ಬಾಲಕಾರ್ಮಿಕ ಕಾನೂನಿಗೆ ತಿದ್ದುಪಡಿಗೆ ಮಕ್ಕಳ ಅಭಿಪ್ರಾಯ ಗೌರವಿಸಿ

ಬಾಲಕಾರ್ಮಿಕ ದಿನಾಚರಣೆಯ ಸಂದರ್ಭ ಮಕ್ಕಳ ಆಗ್ರಹ

ಕುಂದಾಪುರ: ಸರ್ಕಾರಕ್ಕೆ, ನೀತಿ ನಿರ್ಧಾರ ಮಾಡುವವರಿಗೆ ಮಕ್ಕಳ ಬಗೆಗಿನ ಚರ್ಚೆಗಳು ತಲುಪಬೇಕು ಎನ್ನುವ ಉದ್ಧೇಶ ಬಾಲಕಾರ್ಮಿಕ ಕಾನೂನಿಗೆ ತಿದ್ದುಪಡಿ ತರಲು ಯೋಜನೆ ರೂಪಿಸುತ್ತಿರುವ ಈ ಸಂದರ್ಭದಲ್ಲಿ ಅತೀ ಅಗತ್ಯವಾಗಿದೆ. ಈ ಹಿನ್ನೆಲೆಯಲ್ಲಿ 1990ರಂದು ಬಾಲಕಾರ್ಮಿಕ ದಿನಾಚರಣೆಯ ಆರಂಭದೊಂದಿಗೆ ದುಡಿಯುವ ಮಕ್ಕಳ ಸಂಘಟನೆ ಭೀಮಸಂಘದ ಮೂಲಕ ಚಾಲನೆ ದೊರಕಿದೆ. ಬಾಲಕಾರ್ಮಿಕ ದಿನಾಚರಣೆಗೆ ೨೫ ವರ್ಷ ಸಲ್ಲುವ ಈ ಸಂದರ್ಭದಲ್ಲಿ ಮಕ್ಕಳು ಮಾಡುವ ಕೆಲಸದಲ್ಲಿ ಗೌರವ ಹಾಗೂ ರಕ್ಷಣೆ ಸಿಗಬೇಕು. ಒಂದೊಮ್ಮೆ ಕೆಲಸ ಮಾಡಲೇಬೇಕಾದ ಸಂದರ್ಭದಲ್ಲಿ ಜೀವನ ಕೌಶಲ್ಯ ನೀಡಬೇಕು. ವೃತ್ತಿ ಶಿಕ್ಷಣವನ್ನು ಶೈಕ್ಷಣಿಕವಾಗಿ ಸೇರ್ಪಡೆಗೊಳಿಸಬೇಕು. ಮಕ್ಕಳಿಗೆ ಆರೋಗ್ಯ ಸಮಸ್ಯೆಗಳನ್ನು ನಿವಾರಿಸಿಕೊಳ್ಳಲು ವ್ಯವಸ್ಥೆ ಕಲ್ಪಿಸಬೇಕು. ಸ್ಥಳೀಯ ಮಟ್ಟದಿಂದ ಅಂತರ್ರಾಷ್ಟ್ರೀಯ ಮಟ್ಟದ ವರೆಗೆ ಮಕ್ಕಳ ಹಕ್ಕುಗಳ ಬಗ್ಗೆ ಚರ್ಚಾ ವೇದಿಕೆ ಸೃಷ್ಟಿಯಾಗಬೇಕು. ಮಕ್ಕಳು ವಲಸೆ ಹೋಗುವುದು, ಕೆಲಸಮಾಡುವುದು ಇವುಗಳನ್ನು ತಡೆಗಟ್ಟಲು ಮಕ್ಕಳು ತೆಗೆದುಕೊಳ್ಳುವ ನಿರ್ಧಾರವನ್ನು ಹಿರಿಯರು ಗೌರವಿಸುವುದು ಸೇರಿದಂತೆ 1996ರಲ್ಲಿ ಮೂವತ್ತಾರು ದೇಶಗಳ ಮಕ್ಕಳ ಪ್ರತಿನಿಧಿಗಳು ಒಟ್ಟು ಸೇರಿ ಚರ್ಚಿಸಿದ್ದಾರೆ. ಈ ಬಗ್ಗೆ ಪ್ರತೀ ಹಂತದಲ್ಲಿ ಮಕ್ಕಳು ಇವುಗಳ ಅನುಷ್ಟಾನಕ್ಕೆ ಒತ್ತಾಯ ಹೇರುತ್ತಲೇ ಇದ್ದಾರೆ ಎಂದು ದಿ ಕನ್ಸರ‍್ನ್‌ಡ್ ಫಾರ್ ವರ್ಕಿಂಗ್ ಚಿಲ್ಡ್ರನ್ ಸಂಸ್ಥೆಯ ಕಾರ್ಯಕಾರೀ ನಿರ್ದೇಶಕ ಬಿ. ದಾಮೋದರ ಆಚಾರ್ಯ ಹೇಳಿದರು.

