ಕುಂದಾಪುರ ಸಮುದಾಯದ ಮಕ್ಕಳ ನಾಟಕ- ನಕ್ಕಳಾ ರಾಜಕುಮಾರಿ

    ಕುಂದಾಪುರದ ಸಮುದಾಯ ಸಾಂಸ್ಕೃತಿಕ ಸಂಘಟನೆಯು ಎಂಟುದಿನಗಳ ಮಕ್ಕಳ ಮೇಳವನ್ನು ಸಂಘಟಿಸಿ ಆ ಮೇಳದ ಮಕ್ಕಳಿಂದಲೇ ನಾಟಕವನ್ನು ಆಡಿಸಿದೆ. ಮೇಳದ ಸಮಾರೋಪದಂದು (ಎಪ್ರಿಲ್ ೨೬) ನಾಟಕ ಪ್ರದರ್ಶನ ನಡೆಯಿತು. ‘ನಕ್ಕಳಾ ರಾಜಕುಮಾರಿ’ ಸಮಯದ ಮಿತಿಯಲ್ಲಿ ತಯಾರಾದ ನಾಟಕವಾದರೂ ಮಕ್ಕಳ ಉತ್ಸಾಹ, ದೃಶ್ಯ ಜೋಡಣೆ ಮತ್ತು ಮಕ್ಕಳಿಂದ ಸಹಜ ಅಭಿನಯವನ್ನು ಬಳಸಿಕೊಳ್ಳುವಲ್ಲಿ ನಿರ್ದೇಶಕರು ತೋರಿದ ಜಾಣ್ಮೆ ನಾಟಕವನ್ನು ಸುಂದರ ಕಲಾಕೃತಿಯನ್ನಾಗಿಸಿತು.
    ಆಕಾಶವಾಣಿಯ ಚಿಣ್ಣರ ಚಿಲುಮೆ ಕಾರ್ಯಕ್ರಮಕ್ಕಾಗಿ ಮಕ್ಕಳ ನಾಟಕ ಮಾಡಿಸಲು ಹೊರಟ ರಂಗಕರ್ಮಿ ಎಂ ಅಬ್ದುಲ್ ರಹಮಾನ್ ಪಾಷಾ ಮಕ್ಕಳ ಜೊತೆ ಕೆಲಸಮಾಡುತ್ತಾ, ಮಕ್ಕಳ ಸಹಾಯದಿಂದಲೇ ರಚಿಸಿದ ನಾಟಕವಿದು. ಈ ನಾಟಕಕ್ಕೆ ಹೆಸರಿಟ್ಟದ್ದು ಕೂಡಾ ಮಕ್ಕಳೇ! 
    ನಾಟಕದ ಮುಖ್ಯ ಪಾತ್ರಗಳಾದ ಎಂಕ, ಸೀನ ಮತ್ತು ನೊಣ ಹಳ್ಳಿಯ ಶ್ರಮಿಕ ಸಂಸ್ಕೃತಿಯನ್ನು ಪ್ರತಿನಿಧಿಸುತ್ತಾರೆ. ರಕ್ತ ಮಾಂಸಗಳ ಜೊತೆ ಹಸಿವು, ಮುಗ್ಧತೆಗಳನ್ನೂ ದೇಹಕ್ಕೆ ಮೆತ್ತಿಕೊಂಡಂತಿರುವ ಈ ಪಾತ್ರಗಳು ಕೆಟ್ಟ ಪ್ರಭುತ್ವದಿಂದ ಬವಣೆಗೊಳಗಾಗಿ ಮನೆಯಿಂದ ಹೊರಹಾಕಲ್ಪಟ್ಟವರು. ನಗದ ರಾಜಕುಮಾರಿಯನ್ನು ಸಂತೋಷ ಪಡಿಸಿ ಅವಳನ್ನು ನಗಿಸಿದವರಿಗೆ ದೊಡ್ಡ ಬಹುಮಾನ ದೊರೆಯುವುದೆಂಬ ಡಂಗುರದ ಘೋಷಣೆಯನ್ನು ಕೇಳಿ ಆಕೆಯನ್ನು ನಗಿಸುವ ಉದ್ಧೇಶದಿಂದ ಪ್ರಯಾಣ ಬೆಳೆಸುತ್ತಾರೆ. ರಾಜಕುಮಾರಿಯನ್ನು ನಗಿಸಲು ಹೊರಟ ಇವರು ಎದುರಿಸಿದ ಪೇಚಾಟಗಳು ನಾಟಕವನ್ನು ಲವಲವಿಕೆಯಿಂದ ಕೂಡಿರುವಂತೆ ಮಾಡುತ್ತವೆ.
