ಸಿಗಡಿ ಕೃಷಿಕರ ಸಮ್ಮಿಲನ ಉದ್ಘಾಟನೆ

ಕುಂದಾಪುರ: ಸಿಗಡಿ ಕೃಷಿ ಲಾಭದಾಯಕ ಉದ್ಯಮವಾಗಿ ಬೆಳೆದಿದ್ದರೂ ಸಿಗಡಿ ಕೃಷಿಕರು ಹತ್ತು- ಹಲವು ಸವಾಲುಗಳು ಎದುರಿಸುತ್ತಿದ್ದಾರೆ. ಕುಂದಾಪುರ ತಾಲೂಕಿನಲ್ಲಿ 20 ವರ್ಷಗಳ ಹಿಂದೆ ಸಿಗಡಿ ಕೃಷಿ ಪರಿಚಯವಾಗಿದ್ದು, 200ಕ್ಕೂ ಅಧಿಕ ಸಂಖ್ಯೆಯಲ್ಲಿ ಇದ್ದ ಸಿಗಡಿ ಕೃಷಿ ಬೆಳೆಗಾರರ ಸಂಖ್ಯೆ ಇತ್ತೀಚಿನ ದಿನಗಳಲ್ಲಿ ಗಣನೀಯವಾಗಿ ಇಳಿಮುಖ ಕಂಡಿದೆ. ಸರಕಾರದ ಸಹಾಯಹಸ್ತ, ಉತ್ತೇಜನ ಕ್ಷೀಣವಾಗಿದ್ದರಿಂದ ಸಿಗಡಿ ಕೃಷಿಕರು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಕೊಲ್ಲೂರು ದೇವಳ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೃಷ್ಣಪ್ರಸಾದ್‌ ಅಡ್ಯಂತಾಯ ಅವರು ಹೇಳಿದರು.

ಸಿಗಡಿ ಬೆಳೆಗೆ ಅಗತ್ಯವಾದ ಆಹಾರ ವಿತರಕರಾದ ತ್ರಾಸಿಯ ಮಹಾಗಣಪತಿ ಟ್ರೇಡಿಂಗ್‌ ಸರ್ವೀಸಸ್‌ ಇದರ ಆರಂಭೋತ್ಸವ ಅಂಗವಾಗಿ ಆವಂತಿ ಫೀಡ್ಸ್‌ ಲಿಮಿಟೆಡ್‌ ಸಂಸ್ಥೆ ಸಹಭಾಗಿತ್ವದೊಂದಿಗೆ ಹೆಮ್ಮಾಡಿಯ ಜಯಶ್ರೀ ಸಭಾಂಗಣದಲ್ಲಿ ಜರಗಿದ ಸಿಗಡಿ ಕೃಷಿಕರ ಸಮ್ಮಿಲನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಸಿಗಡಿ ಕೃಷಿಕರ ಹಿತಚಿಂತನೆಗಿಂತ ಕೇವಲ ತಮ್ಮ ಉತ್ಪನ್ನಗಳ ಮಾರುಕಟ್ಟೆಗಾಗಿ ಬರುವ ಕಂಪೆನಿಗಳ ಆಸೆ, ಆಮಿಷಗಳಿಗೆ ಸಿಗಡಿ ಕೃಷಿಕರು ಬಲಿಬೀಳದೇ ಉತ್ತಮ ಗುಣಮಟ್ಟದ ಸಿಗಡಿ ಆಹಾರವನ್ನು ಪೂರೈಸುವ ಡೀಲರುಗಳೊಂದಿಗೆ ಬಾಂಧವ್ಯ ಇಟ್ಟುಕೊಳ್ಳುವುದು ಹೆಚ್ಚು ಉಪಯುಕ್ತ ಎಂದರು. ಅಧ್ಯಕ್ಷತೆ ವಹಿಸಿದ್ದ ಆವಂತಿ ಫೀಡ್ಸ್‌ನ ಆಡಳಿತ ನಿರ್ದೇಶಕ ಪರೇಶ್‌ಕುಮಾರ್‌ ಶೆಟ್ಟಿ ಅವರು ಮಾತನಾಡಿ, ಸಿಗಡಿ ಬೆಳೆಗಾರರ ಹಿತ ಕಾಯಲು ಹಾಗೂ ಉತ್ತಮ ಗುಣಮಟ್ಟದ ಸಿಗಡಿ ಫೀಡ್ಸ್‌ ಪೂರೈಸಲು ಆವಂತಿ ಫೀಡ್ಸ್‌ ಸದಾ ಬದ್ಧ. ಇಂತಹ ವಿಶ್ವಾಸಾರ್ಹತೆಯಿಂದ ಸಂಸ್ಥೆ ಸಿಗಡಿ ಕೃಷಿಕರ ಮನೆಮಾತಾಗಿದೆ ಎಂದರು.

ಮುಖ್ಯ ಅತಿಥಿ ಹೆಮ್ಮಾಡಿ ಪಂಚಗಂಗಾ ಸಹಕಾರಿ ಸಂಘದ ಅಧ್ಯಕ್ಷ, ಜಿ.ಪಂ. ಮಾಜಿ ಉಪಾಧ್ಯಕ್ಷ ಎಚ್‌. ರಾಜು ದೇವಾಡಿಗ, ಆವಂತಿ ಫೀಡ್ಸ್‌ನ ಉಪ ಆಡಳಿತ ನಿರ್ದೇಶಕ ಶ್ರೀನಿವಾಸ್‌ ಮೊಹಂತಿ ಮೊದಲಾದವರು ಉಪಸ್ಥಿತರಿದ್ದರು.

ಮಹಾಗಣಪತಿ ಟ್ರೇಡಿಂಗ್‌ ಸಂಸ್ಥೆ ಮಾಲಕ ತಮ್ಮಯ್ಯ ದೇವಾಡಿಗ ಗುಜ್ಜಾಡಿ ಸ್ವಾಗತಿಸಿದರು. ಸಂಜೀವ ಹೊಸಾಡು ಅವರು ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com