ಭಾರತವನ್ನು ಹಸಿವು ಮುಕ್ತ ದೇಶವನ್ನಾಗಿಸಲು ಕಾಂಗ್ರೆಸ್ ಪಣ

ಕುಂದಾಪುರ: ರಾಜೀವ್‌ ಗಾಂಧಿ ಪಂಚಾಯತ್‌ ವ್ಯವಸ್ಥೆಗೊಂದು ಆಯಾಮ ನೀಡಿದರೆ, ಸೋನಿಯಾ ಗಾಂಧಿ ಹಸಿವು ಮುಕ್ತ ಭಾರತಕ್ಕೆ ಸಂಕಲ್ಪ ಮಾಡಿದರು. ಹಸಿವು ಮುಕ್ತ ಭಾರತ ಹಾಗೂ ಕರ್ನಾಟಕ ಕಾಂಗ್ರೆಸ್‌ ಸಂಕಲ್ಪವಾಗಿದೆ. ಇದನ್ನು ಸಹಿಸದ ಬಿಜೆಪಿ ಕಾಂಗ್ರೆಸ್‌ ಮುಕ್ತ ಭಾರತ ಎನ್ನುತ್ತಿದೆ. ಆದರೆ ಇದು ಸಾಧ್ಯವಾಗದ ಮಾತು ಎಂದು ರಾಜ್ಯಸಭಾ ಸದಸ್ಯ ಆಸ್ಕರ್‌ ಫೆರ್ನಾಂಡಿಸ್‌ ಹೇಳಿದರು.

ಅವರು ಕುಂದಾಪುರದ ಆರ್‌.ಎನ್‌. ಶೆಟ್ಟಿ ಸಭಾಭವನದಲ್ಲಿ ನಡೆದ ಕುಂದಾಪುರ ಬ್ಲಾಕ್‌ ಕಾಂಗ್ರೆಸ್‌ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು.

ದೇಶದಲ್ಲಿ ಪಂಚಾಯತ್‌ರಾಜ್‌ ವ್ಯವಸ್ಥೆಗೆ ಒಂದು ಸ್ವರೂಪ ಬಂದಿದ್ದು ರಾಜೀವ್‌ ಗಾಂಧಿ ಪ್ರಧಾನಿಯಾಗಿದ್ದಾಗ. ಜನರಿಗೆ ಸಂವಿಧಾನಬದ್ಧ ಹಕ್ಕನ್ನು ಎತ್ತಿ ಹಿಡಿಯಲು ಅವರು ಅವಕಾಶ ಮಾಡಿಕೊಟ್ಟರು. ಇದರಿಂದ ಪಂಚಾಯತ್‌ಗಳ ಬಲವರ್ಧನೆಯಾಯಿತು. ಮೇ 29ರಂದು ನಡೆಯುವ ಗ್ರಾ. ಪಂ. ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷ ಬೆಂಬಲಿತ ಅಭ್ಯರ್ಥಿಗಳನ್ನು ಆರಿಸಿ, ಹೊಸ ದಾಖಲೆ ನಿರ್ಮಾಣ ಮಾಡಬೇಕು. ಮತ್ತೂಮ್ಮೆ ಕಾಂಗ್ರೆಸ್‌ ಪಕ್ಷದ ನೇತೃತ್ವ ಎತ್ತಿ ಹಿಡಿಯಬೇಕು ಎಂದು ಅವರು ಹೇಳಿದರು.

ಪ್ರಜಾಪ್ರಭುತ್ವದ ಬುನಾದಿ ಗ್ರಾ. ಪಂ. ವ್ಯವಸ್ಥೆ. ಇಲ್ಲಿ ಉತ್ತಮ ಫಲಿತಾಂಶ ಬಂದರೆ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಗೆಲ್ಲಲು ಸುಲಭ. ಆದುದರಿಂದ ಗ್ರಾ. ಪಂ. ಚುನಾವಣೆಯಲ್ಲಿ ಕಾಂಗ್ರೆಸ್‌ ಬೆಂಬಲಿತ ಅಭ್ಯರ್ಥಿಗಳನ್ನು ಗೆಲ್ಲಿಸಲು ಶ್ರಮಿಸಬೇಕು ಎಂದು ಅವರು ಹೇಳಿದರು.

ಜಿಲ್ಲಾ ಉಸ್ತುವಾರಿ ಸಚಿವ ವಿನಯಕುಮಾರ್‌ ಸೊರಕೆ ಮಾತನಾಡಿ, ಐದು ವರ್ಷ ಆಳ್ವಿಕೆಯಲ್ಲಿ ಬಿಜೆಪಿ ರಾಜ್ಯದಲ್ಲಿ ಭ್ರಷ್ಟಾಚಾರ ಹಾಗೂ ದುರಾಳಿತ ನಡೆಸಿದೆ. ಇದನ್ನು ಸಹಿಸದ ಜನರು ಕಾಂಗ್ರೆಸ್‌ಗೆ ಅವಕಾಶ ನೀಡಿದ್ದಾರೆ. ಕಳೆದ ಎರಡು ವರ್ಷದ ಆಡಳಿತದಲ್ಲಿ ಸರಕಾರ ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿದ ಹೆಚ್ಚಿನ ಭರವಸೆಗಳನ್ನು ಈಡೇರಿಸಿದೆ. ಅನ್ನಬಾಗ್ಯ, ಕ್ಷೀರ ಭಾಗ್ಯ ಯೋಜನೆಗಳನ್ನು ಜಾರಿಗೆ ತಂದಿದೆ. ಉಚಿತ ಅಕ್ಕಿ ನೀಡುವಂತಹ ಯೋಜನೆಯನ್ನು ದೇಶದಲ್ಲೇ ಮೊದಲ ಬಾರಿಗೆ ಆರಂಭಿಸಿದ್ದೇವೆ ಎಂದರು.

ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ, ಶಾಸಕ ಕೆ. ಗೋಪಾಲ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ವಿಧಾನ ಪರಿಷತ್‌ ಸದಸ್ಯ ಪ್ರತಾಪಚಂದ್ರ ಶೆಟ್ಟಿ, ಕೆಪಿಸಿಸಿ ಸದಸ್ಯ ಎಂ.ಎ. ಗಫೂರ್‌, ಜಿಲ್ಲಾ ಕಾಂಗ್ರೆಸ್‌ ಸದಸ್ಯ ಅಶೋಕ್‌ ಕುಮಾರ್‌ ಕೊಡವೂರು, ಜಿಲ್ಲಾ ಕಾಂಗ್ರೆಸ್‌ ಉಪಾಧ್ಯಕ್ಷ ಹಿರಿಯಣ್ಣ, ಪಕ್ಷದ ಮುಖಂಡರಾದ ದಿನಕರ ಶೆಟ್ಟಿ, ಮಾಣಿಗೋಪಾಲ, ದೇವಕಿ ಸಣ್ಣಯ್ಯ, ಪಕ್ಷದ ಬೆಂಬಲಿತ ಅಭ್ಯರ್ಥಿಗಳು ಉಪಸ್ಥಿತರಿದ್ದರು.

ಕುಂದಾಪುರ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಮಲ್ಯಾಡಿ ಶಿವರಾಮ ಶೆಟ್ಟಿ ಸ್ವಾಗತಿಸಿ, ಕಾರ್ಯದರ್ಶಿ ಕೋಣಿ ನಾರಾಯಣ ಆಚಾರ್‌ ಕಾರ್ಯಕ್ರಮ ನಿರ್ವಹಿಸಿದರು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com