ಪ್ರತಿ ವ್ಯಕ್ತಿಯಲ್ಲೂ ವಿಶೇಷ ಪ್ರತಿಭೆ ಅಡಗಿದೆ: ನರೇಂದ್ರ ಗಂಗೊಳ್ಳಿ

ಮಕ್ಕಳ ಲಾವಣ್ಯ-2015. ರಜೆಯಲ್ಲಿ ರಂಗಶಿಬಿರ ಸಮಾರೋಪ

ಬೈಂದೂರು: ವ್ಯಕ್ತಿಯ ಶ್ರೇಷ್ಠತೆಯನ್ನು ನಿರ್ದಿಷ್ಟವಾದ ಮಾನದಂಡದಿಂದ ಅಳೆಯುವ ಮೂರ್ಖತನಕ್ಕೆ ಮುಂದಾಗಬಾರದು. ಪ್ರತಿ ವ್ಯಕ್ತಿಯಲ್ಲೂ ಅವರದ್ದೇ ಆದ ಪ್ರತಿಭೆ ಅಡಗಿರುತ್ತದೆ ಎಂಬುದನ್ನು ಅರಿಯಬೇಕು ಎಂದು ಬರಹಗಾರ ಹಾಗೂ ಉಪನ್ಯಾಸಕ ನರೇಂದ್ರ ಎಸ್. ಗಂಗೊಳ್ಳಿ ಹೇಳಿದರು. 
    ಅವರು ಇಲ್ಲಿನ ಶಾರದಾ ವೇದಿಕೆಯಲ್ಲಿ ಜರುಗಿದ ಮಕ್ಕಳ ಲಾವಣ್ಯ-2015ರ 'ರಜೆಯಲ್ಲಿ ರಂಗಶಿಬಿರ'ದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡುತ್ತಿದ್ದರು.
   ಯಾವುದೇ ಬಗೆಯ ರಂಗಕ್ರಿಯೆಯಲ್ಲಿ ತೊಡಗಿಸಿಕೊಳ್ಳುವ ವ್ಯಕ್ತಿಗೆ ಬದುಕಿನಲ್ಲಿ ಆತ್ಮವಿಶ್ವಾಸ ಮೂಡುತ್ತದೆ. ಮಕ್ಕಳು ರಂಗಭೂಮಿಯಲ್ಲಿ ಒಮ್ಮೆ ತೊಡಗಿಸಿಕೊಂಡರೆ ಮುಂದೆ ಉತ್ತಮ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಲು ಎಂದು ಹೇಳಿದ ಅವರು ಮನಬಂದಂತೆ ನಾಟಕಗಳನ್ನು ವಿಮರ್ಶಿಸುವ ವಿಮರ್ಶಕರು, ಮೊದಲು ಅದರ ಆಶಯ, ಹಿನ್ನೆಲೆ, ರಚನೆಯ ಕಾಲ ಮುಂತಾದವುಗಳನ್ನು ಕುರಿತು ಅರಿತು ವಿಮರ್ಷಿಸಿದರೆ ಒಳ್ಳೆಯದು ಎಂದು ಸಲಹೆಯಿತ್ತರು.
     ರಂಗಶಿಬಿರದ ನಿರ್ದೇಶಕ ಸತ್ಯನಾ ಕೊಡೇರಿ ಸಮಾರೋಪದ ನುಡಿಗಳನ್ನಾಡುತ್ತಾ ನಾವುಗಳು ಮಕ್ಕಳ ಬಾಲ್ಯವನ್ನು ಕಸಿಯುತ್ತಿದ್ದೆವೇನೋ ಎಂಬ ಆತಂಕ ಕಾಡುತ್ತಿದೆ. ರಂಗಭೂಮಿಯಲ್ಲಿ ತೊಡಗಿಸಿಕೊಳ್ಳುವುದರ ಮೂಲಕ ಮಕ್ಕಳ ಪ್ರೀತಿ, ಸ್ನೇಹ, ಮಮತೆ ಎಲ್ಲವನ್ನೂ ಕಲಿಯುತ್ತಾರೆ. ರಂಗಭೂಮಿಯು ಜನರಿಗೆ ಹತ್ತಿರದಿಂದ ಸ್ಪಂದಿಸುವ ಮಾಧ್ಯಮವಾಗಿದೆ. ಇಲ್ಲಿ ಮಕ್ಕಳ ಕ್ರೀಯಾಶೀಲತೆಯನ್ನು ಬಳಸಿಕೊಂಡು ಒಳ್ಳೆಯ ನಾಟಕಗಳನ್ನು ಪ್ರದರ್ಶಿಸಿ ಸಮಾಜಕ್ಕೆ ಉತ್ತಮ ಸಂದೇಶವನ್ನು ನೀಡಬಹುದಾಗಿದೆ ಎಂದರು.
     ಇನ್ನೊರ್ವ ಅತಿಥಿಯಾಗಿದ್ದ ಉಡುಪಿ ಜಿ.ಪಂ. ಮಾಜಿ ಅಧ್ಯಕ್ಷ ಎಸ್. ರಾಜು ಪೂಜಾರಿ ಮಾತನಾಡಿ ಇಂದು ಪೋಷಕರು ಮಕ್ಕಳನ್ನು ಸಮಾಜಮುಖಿಯಾಗಿ ಬೆಳೆಸುವ ಕೆಲಸವನ್ನು ಮಾಡುತ್ತಿಲ್ಲ. ಮಕ್ಕಳನ್ನು ಉತ್ತಮ ನಾಗರಿಕರನ್ನಾಗಿ ತಯಾರಿಸುವ ಜವಾಬ್ದಾರಿ ಎಲ್ಲರ ಮೇಲೂ ಇದೆ ಎಂದರು.
    ಲಾವಣ್ಯದ ಕಾರ್ಯದರ್ಶಿ ನರಸಿಂಹ ನಾಯಕ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಲಾವಣ್ಯದ ಸ್ಥಾಪಕಾಧ್ಯಕ್ಷ ಗಣೇಶ್ ಕಾರಂತ್, ಹಿರಿಯ ಕಲಾವಿದ ರಾಮ ಟೈಲರ್ ಉಪಸ್ಥಿತರಿದ್ದರು.
    ಸಂಸ್ಥೆಯ ಅಧ್ಯಕ್ಷ ಯೋಗಿಶ್ ಬಂಕೇಶ್ವರ ಸ್ವಾಗತಿಸಿ, ಪ್ರಾಸ್ತಾವಿಕ ನುಡಿಗಳನ್ನಾಡಿದರು. ಗಣಪತಿ ಎಸ್. ಧನ್ಯವಾದಗೈದರು. ಖಜಾಂಚಿ ನಾಗರಾಜ ಪಿ. ಯಡ್ತರೆ ಕಾರ್ಯಕ್ರಮ ನಿರೂಪಿಸಿದರು.
 ಸಭಾ ಕಾರ್ಯಕ್ರಮದ ಬಳಿಕ ಎಚ್. ