ಗಂಗೊಳ್ಳಿಯಲ್ಲಿ ಶಾಂತಿ ಪಾಲನೆಗೆ ಕ್ರಮ: ಎಸ್‌ಪಿ ಭರವಸೆ

ಕುಂದಾಪುರ: ಅನೇಕ ಅನಪೇಕ್ಷಿತ ಘಟನೆಗಳ ಹಿನ್ನೆಲೆಯಲ್ಲಿ ಗಂಗೊಳ್ಳಿಯನ್ನು ಕೋಮುಸೂಕ್ಷ್ಮ ಪ್ರದೇಶ ಎಂದು ಗುರುತಿಸಲಾಗುತ್ತಿದ್ದು, ಇಲ್ಲಿ ಶಾಂತಿ ಪಾಲನೆಗೆ ಎಲ್ಲ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಪೊಲೀಸ್‌ ಅಧೀಕ್ಷಕ ಕೆ. ಅಣ್ಣಾಮಲೈ ಹೇಳಿದರು.

ಅವರು ಗಂಗೊಳ್ಳಿಗೆ ಹೋಗುವ ಮಾರ್ಗದ ಗುಜ್ಜಾಡಿಯ ನಾಯಕವಾಡಿಯಲ್ಲಿ ಸಾರ್ವಜನಿಕರ ನೆರವಿನಿಂದ ನಿರ್ಮಿಸಿರುವ ಪೊಲೀಸ್‌ ಚೆಕ್‌ಪೋಸ್ಟ್‌ ಉದ್ಘಾಟನ ಕಾರ್ಯಕ್ರಮದಲ್ಲಿ ಮಾತನಾಡಿದರು.

ನಾಯಕವಾಡಿ-ಗುಜ್ಜಾಡಿಯಲ್ಲಿ ಆರಂಭಿಸಲಾಗಿರುವ ಈ ಚೆಕ್‌ಪೋಸ್ಟ್‌ನಲ್ಲಿ ಜನರ ಸಹಕಾರದೊಂದಿಗೆ ದಿನದ 24 ಗಂಟೆ ಪೊಲೀಸ್‌ ಅಥವಾ ಹೋಮ್‌ಗಾರ್ಡ್‌ ಇರುವಂತೆ ನೋಡಿಕೊಳ್ಳಲಾಗುವುದು. ಮುಂದಿನ ದಿನಗಳಲ್ಲಿ ಗಂಗೊಳ್ಳಿಯಲ್ಲಿ ಇನ್ನೊಂದು ಚೆಕ್‌ಪೋಸ್ಟ್‌ ತೆರೆಯಲು ಮತ್ತು ಸುಸಜ್ಜಿತ ಪೊಲೀಸ್‌ ಹೊರಠಾಣೆ ಆರಂಭಿಸಲು ಇಲಾಖೆ ಸಿದ್ಧವಿದೆ ಎಂದರು.

ಗಂಗೊಳ್ಳಿಯ ಹಿರಿಯ ನಾಗರಿಕ, ಗ್ರಾ.ಪಂ. ಸದಸ್ಯ ಯೂನಸ್‌ ಸಾಹೇಬ್‌ ಚೆಕ್‌ಪೋಸ್ಟ್‌ ಉದ್ಘಾಟಿಸಿದರು. ಕುಂದಾಪುರ ಡಿವೈಎಸ್‌ಪಿ ಎಂ. ಮಂಜುನಾಥ ಶೆಟ್ಟಿ, ಬೈಂದೂರು ವೃತ್ತ ನಿರೀಕ್ಷಕ ಎಂ. ಸುದರ್ಶನ, ಗಂಗೊಳ್ಳಿ ಎಸ್‌ಐ ಬಿ. ಸುಬ್ಬಣ್ಣ, ಮರವಂತೆ ಗ್ರಾ.ಪಂ. ಮಾಜಿ ಅಧ್ಯಕ್ಷ ಎಸ್‌. ಜನಾರ್ದನ್‌, ಗಂಗೊಳ್ಳಿ ಗ್ರಾಮ ಪಂಚಾಯತ್‌ ಮಾಜಿ ಸದಸ್ಯ ಬಿ. ರಾಘವೇಂದ್ರ ಪೈ, ರಕ್ತದಾನಿಗಳ ಸಂಘದ ಅಧ್ಯಕ್ಷ ದಿವಾಕರ ಖಾರ್ವಿ, ಅಬ್ದುಲ್‌ ರಹಿಮಾನ್‌ ನಾಗೂರು, ಗಂಗೊಳ್ಳಿ ಗ್ರಾ. ಪಂ. ಸದಸ್ಯ ಮುಜಾಹೀದ್‌ ಅಲಿ ನಾಕುದಾ ಮೊದಲಾದವರು ಉಪಸ್ಥಿತರಿದ್ದರು.

ಇದೇ ಸಂದರ್ಭ ಸರ್ವಧರ್ಮ ಸೌಹಾರ್ದ ವೇದಿಕೆ ಪರವಾಗಿ ದಿವಾಕರ ಖಾರ್ವಿ ಅವರು ಅಣ್ಣಾಮಲೈ ಅವರನ್ನು ಗೌರವಿಸಿದರು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com