 ಕುಂದಾಪುರ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಬಾಲಕಾರ್ಮಿಕ ದಿನಾಚರಣೆಯಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ಕಾರ್ಯಕ್ರಮವನ್ನು ಧ್ವಜಾರೋಹಣ ಮೂಲಕ ಉದ್ಘಾಟಿಸಿದ ಕುಂದಾಪುರ ತಾಲೂಕು ಪಂಚಾಯಿತಿ ಅಧ್ಯಕ್ಷ ಭಾಸ್ಕರ ಬಿಲ್ಲವ ಮಾತನಾಡಿ, ಶಿಕ್ಷಣದಿಂದ ನಮ್ಮ ಸಂಸ್ಕೃತಿ, ಸಂಸ್ಕಾರ ಬೆಳೆಯುತ್ತದೆ. ಜೊತೆಗೆ ಜೀವನ ಕೌಶಲ್ಯ ದೊರೆಯುವ ಕೆಲಸಗಳಲ್ಲಿ ತೊಡಗಿಸಿಕೊಳ್ಳುವುದು ಮಕ್ಕಳ ಭವಿಷ್ಯದ ದೃಷ್ಟಿಯಲ್ಲಿ ತಪ್ಪಲ್ಲ ಎಂದು ಹೇಳಿದರು.
ಚೈಲ್ಡ್ ಲೇಬರ್ ಪ್ರೋಜೆಕ್ಟ್ ಡೈರೆಕ್ಟರ್ ಪ್ರಭಾಕರ ಆಚಾರ್ಯ ಮಾತನಾಡಿ, ಈಗಿನ ಸಂವಿಧಾನದ ಕಾನೂನಿನ ಅಡಿಯಲ್ಲಿ ೧೪ ವರ್ಷದ ಒಳಗಿನ ಮಕ್ಕಳು ಯಾವುದೇ ಕಾರಣಕ್ಕೂ ಒಂದು ದಿನವೂ ಹೊರಗಡೆ ಕೆಲಸಕ್ಕಾಗಿ ಹೋಗುವುದು ಕಾನೂನುಬಾಹಿರವಾಗುತ್ತದೆ. ಆದರೆ ಎಲ್ಲಾ ಸ್ವಯಂ ಸೇವಾ ಸಂಸ್ಥೆಗಳು, ಸಮಾಜ ಸೇವಾ ಸಂಸ್ಥೆಗಳು ಮಕ್ಕಳ ಭವಿಷ್ಯದ ಹಿತದೃಷ್ಟಿಯಲ್ಲಿ ಒಗ್ಗಟ್ಟಾಗಿ ಕಾರ್ಯಕ್ರಮಗಳನ್ನು ರೂಪಿಸಿದಾಗ ಜಿಲ್ಲೆಯ ಮಕ್ಕಳ ಹಕ್ಕುಗಳ ಬಗ್ಗೆ, ರಕ್ಷಣೆಯ ಬಗ್ಗೆ ಹಾಗೂ ಆರೋಗ್ಯದ ರಕ್ಷಣೆಗೆ ಇನ್ನಷ್ಟು ಸಹಾಯವಾದೀತು ಎಂದರು.

