ಎ.13: ಹೆಮ್ಮಾಡಿ ಲಕ್ಷ್ಮೀನಾರಾಯಣ ದೇವರ ಬ್ರಹ್ಮರಥೋತ್ಸವ

ಹೆಮ್ಮಾಡಿ: ಇಲ್ಲಿನ ಪುರಾತನ ಶ್ರೀಲಕ್ಷ್ಮೀನಾರಾಯಣ ದೇವಸ್ಥಾನವು ಉಡುಪಿ ಜಿಲ್ಲೆಯ ಧಾರ್ಮಿಕ, ಐತಿಹಾಸಿಕ ಮಹತ್ವದ ದೇವಾಲಯಗಳಲ್ಲೊಂದಾಗಿದೆ. ನಂಬಿದ ಭಕ್ತರ ರಕ್ಷಣೆ, ಬೆಳವಣಿಗೆ, ಸಂತಾನ ಪ್ರಾಪ್ತಿ ಮತ್ತು ಸಕಲ ಆಶೋತ್ತರಗಳನ್ನು ಈಡೇರಿಸುವ ಮಹಾನ್ ಚೈತ್ಯಮೂರ್ತಿ ಶ್ರೀಲಕ್ಷ್ಮೀನಾರಾಯಣ ದೇವರ ದಿವ್ಯ ಸನ್ನಿಧಿಯಲ್ಲಿ ಸಂಭ್ರಮದ ವಾರ್ಷಿಕ ಶ್ರೀಮನ್ಮಹಾರಥೋತ್ಸವ ಎಪ್ರಿಲ್ 13ರಂದು ಸಂಪನ್ನಗೊಳ್ಳುತ್ತಿದೆ.
      ಶ್ರೀಮನ್ಮಹಾರಥೋತ್ಸವದ ಅಂಗವಾಗಿ ಏಪ್ರಿಲ್ 8ರಿಂದ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಆರಂಭಗೊಂಡಿದ್ದು, ಎ. 12ರಂದು ಪ್ರಾಕಾರಶುದ್ಧಿ, ಕಲಶಾಭಿಷೇಕ, ಹೋಮ, ಮಹಾ ನೈವೇದ್ಯ, ಬ್ರಾಹ್ಮಣ ಸಂತರ್ಪಣೆ, ಸಂಜೆ ಹೆಮ್ಮಾಡಿ ಗ್ರಾಮದಲ್ಲಿ ಪಲ್ಲಕ್ಕಿ ಉತ್ಸವ, ರಾತ್ರಿ ಹಿರೆರಂಗಪೂಜೆ. ಎ. 13ರಂದು ಪ್ರಾಕಾರಶುದ್ಧಿ, ಕಲಶಾಭಿಷೇಕ, ಹೋಮ, ರಥಶುದ್ಧ, ಮಹಾಮಂಗಳಾರತಿ, ರಥಬಲಿ, ಅಭಿಜಿನ್ ಸುಮುಹೂರ್ತದಲ್ಲಿ ರಥಾರೋಹಣ, ರಥಕಾಣಿಕೆ, ರಥಚಲನೆ ಹಾಗೂ ಮಹಾಅನ್ನಸಂತರ್ಪಣೆ. ಸಂಜೆ 5 ಗಂಟೆಗೆ ರಥ ಅವರೋಹಣ, ರಾತ್ರಿ ಭೂತಬಲಿ, ಶಯನೋತ್ಸವ. ಎ. 14ರಂದು ದೇವರನ್ನು ಏಳಿಸುವುದು, ಸಂಪೂರ್ಣ ಅಷ್ಟಾವಧಾನ, ಅಂಕುರ ಪ್ರಸಾದ ವಿತರಣೆ, ತುಲಾಭಾರ ಸೇವೆ, ರಾತ್ರಿ ಓಕುಳಿಸೇವೆ. ಎ. 15ರಂದು ಅವಭೃತ ಸ್ನಾನ, ಮೃಗಯಾನ, ಹೊಳೆಯಾನ, ಹೆಮ್ಮಾಡಿ ಗ್ರಾಮದಲ್ಲಿ ಕಟ್ಟೆ ಉತ್ಸವ, ಧ್ವಜ ಅವರೋಹಣ, ಯಾಗ ಪೂರ್ಣಾಹುತಿ, ಸಂಪ್ರೋಕ್ಷಣ್ಯ ಮಹಾ ಪ್ರಸಾದ ವಿತರಣೆ ಮೊದಲಾದ ಧಾರ್ಮಿಕ ಕಾರ್ಯಕ್ರಮಗಳು ದೇವಳದ ತಂತ್ರಿ ಕೋಟ ವಿಘ್ನೇಶ್ವರ ಸೋಮಯಾಜಿ ಮತ್ತು ಪ್ರಧಾನ ಅರ್ಚಕ ನರಸಿಂಹಮೂರ್ತಿ ಹೊಳ್ಳ ಅವರ ನೇತೃತ್ವದಲ್ಲಿ ಜರಗಲಿವೆ ಎಂದು ದೇವಸ್ಥಾನದ ಆಡಳಿತ ಮೊಕ್ತೇಸರ ಅಶೋಕ್‌ಕುಮಾರ್ ಭಟ್ ಅವರು ತಿಳಿಸಿದ್ದಾರೆ.

ಇತಿಹಾಸ: ಹೆಮ್ಮಾಡಿ ರಾ. ಹೆ. ೬೬ರಿಂದ, ಗ್ರಾಮದ ಮಧ್ಯದಿಂದ ಪಶ್ಚಿಮಾಭಿಮುಖವಾಗಿರುವ ದೇಗುಲವು ಇತಿಹಾಸ ತಜ್ಞರ ಪ್ರಕಾರ 12-13ನೇ ಶತಮಾನಕ್ಕೆ ಸೇರಿದ್ದಾಗಿದೆ. ಬಸ್ರೂರಿನ ಬಸುವರಸನ ಸಾಮಂತನಾದ ಹೇಮಂತ ಎಂಬ ರಾಜನಿಂದ ಸ್ಥಾಪಿಸಲ್ಪಟ್ಟಿದೆ. ಹೇಮಂತ ರಾಜನಾಳಿದ ಊರಾದ ಈ ಗ್ರಾಮವು ಹೇಮಪುರ ಎಂದೂ ಹೆಸರಾಗಿದೆ. ಶ್ರೀಲಕ್ಷ್ಮೀನಾರಾಯಣ ದೇವಸ್ಥಾನವು ಹೆಮ್ಮಾಡಿ ಗ್ರಾಮದ ಹೆಗ್ಗುರುತಾಗಿದೆ. ದೇವಳದ ಚರಿತ್ರೆಯ ಮೂಲಗಳು ಗತಕಾಲಗರ್ಭದಲ್ಲಿ ಲೀನವಾಗಿದ್ದು, ಶ್ರೀಲಕ್ಷ್ಮೀನಾರಾಯಣ ಸ್ವಾಮಿಯ ಮೂಲವಿಗ್ರಹ ಪ್ರತಿಷ್ಠಾಪನೆಯ ಕಾಲ ಹಾಗೂ ಕೃತ್ಯದ ವಿವರಗಳನ್ನು ನಿಶ್ಚಿತವಾಗಿ ಹೇಳಲು ವಿಶ್ವಸನೀಯ ಚಾರಿತ್ರಿಕ ದಾಖಲೆಗಳಾಗಲೀ ಮತ್ತಿತರ ಮೂಲಾಧಾರಗಳು ಲಭ್ಯವಾಗಿಲ್ಲ.
        ಬಸ್ರೂರಿನ ಬಸುವರಸನ ಕಾಲದ ಸಾಮಂತನಾಗಿದ್ದ ಹೇಮಂತ ಎಂಬ ರಾಜನು ಸಂತಾನ ಪ್ರಾಪ್ತಿಗಾಗಿ ಈ ದೇವಳವನ್ನು ನಿರ್ಮಿಸಿದನು. ಇಲ್ಲಿನ ಶಿಲಾವಿಗ್ರಹವು ಊರಿನ ಪಶ್ಚಿಮದಲ್ಲಿ ಹರಿಯುವ ಚಕ್ರಾ ಮತ್ತು ಸೌಪರ್ಣಿಕಾ ನದಿ ಸಂಗಮ ಸ್ಥಳದ ಸಮೀಪದ ಮಡುವಿನಲ್ಲಿ ರಾಜನ ಭಟರಾದ ಮೊಗವೀರ ವೃತ್ತಿಯವರಿಗೆ ಬಲೆ ಬೀಸಿದಾಗ ದೊರಕಿದ್ದು, ರಾಜನಿಗೆ ಸ್ವಪ್ನದಲ್ಲಿ ಕಾಣಿಸಿಕೊಂಡಂತೆ ಮೂರ್ತಿಯನ್ನು ತರಿಸಿ ತನ್ನ ಅರಮನೆಯ ಅರಸುಕೆರೆಯ ಪಶ್ಚಿಮದಲ್ಲಿ ಸ್ಥಾನಿಕರಬೆಟ್ಟು ಎಂಬಲ್ಲಿ
ಪಶ್ಚಿಮಾಭಿಮುಖವಾಗಿ ವಿಗ್ರಹವನ್ನು ಸ್ಥಾಪಿಸಿ ಉಂಬಳಿ-ಉತ್ತರ ಬಿಟ್ಟು ಪೂಜಾದಿ ಕೈಂಕರ್ಯಗಳನ್ನು ಕೈಗೊಳ್ಳಲು ಬೇಕಾದ ವೃತ್ತಿ ಜನರನ್ನು ನೇಮಿಸಿ ಭವತಿಕೋತ್ಸವವನ್ನು ನಡೆಸಲು ಬೇಕಾದ ಉಂಬಳಿಯನ್ನು ಬಿಟ್ಟು ಸ್ಥಾಪಿಸಿದನೆಂದು ದೇವಳದಲ್ಲಿರುವ 4 ಶಿಲಾಶಾಸನಗಳು ಹಾಗೂ ಪುರದ ಹಿರಿಯರಿಂದ ತಿಳಿದುಬರುತ್ತದೆ.

ಸುಂದರ ವಿಗ್ರಹ: ಈ ದೇವಸ್ಥಾನದಲ್ಲಿ ಪೂಜೆಗೊಳ್ಳುವ ಶ್ರೀಲಕ್ಷ್ಮೀನಾರಾಯಣ ದೇವರ ಕಪ್ಪುಶಿಲಾ ವಿಗ್ರಹವು ಸುಮಾರು ಎರಡೂವರೆ ಅಡಿಗಳಷ್ಟು ಎತ್ತರವಾಗಿದೆ. ಶಂಖ-ಚಕ್ರ, ಗದಾ-ಪದ್ಮಧಾರಿಯಾದ ಶ್ರೀಮನ್ನಾರಾಯಣನ ಮೂರ್ತಿಯು ಅತ್ಯಂತ ಸುಂದರವಾಗಿದೆ. ಈ ಮೂರ್ತಿಯಲ್ಲಿ ಶ್ರೀಲಕ್ಷ್ಮೀ ಶಕ್ತಿಯು ಅಂತರ್ಗತವಾದುದರಿಂದ ಶ್ರೀಲಕ್ಷ್ಮೀನಾರಾಯಣ ಎಂದು
ಕರೆಯಲ್ಪಡುತ್ತದೆ.

ಹೆಮ್ಮಾಡಿ ಹಬ್ಬ: ಹೆಮ್ಮಾಡಿ ಶ್ರೀಲಕ್ಷ್ಮೀನಾರಾಯಣ ದೇವರ ಶ್ರೀಮನ್ಮಹಾರಥೋತ್ಸವವು ಭಕ್ತರ ಮನದಲ್ಲಿ ಹಬ್ಬದ ಸಂಭ್ರಮವನ್ನು ಅರಳಿಸುತ್ತದೆ. ಶ್ರೀದೇವರ ಶ್ರೀಮನ್ಮಹಾರಥೋತ್ಸವವು ಹೆಮ್ಮಾಡಿ ಸೇರಿದಂತೆ ಕಟ್‌ಬೇಲ್ತೂರು, ದೇವಲ್ಕುಂದ, ಹೊಸಾಡು, ತ್ರಾಸಿ, ಗುಜ್ಜಾಡಿ ಮತ್ತು ಉಪ್ಪಿನಕುದ್ರು ಗ್ರಾಮಗಳ ಹಬ್ಬವಾಗಿದ್ದು ಏಳು ಗ್ರಾಮಗಳ ರಥೋತ್ಸವ ಎಂದೇ
ಪ್ರಸಿದ್ಧವಾಗಿದೆ.

ಜೀರ್ಣೋದ್ಧಾರ: ದೇವಾಲಯದ ಮೊದಲ ಹಂತದ ಜೀರ್ಣೋದ್ಧಾರ ಮುಕ್ತಾಯ ಕಂಡಿದ್ದು, ಶ್ರೀದೇಗುಲದಲ್ಲಿ ನೂತನವಾಗಿ ಗಣಪತಿ ದೇವರ ಗುಡಿಯನ್ನು ನಿರ್ಮಿಸಲಾಗಿದೆ. ಹಲವು ಅಭಿವೃದ್ಧಿ ಕಾರ್ಯಗಳು ನಡೆದಿದ್ದು, ದೇಗುಲದ ಶಿಲಾಮಯ ಗರ್ಭಗುಡಿ ಮತ್ತು ಒಳ ಹೆಬ್ಬಾಗಿಲ ಶಿಲಾಮಯ ಪುನರ್ರಚನೆ ಕಾರ್ಯ ಅಂದಾಜು 1.50 ಕೋಟಿ ರೂ. ವೆಚ್ಚದಲ್ಲಿ ನಡೆಸಲು ನಿರ್ಧರಿಸಲಾಗಿದೆ.
ಲೇಖನ: ಚಂದ್ರ ಕೆ. ಹೆಮ್ಮಾಡಿ.

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com