ಅಕಾಲಿಕ ಮಳೆಗೆ ವಿವಿಧೆಡೆ ಹಾನಿ

ಕುಂದಾಪುರ: ತಾಲೂಕಿನಾದ್ಯಂತ ಸೋಮವಾರ ರಾತ್ರಿಯಿಂದ ಮಂಗಳವಾರ ಮಂಜಾನೆಯ ತನಕ ಸುರಿದ ಗುಡುಗು, ಸಿಡಿಲು ಸಹಿತ ಅಕಾಲಿತ ಮಳೆಗೆ ವಿವಿಧೆಡೆ ಹಾನಿ ಸಂಭವಿಸಿದೆ. ಜನಸಂಚಾರವು ಅಸ್ತವ್ಯಸ್ತಗೊಂಡು ಪರಿತಪಿಸುವಂತಾಯಿತು.

ಅಕಾಲಿಕ ಮಳೆಗೆ ಕುಂದಾಪುರ ಬೈಂದೂರು, ಗಂಗೊಳ್ಳಿ ಮುಂತಾದ ತಗ್ಗು ಪ್ರದೇಶಗಳಲ್ಲಿ ನೀರು ಸಂಗ್ರಹಗೊಂಡು ಜನಸಾಮಾನ್ಯರಿಗೆ ತೊಂದರೆಯುಂಟಾಯಿತು. ಮಳೆ ನೀರು ಹರಿದು ಹೋಗಲು ಸೂಕ್ತ ವ್ಯವಸ್ಥೆ ಇಲ್ಲದ ಕಾರಣ ರಸ್ತೆಗಳ ಮೇಲೆ ವ್ಯಾಪಕ ನೀರು ನಿಂತು ಜನಸಂಚಾರಕ್ಕೆ ತೊಂದರೆಯಾಯಿತು. ರಾಷ್ಟ್ರೀಯ ಹೆದ್ದಾರಿಯಲ್ಲಿ ರಸ್ತೆ ಕಾಮಗಾರಿಗಳು ನಡೆಯುತ್ತಿದ್ದ ಕಾರಣ ಎಲ್ಲೆಡೆಯೂ ನೀರಿನ ಹರಿವಿಗೆ ತೊಂದರೆಯುಂಟಾಯಿತು.

 ಹಟ್ಟಿಯಂಗಡಿ ಗ್ರಾಮದ ಅರೆಕಲ್ಲು ಮನೆ ಭಾಸ್ಕರ ಪೂಜಾರಿಯವರ ಮನೆಗೆ ಸಿಡಿಲು ಅಪ್ಪಳಿಸಿದ ಪರಿಣಾಮ 2 ಹಸುಗಳು ಮೃತಪಟ್ಟಿವೆ. ಮನೆ ಜಖಂಗೊಂಡಿದೆ. ವಿದ್ಯುತ್ ಉಪಕರಣಗಳು ಸಂಪೂರ್ಣ ಸುಟ್ಟುಹೋಗಿದೆ. ಕೊಡ್ಲಾಡಿ ಪಂಜುನಾಯ್ಕ್ ಅವರ ಮನೆ ಸಿಡಿಲು ಹೊಡೆತಕ್ಕೆ ಜರ್ಜರಿತವಾಗಿದೆ. ಗೋಡೆ, ಮೇಲ್ಮಾಡು, ವಿದ್ಯುತ್ ಉಪಕರಣ ಸುಟ್ಟುಹೋಗಿದ್ದು ಮನೆಯ ಸದಸ್ಯರಾದ ಗೌರಿ, ರೇವತಿ, ಪುಟ್ಟ ಮಕ್ಕಳಾದ ದೀಪ್ತಿ ಮತ್ತು ಪ್ರಥ್ವಿ ಸಿಡಿಲ ಆಘಾತಕ್ಕೆ ತುತ್ತಾಗಿದ್ದು ಕುಂದಾಪುರದ ಖಾಸಗಿ ಆಸ್ಪತ್ರೆಗೆ ದಾಖಲುಗೊಂಡಿದ್ದಾರೆ. 

ಹೊಂಬಾಡಿ- ಮಂಡಾಡಿ ಗ್ರಾಮದ ಶ್ರೀಮತಿ ಶೆಡ್ತಿ, ಕರ್ಕುಂಜೆ ಗ್ರಾಮದ ಹಕ್ಲಬೆಟ್ಟು ಶೀನ ಪೂಜಾರಿ ಮತ್ತು ಬಸವ ದೇವಾಡಿಗ, ಕೆಂಚನೂರು ಗ್ರಾಮದ ಕದ್ರಿಗುಡ್ಡೆ ಸಾಧು, ಬೆಳ್ಳಾಲ ಗ್ರಾಮದ ಹುಲಿಕೊಡ್ಲು ಶೇಖರ ಪೂಜಾರಿ ಎಂಬವರ ಮನೆಗೆ ಸಿಡಿಲು ಬಡಿದು ಮನೆ ಹಾನಿಗೀಡಾಗಿದೆ. ಶೇಖರ ಪೂಜಾರಿಯವರ ಮನೆಯ ಸದಸ್ಯರಾದ ನಾಗ ಪೂಜಾರಿ ಮತ್ತು  ಸಿಡಿಲ ಆಘಾತಕ್ಕೆ ತುತ್ತಾಗಿ ಆಸ್ಪತ್ರೆಗೆ ದಾಖಲುಗೊಂಡಿದ್ದಾರೆ. ಒಟ್ಟು ರೂ.5 ಲಕ್ಷ ನಷ್ಟ ಅಂದಾಜಿಸಲಾಗಿದೆ.

ದಿಢೀರ್‌ ಸುರಿದ ಭಾರೀ ಮಳೆಯಿಂದ ಕೆರಾಡಿ, ಬೆಳ್ಳಾಲ, ಮುದೂರು, ಜಡ್ಕಲ್‌, ವಂಡ್ಸೆ, ಇಡೂರು, ಬೈಂದೂರು ಪರಿಸರದಲ್ಲಿನ ಸುಗ್ಗಿ ಭತ್ತದ ಪೈರು ನೀರಿನಲ್ಲಿ ತೊಯ್ದು ಹೋಯಿತು. ಸೋಮವಾರ ಸುಗ್ಗಿ ಗದ್ದೆಯ ಭತ್ತದ ಬೆಳೆ ಕಟಾವು ಮಾಡಲಾಗಿತ್ತು. ಪೈರು ಗದ್ದೆಯಲ್ಲಿಯೇ ಇದ್ದ ಸಂದರ್ಭ ದಿಢೀರಾಗಿ ಸುರಿದ ಮಳೆಯಿಂದಾಗಿ ರೈತರು ಕಂಗಾಲಾದರು

ಅತೀವ ಸೆಕೆಯಿಂದ ಬಳಲುತ್ತಿದ್ದ ಮಂದಿ ಮಾತ್ರ ಒಂದೆ ಸಮನೆ ಸುರಿಯುತ್ತಿದ್ದ ಮಳೆಯಿಂದಾಗಿ ಕೊಂಚ ನಿಟ್ಟುಸಿರು ಬಿಟ್ಟರು. ಆದರೆ ಮಂಗಳವಾರ ಮಧ್ಯಾಹ್ನದ ವೇಳೆಗೆ ಮತ್ತೆ ಬಿಸಿಲಿನ ಪ್ರತಾಪ ಕಾಣಿಸಿಕೊಂಡಿತ್ತು.

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com