ಗಂಗೊಳ್ಳಿ ಟೌನ್ ಸೌಹಾರ್ದ ಉಪ್ಪುಂದ ಶಾಖೆ ಉದ್ಘಾಟನೆ

ಉಪ್ಪುಂದ: ಉದ್ಯಮಶೀಲರ, ಸಾಧಕರ ಊರು. ಅವರಿಗೆ ಆರ್ಥಿಕ ಬೆಂಬಲ ದೊರೆತರೆ ಅವರಿಂದ ಇನ್ನಷ್ಟು ಸಾಧನೆ ಸಾಧ್ಯವಾಗುತ್ತದೆ. ಅದರ ಫಲ ಊರಿಗೆ ದೊರೆಯುತ್ತದೆ. ಇಲ್ಲಿ ಆರಂಭವಾಗುತ್ತಿರುವ ಗಂಗೊಳ್ಳಿ ಟೌನ್ ಸೌಹಾರ್ದ ಸಹಕಾರಿ ಅದಕ್ಕೆ ಮುಂದಾಗಬೇಕು ಎಂದು ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠಾಧೀಶ ವಿದ್ಯಾಧಿರಾಜ ತೀರ್ಥ ಶ್ರೀಪಾದರು ಸೂಚಿಸಿದರು.

ಉಪ್ಪುಂದದ ರಾಷ್ಟ್ರೀಯ ಹೆದ್ದಾರಿ ಸಮೀಪ ಆರಂಭವಾದ ಗಂಗೊಳ್ಳಿ ಟೌನ್ ಸೌಹಾರ್ದ ಸಹಕಾರಿಯ ಶಾಖೆಯನ್ನು ಅವರು ಉದ್ಘಾಟಿಸಿದ ಬಳಿಕ ಶಾಖೆಗೆ ಶುಭ ಕೋರಿ ಮಾತನಾಡಿದರು.

ಹಣಕಾಸು ಸಂಸ್ಥೆಗಳು ಗ್ರಾಹಕರಿಗೆ ಉತ್ತಮ ಸೇವೆ ಸಲ್ಲಿಸಬೇಕಾದರೆ ಅವುಗಳಿಂದ ಸಾಲ ಪಡೆದವರು ಸಕಾಲದಲ್ಲಿ ಮರು ಪಾವತಿಸಬೇಕು. ಸಾಮರ್ಥ್ಯ ಉಳ್ಳವರು ಠೇವಣಿ ಇರಿಸಬೇಕು. ಆಡಳಿತ ಸಮಿತಿ ಒಮ್ಮತದಿಂದ ಕಾರ್ಯನಿರ್ವಹಿಸಬೇಕು ಎಂದು ಸಲಹೆಯಿತ್ತರು.

ಸಹಕಾರಿಯ ಅಧ್ಯಕ್ಷ ಎಚ್. ಗಣೇಶ ಕಾಮತ್ ಸ್ವಾಗತಿಸಿ, 95 ವರ್ಷಗಳ ಹಿಂದೆ ಸ್ಥಾಪಿಸಲ್ಪಟ್ಟ ಸಹಕಾರಿ ಸಾಗಿಬಂದ ದಾರಿಯ ಮೇಲೆ ಬೆಳಕು ಚೆಲ್ಲಿದರು. ಆಹ್ವಾನಿತರಾಗಿದ್ದ ಹೋಟೆಲ್ ಉದ್ಯಮಿ ಯು. ಸದಾನಂದ ಪ್ರಭು, ಲಕ್ಷ್ಮೀವೆಂಕಟರಮಣ ದೇವಸ್ಥಾನದ ಅಧ್ಯಕ್ಷ ವಿಷ್ಣು ಪಡಿಯಾರ್, ಖಂಬದಕೋಣೆ ರೈತರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಎಸ್. ಪ್ರಕಾಶ್ಚಂದ್ರ ಶೆಟ್ಟಿ, ಗ್ರಾಮ ಪಂಚಾಯಿತಿ ಅಧ್ಯಕ್ಷ ಎಂ. ಜಗನ್ನಾಥ, ಸಾಹಿತಿ ಯು. ಚಂದ್ರಶೇಖರ ಹೊಳ್ಳ, ಉದ್ಯಮಿ ಬಿ. ಎಸ್. ಸುರೇಶ ಶೆಟ್ಟಿ, ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿಯ ನಿರ್ದೇಶಕ ಭಾಸ್ಕರ ಕಾಮತ್, ಭಟ್ಕಳದ ಉದ್ಯಮಿ ಹನುಮಂತ ಪೈ, ಗಂಗೊಳ್ಳಿಯ ಉದ್ಯಮಿ ಬಿ. ಮಂಜುನಾಥ ಶೆಣೈ, ಶಿರಾಲಿಯ ವೆಂಕಟೇಶ ಪ್ರಭು ಉಪಸ್ಥಿತರಿದ್ದರು.

ಕಟ್ಟಡದ ಮಾಲೀಕ ಗೋವಿಂದ ದೇವಾಡಿಗ ಮತ್ತು ಶಾಖೆಯ ಸಲಹೆಗಾರ ಕೆ. ಪುಂಡಲೀಕ ನಾಯಕ್ ಅವರನ್ನು ಸನ್ಮಾನಿಸಲಾಯಿತು. ಕಾರ್ಯದರ್ಶಿ ಗಣೇಶ ನಾಯಕ್ ನಿರೂಪಿಸಿದರು. ಉಪಾಧ್ಯಕ್ಷ ಜಿ. ವೇದವ್ಯಾಸ ಆಚಾರ್ಯ ವಂದಿಸಿದರು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com