ಎಲ್ಲಾ ರೀತಿಯ ಕೆಲಸಗಳನ್ನು ನಿಷೇಧ ಮಾಡಬೇಕು ಎನ್ನುವ ವಾದ, ಕಾನೂನನ್ನು ಕಠಿಣಗೊಳಿಸಿ ಶಿಕ್ಷೆಯ ಮಟ್ಟ ಹೆಚ್ಚಿಸಬೇಕು ಎನ್ನುವ ವಾದ, ಅಧಿಕಾರಿಗಳನ್ನು ನೇರ ಹೊಣೆಗಾರರನ್ನಾಗಿ ಮಾಡಬೇಕು ಎನ್ನುವ ವಾದಗಳು ಗಟ್ಟಿಯಾಗುತ್ತಿದ್ದು, ಈ ಬಗ್ಗೆ ಸ್ಪಷ್ಟನೆಯಿಲ್ಲದೇ ಇದ್ದು, ಮಕ್ಕಳ ವಯೋಮಿತಿ ಏರಿಸಿ ಎಲ್ಲಾ ಕೆಲಸಗಳ ನಿಷೇಧ ಸರಿಯಲ್ಲ ಎನ್ನುವ ನಿರ್ಣಯ ಕೈಗೊಳ್ಳಲಾಯಿತು. ಆದರೆ ೧೮ ವರ್ಷದೊಳಗಿನ ಮಕ್ಕಳನ್ನು ಮಕ್ಕಳು ಎಂಬುದು ಮತ್ತು ಈ ಪರಿಹಾರದಲ್ಲಿ ಮಕ್ಕಳು ಹಾಗೂ ಕುಟುಂಬವನ್ನು ಪರಿಹಾರದ ನಿಟ್ಟಿನಲ್ಲಿ ಆದ್ಯತೆ ನೀಡಬೇಕು ಎನ್ನುವುದನ್ನು ಒಪ್ಪಲಾಯಿತು. 
ಮಕ್ಕಳು ಕೆಲಸ ಮಾಡುವ ಎಲ್ಲಾ ಕೆಲಸಗಳು ಅಪಾಯಕಾರಿ ಎನ್ನುವುದು ಸರಿಯಲ್ಲ. ಕುಟುಂಬದೊಡನೆ ಸೇರಿ ಕೌಶಲ್ಯ ಬೆಳೆಸುವ ಕೆಲಸಗಳು ಸಣ್ಣ ಪುಟ್ಟ ಕೆಲಸಗಳು ಅಪಾಯಕಾರಿ ಕೆಲಸಗಳು ಎನ್ನುವುದಾದರೆ ಮಕ್ಕಳ ಮುಂದಿನ ಭವಿಷ್ಯವನ್ನು ರೂಪಿಸುವುದು ಹೇಗೆ ಎನ್ನುವುದನ್ನು ಕೂಡಾ ಶಿಫಾರಸ್ಸು ಸಮಿತಿ ಚಿಂತನೆ ನಡೆಸಬೇಕು. ಆ ಮೂಲಕ ವಯೋಮಾನಕ್ಕೆ ಸರಿಯಾಗಿ ಯಾವೆಲ್ಲಾ ಕೆಲಸ ಮಾಡಬಹುದು ಮತ್ತು ಆ ಸಂದರ್ಭದಲ್ಲಿ ಮಕ್ಕಳಿಗೆ ಶಿಕ್ಷಣವನ್ನು ಹೇಗೆ ತಲುಪಿಸಬಹುದು ಎನ್ನುವ ಪರ್ಯಾಯ ಯೋಜನೆಗಳನ್ನು ರೂಪಿಸಿದಾಗ ಮಾತ್ರ ಮಕ್ಕಳ ಬದುಕಿನ ಹಕ್ಕುಗಳನ್ನು ಪಡೆದುಕೊಳ್ಳಲು ಸಹಕಾರಿಯಾಗುತ್ತದೆ ಎನ್ನುವ ಬಗ್ಗೆ ತೀರ್ಮಾನಿಸಲಾಯಿತು. ಕೌಶಲ್ಯದೊಂದಿಗೆ ಶಿಕ್ಷಣ ರೂಪಿಸಿದಾಗ ಮಾತ್ರ ದೇಶ ಅಭಿವೃದ್ಧಿ ಕಾಣಲು ಹಾಗೂ ಮಕ್ಕಳಿಗೆ ಗೌರವ ಕೊಡುವಂತಾಗುತ್ತದೆ ಎಂದು ಅಭಿಪ್ರಾಯ ವ್ಯಕ್ತವಾಯಿತು.