    ವಿಶಿಷ್ಟ ಸಂದರ್ಭವೊಂದರಿಂದಾಗಿ ಎಂಕ, ಸೀನ ಮತ್ತು ನೊಣರನ್ನು ರಾಜಕುಮಾರಿಯು ಭೇಟಿಯಾಗುತ್ತಾಳೆ. ನಾಟಕದ ಕೊನೆಯಲ್ಲಿ ರಾಜಕುಮಾರಿ ನಗುತ್ತಾಳೆ ಮತ್ತು ನಾಟಕ ಸುಖಾಂತ್ಯಗೊಳ್ಳುತ್ತದೆ. ಹಿರಿಯರ ಅತಿಯಾದ ಕಣ್ಗಾವಲಿನಲ್ಲಿ ಮಕ್ಕಳು ಪಂಜರದ ಪಕ್ಷಿಯಾಗುತ್ತಾರೆ ಎಂಬ ಸಂದೇಶವನ್ನೂ ಈ ನಾಟಕ ಕೊಡುತ್ತದೆ. 
 ನಾಟಕಕ್ಕೆ ಬಳಸಿದ ಸಂಗೀತ ಮತ್ತು ಆಯ್ದುಕೊಂಡ ಹಾಡುಗಳು ಈ ಹಿಂದೆ ಬೇರೆ ನಾಟಕಗಳಿಗೆ ಬಳಸಿದ್ದಾದರೂ ಈ ನಾಟಕಕ್ಕೆ ಹೊಂದಿಕೊಳ್ಳುತ್ತವೆ, ಈ ಹಿಂದೆ ಸಮುದಾಯದ ಮಕ್ಕಳ ಮೇಳಗಳಲ್ಲಿ ಶಿಬಿರಾರ್ಥಿಯಾಗಿ ಭಾಗವಹಿಸಿದ ಪೂರ್ಣಚಂದ್ರ, ನಿಶಾಂತ್ ತಮ್ಮ ಹಿತವಾದ ಹಿನ್ನಲೆ ಸಂಗೀತದಿಂದಾಗಿ ನಾಟಕದ ಒಟ್ಟೂ ಪರಿಣಾಮವನ್ನು ಹೆಚ್ಚಿಸಿದ್ದಾರೆ. ಎಂಕ, ಸೀನ, ನೊಣ ಪಾತ್ರದಲ್ಲಿ ಪ್ರಾರ್ಥನಾ, ಅಜಾದ್ ಮತ್ತು ಗೌತಮ ಉತ್ತಮ ಅಭಿನಯ ನೀಡಿದರು. ರಾಜಕುಮಾರಿಯಾಗಿ ಲಿಪಿ ಹೆಗ್ಡೆ ಅಭಿನಯ ಉತ್ತಮವಾಗಿತ್ತು. ಈ ನಾಟಕದ ಜೀವವಿರುವುದು ಊರಜನರಾಗಿ, ಸೈನಿಕರಾಗಿ, ಅರಮನೆಯ ಕೆಲಸದವರಾಗಿ ಆಗಾಗ ಬರುವ ಮಕ್ಕಳ ಗುಂಪಿನ ಸಹಜ ಅಭಿನಯ ಹಾಗೂ ಉತ್ಸಾಹದಲ್ಲಿ ಎಂದೇ ಹೇಳಬೇಕು.
  ಸುಮಾರು ಅರವತ್ತು ಮಕ್ಕಳನ್ನು ರಂಗದ ಮೇಲೆ ತಂದು ಅವರಿಂದ ವಿಶಿಷ್ಟ ಚಲನ ವಿನ್ಯಾಸಗಳನ್ನು ಸೃಷ್ಟಿಸುವಲ್ಲಿ ನಿರ್ದೇಶಕ ವಾಸುದೇವ ಗಂಗೇರ ಯಶಸ್ವಿಯಾಗಿದ್ದಾರೆ. ಬಹಳ ಜಾಣ್ಮೆಯಿಂದ ರಂಗಪರಿಕರಗಳನ್ನು ಬಳಸಿದ್ದಾರೆ. ನಾಲ್ಕು ಪೈಪ್ ತುಂಡುಗಳಿಂದಲೇ ಅರಮನೆಯನ್ನೂ ಸೆರಮನೆಯನ್ನೂ ಸೃಷ್ಟಿಸಿದ್ದಾರೆ. ಅವೇ ಪೈಪುಗಳನ್ನೇ ಬಂದೂಕು, ನಳಿಕೆ ವಾಧ್ಯಗಳನ್ನಾಗಿ ಕೂಡಾ ಪರಿವರ್ತಿಸಿದ್ದಾರೆ. ಅತ್ಯಂತ ಸರಳವಾದ ನಿರೂಪಣಾ ತಂತ್ರ, ಹಿತವಾದ ಸಂಗೀತ, ಮಕ್ಕಳ ಧಾರಾಳ ಸಂತಸವನ್ನೇ ನಾಟಕದ ಶಕ್ತಿಯಾಗಿಸಿದ ನಿರ್ದೇಶಕರ ಜಾಣ್ಮೆ ಮೆಚ್ಚುವಂತಹದ್ದು.
 ಮಕ್ಕಳೇ ಸಂಭಾಷಣೆಗಳನ್ನು ಬರೆಯುವಂತೆ, ಕತೆಯನ್ನು ಮುಂದುವರಿಸುವಂತೆ ಪ್ರೇರೇಪಿಸಿ ಅಬ್ದುಲ್ ರೆಹಮಾನ್ ಪಾಷಾರವರು ರಚಿಸಿದ ಈ ನಾಟಕವನ್ನು ವಾಸುದೇವ ಗಂಗೇರ ಅದೇ ಸ್ಪೂರ್ತಿಯಿಂದ ನಿರ್ದೇಶಿಸಿದ್ದಾರೆ. ಸಂಭಾಷಣೆಗಳನ್ನು ಮಕ್ಕಳಿಗೆ ಉರುಹೊಡೆಯಲು ಹೇಳದೆ ಅವರೇ ಸಂಭಾಷಣೆಗಳನ್ನು ರಚಿಸುವಂತೆ ಮಾಡಿರುವುದರಿಂದ ಮಕ್ಕಳು ಸಹಜವಾಗಿ ಅಭಿನಯಿಸಲು ಸಾಧ್ಯವಾಗಿದೆ. ಚಿನ್ನಾ ವಾಸುದೇವ ಅವರ ನೃತ್ಯ ಸಂಯೋಜನೆ ನಾಟಕದ ಇನ್ನೊಂದು ಧನಾತ್ಮಕ ಅಂಶ.
  ಒಟ್ಟಾರೆಯಾಗಿ, ಕುಂದಾಪುರ ಸಮುದಾಯದ ಈ ಪ್ರಯತ್ನ ಪ್ರಸಂಶನೀಯ.

ಚಿತ್ರ- ವಿಮರ್ಶೆ
ಎಸ್. ಎಮ್. ನಾಯಕ
ಕೆರಾಫ್-ಎಮ್. ಎಸ್ ಪೈ 
ಕೋಡಿ ರಸ್ತೆ, ಕುಂದಾಪುರ
   

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com