ಕಲೆಯೆಂಬ ವ್ಯಂಜನವಿದ್ದರೆ ಬದುಕು ಮತ್ತಷ್ಟು ಸುಂದರ: ಎಸ್. ಜನಾರ್ಧನ ಮರವಂತೆ

ಬೈಂದೂರು: ಮನುಷ್ಯ ತನ್ನ ಬದುಕನ್ನು ಸಮೃದ್ಧಗೊಳಿಸಿಕೊಳ್ಳಲು ಕಲೆ, ಸಾಹಿತ್ಯದಂತಹ ಹಲವು ಮಾಧ್ಯಮವನ್ನು ಕಂಡುಕೊಂಡಿದ್ದಾನೆ. ದಿನನಿತ್ಯದ ಕಾಯಕದ ನಡುವೆ ಒಂದಿಷ್ಟು ಹೊತ್ತು ಸಮಾಜಮುಖಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದು ಅನಿವಾರ್ಯವೂ ಆಗಿದೆ ಎಂದು ಹಿರಿಯ ಪತ್ರಕರ್ತ ಎಸ್. ಜನಾರ್ಧನ ಮರವಂತೆ ಹೇಳಿದರು.

ಅವರು ಬೈಂದೂರು ರಥೋತ್ಸವದ ಅಂಗವಾಗಿ ಸುರಭಿ ರಿ. ಬೈಂದೂರು ಇಲ್ಲಿನ ಶಾರದಾ ವೇದಿಕೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಕಾರದೊಂದಿಗೆ ಆಯೋಜಿಸಲಾಗಿದ್ದ  ನಾಲ್ಕು ದಿನಗಳ ’ಸುರಭಿ ಕಲಾಸಿರಿ’ಯ ಕೊನೆಯ ದಿನ ಸಭಾ ಕಾರ್ಯಕ್ರಮದಲ್ಲಿ ಸಮಾರೋಪ ಭಾಷಣಕಾರರಾಗಿ ಮಾತನಾಡಿದರು.

ದಿನವೂ ಅನ್ನ ಊಟಮಾಡುವವನಿಗೆ ಅದು ಹೆಚ್ಚು ರುಚಿಸುವುದಿಲ್ಲ. ಅದಕ್ಕಾಗಿ ಒಂದಿಷ್ಟು ವ್ಯಂಜನಗಳನ್ನು ಸೇರಿಸಿಕೊಂಡು ಊಟಮಾಡುತ್ತಾನೆ. ಬದುಕು ಕೂಡ ಒಂದು ದೃಷ್ಠಿಯಲ್ಲಿ ಅನ್ನದಂತೆ. ಇಲ್ಲಿ ದುಡಿಯುವುದು, ಗಳಿಸುವುದು ಎಲ್ಲಾ ಇದ್ದದ್ದೇ. ಆದರೆ ಬದುಕಿನಲ್ಲಿ ಕಲೆ ಎಂಬ ವ್ಯಂಜನ ಸೇರಿಕೊಂಡಾಗ ಅದು ಮತ್ತಷ್ಟು ಸುಂದರಗೊಳ್ಳುತ್ತದೆ ಎಂದ ಅವರು ಬೈಂದೂರಿನ ಎಲ್ಲಾ ಸಂಘಟನೆಗಳೂ ಕಲೆಯನ್ನು ಪರಿಣಾಮಕಾರಿಯಾಗಿ ಪ್ರದರ್ಶಿಸುವ ಕೆಲಸವನ್ನು ಮಾಡುತ್ತಾ ಬಂದಿವೆ ಎಂದು ಶ್ಲಾಘಿಸಿದರು.

ಯಡ್ತರೆ ಗ್ರಾ.ಪಂ ಅಧ್ಯಕ್ಷ ಎನ್. ನಾಗರಾಜ ಶೆಟ್ಟಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಸುರಭಿ ಕಾರ್ಯದರ್ಶಿ ಲಕ್ಷ್ಮಣ ಕೊರಗ ಉಪಸ್ಥಿತರಿದ್ದರು.

ಸುರಭಿ ಅಧ್ಯಕ್ಷ ಶಿವರಾಮ ಕೊಠಾರಿ ಸ್ವಾಗತಿಸಿದರು, ನಿರ್ದೇಶಕ ಸುಧಾಕರ ಪಿ. ವಂದಿಸಿದರು. ನಿರ್ದೇಶಕ ಗಣಪತಿ ಹೋಬಳಿದಾರ್ ಕಾರ್ಯಕ್ರಮ ನಿರೂಪಿಸಿದರು.

ಸಭಾ ಕಾರ್ಯಕ್ರಮದ ಬಳಿಕ ಸುರಭಿ ರಿ ಬೈಂದೂರು ಆಯೋಜಿಸಿದ ಸುರಭಿ ಕಲಾಸಿರಿಯ ರಂಗವೈಭವದಲ್ಲಿ ಸಾಗರದ ಥಿಯೇಟರ್ ಸಮುರಾಯ್ ತಂಡದಿಂದ ಹೆಚ್. ತೋಂಬಾ ನಿರ್ದೇಶನದ ’ಹಸಿದ ಕಲ್ಲುಗಳು’ ನಾಟಕ ಪ್ರದರ್ಶನಗೊಂಡಿತು.

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com