಶೋಭಾ ಕರಂದ್ಲಾಜೆ ಶಾಲಾ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನವನ್ನು ವಿತರಿಸಿದರು. ಮಾಜಿ ಸಚಿವ ಹಾಗೂ ವಿಧಾನಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಮೀನು ಮಾರುಕಟ್ಟೆ ಶಂಕು ಸ್ಥಾಪನೆ ನೆರವೇರಿಸಿದರು. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ಅಧ್ಯಕ್ಷ ಎಂ.ಎನ್ ರಾಜೇಂದ್ರಕುಮಾರ ಕೃಷಿ ಮಾರುಕಟ್ಟೆ ಉದ್ಘಾಟಿಸಿದರು, ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಕಾರ್ಯ ನಿರ್ವಾಹಕ ನಿರ್ದೇಶಕ ಡಾ.ಎಲ್.ಎಚ್ ಮಂಜುನಾಥ ಶಾಲಾ ಮಕ್ಕಳಿಗೆ ಕನ್ನಡಕ ವಿತರಿಸಿದರು, ವಿಧಾನಪರಿಷತ್ ಸದಸ್ಯ ಕೆ.ಪ್ರತಾಪ್‌ಚಂದ್ರ ಶೆಟ್ಟಿ ಕುಡಿಯುವ ನೀರು ಘಟಕವನ್ನು ಉದ್ಘಾಟಿಸಿದರು, ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ನೂತನ ಬಸ್ಸು ನಿಲ್ದಾಣ ಉದ್ಘಾಟಿಸಿದರು, ಬೈಂದೂರು ಶಾಸಕ ಕೆ.ಗೋಪಾಲ ಪೂಜಾರಿ ರಿಕ್ಷಾ, ಟ್ಯಾಕ್ಸಿ ನಿಲ್ದಾಣವನ್ನು ಉದ್ಘಾಟಿಸಿದರು.

ಕುಂದಾಪುರದ ತಹಸೀಲ್ದಾರ್ ಗಾಯತ್ರಿ ನಾಯಕ್, ಜಿ.ಪಂ ಸದಸ್ಯೆ ಗೀತಾಂಜಲಿ ಸುವರ್ಣ, ತಾ.ಪಂ ಸದಸ್ಯ ನವೀನ್‌ಚಂದ್ರ ಶೆಟ್ಟಿ ಹಾಗೂ ಸ್ಥಳೀಯ ಶಾಲೆಯ ಮುಖ್ಯೋಪಾಧ್ಯಾಯ ತಿಮ್ಮಪ್ಪ ಅತಿಥಿಗಳಾಗಿದ್ದರು.
ಇದೆ ಸಂದರ್ಭದಲ್ಲಿ ಮುಖ್ಯಮಂತ್ರಿಗಳ ಪರಿಹಾರ ನಿಧಿ ಹಾಗೂ ಎಂಡೋಸಲ್ಫಾನ್ ಪೀಡಿತರ ಮಾಸಿಕ ಪರಿಹಾರ ಹಣದ ಚೆಕ್‌ಗಳನ್ನು ವಿತರಣೆ ಮಾಡಲಾಯಿತು.

ಅಮಾಸೆಬೈಲು ಚಾರಿಟೇಬಲ್ ಟ್ರಸ್ಟ್‌ನ ಅಧ್ಯಕ್ಷ ಎ.ಜಿ ಕೊಡ್ಗಿ ಸ್ವಾಗತಿಸಿದರು, ರಾಜೇಶ್ ಕುಂದಾಪುರ ನಿರೂಪಿಸಿದರು, ಗ್ರಾಮ ಪಂಚಾಯಿತಿ ಅಧ್ಯಕ್ಷ ಸದಾಶಿವ ಶೆಟ್ಟಿ ವಂದಿಸಿದರು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com