ಮಕ್ಕಳ ಮೇಲಿನ ದಾಳಿ ಸರಿಯಲ್ಲ: ದಾಳಿ ಮತ್ತು ರಕ್ಷಣೆ ಕಾರ್ಯಕ್ರಮದಿಂದ ಮಕ್ಕಳ ಹಕ್ಕುಗಳನ್ನು ಉಲ್ಲಂಘನೆ ಮಾಡಿದಂತಾಗುತ್ತದೆ. ಯಾವುದೇ ಮಕ್ಕಳನ್ನು ರಕ್ಷಣೆ ಸಂದರ್ಭ ಆ ಮಗು ಇದ್ದ ಸ್ಥಿತಿಗಿಂತ ಉತ್ತಮವಾದ ಸ್ಥಿತಿಗೆ ಹೋಗಬೇಕು. ಆದರೆ ಈಗ ಹಾಗಾಗುತ್ತಿಲ್ಲ. ಅದರಿಂದಾಗಿ ಮಕ್ಕಳ ಬದುಕುವ ಹಕ್ಕನ್ನೇ ಕಿತ್ತುಕೊಳ್ಲಲಾಗುತ್ತಿದೆ ಎಂದು ಅವರು ಹೇಳಿದರು. ಅಲ್ಲದೇ ದಾಳಿ ಸಂದರ್ಭ ಮಾಧ್ಯಮಗಳ ಪ್ರಚಾರ ಮತ್ತು ಸಂಬಂಧಪಟ್ಟ ಇಲಾಖೆಗಳು ಮತ್ತು ಎನ್.ಜಿ.ಓ.ಗಳು ಮಕ್ಕಳ ಭಾವಚಿತ್ರವನ್ನು ಪ್ರಕಟಿಸುವುದು ಮಕ್ಕಳಿಗೆ ಅವಮಾನವಾಗಿ, ಸ್ಥಳಾಂತರವಾಗುವಂತಾಗಿ ಮಕ್ಕಳಿಗೆ ಹಾನಿಯುಂಟು ಮಾಡುತ್ತದೆ. ಇದರಿಂದ ದುರ್ಬಲ ಮಕ್ಕಳನ್ನು ಬೆಂಬಲಿಸುವ ಬದಲಾಗಿ ರಾಜ್ಯವು ಪದೇ ಪದೇ ಕುಟುಂಬ, ಶಿಕ್ಷಣ, ಖಾಸಗೀತನ, ಶೋಷಣೆಯಿಂದ ರಕ್ಷಣೆ, ಬದುಕಿಗಾಗಿರುವ ಅವರ ಹಕ್ಕನ್ನು ಉಲ್ಲಂಘಿಸುವ ಆಕ್ರಮಣಕಾರಿ ಧೋರಣೆ ಅಲ್ಲದೇ ಕೆಲವು ಪಟ್ಟಭದ್ರ ಹಿತಾಸಕ್ತಿಗಳಿಗಾಗಿ ಕೆಲಸ ಮಾಡುತ್ತಿರುವಂತಾಗಿದೆ.

ನಂತರ ಮುಖಾಮುಖಿ ಚರ್ಚೆ ನಡೆಯಿತು. ದುಡಿಯುವ ಮಕ್ಕಳ ಅಭಿಪ್ರಾಯಗಳನ್ನು ಇಟ್ಟುಕೊಂಡು ತಾಲೂಕು ಪಂಚಾಯಿತಿ ಅಧ್ಯಕ್ಷರಿಗೆ ಮನವಿ ನೀಡುವ ಮೂಲಕ ರಾಜ್ಯ ಹಾಗೂ ಕೇಂದ್ರ ಸರ್ಕಾರಕ್ಕೆ ಕಳುಹಿಸಲಾಯಿತು. ನಂತರ ಮಕ್ಕಳ ಮಿತ್ರ ಹಾಗೂ ಮಹಿಳಾ ಮಿತ್ರರೊಂದಿಗೆ ಸಂವಾದ ಕಾರ್ಯಕ್ರಮ ನಡೆಯಿತು. ಇದೇ ಸಂದರ್ಭ ಭೀಮ ಸಂಘ ನಡೆದು ಬಂದ ಹಾದಿಯನ್ನು ಬಟ್ಟೆ ಚಿತ್ರಗಳ ಮೂಲಕ ವಿವರಿಸಲಾಯಿತು.

ಮಕ್ಕಳ ಪಂಚಾಯಿತಿ ಅಧ್ಯಕ್ಷೆ ಅನಸೂಯ, ಮಕ್ಕಳ ಪ್ರತಿನಿಧಿಗಳಾಗಿ ಅಕ್ಷಯ್ ಹಾಗೂ ಕಮಲಾಕ್ಷಿ, ವಕೀಲರಾದ ಮಂಜುನಾಥ ಅರಾಟೆ, ರಾಘವೇಂದ್ರ ಚರಣ ನಾವಡ, ಪಂಚಾಯಿತಿರಾಜ್ ತಜ್ಞ ಜನಾರ್ದನ ಮರವಂತೆ, ಶಿಕ್ಷಣ ತಜ್ಞ ಉದಯ ಗಾಂವ್‌ಕರ್ ಚರ್ಚೆಯಲ್ಲಿ ಭಾಗವಹಿಸಿದರು. ವೆಂಕಟೇಶ್ ಮೂಡ್ಕೇರಿ ಸ್ವಾಗತಿಸಿದರು. ಶ್ರೀನಿವಾಸ ಗಾಣಿಗ ನಿರೂಪಿಸಿದರು. ಪ್ರಭಾಕರ ನಾಯಕ್ ವಂದಿಸಿದರು.ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com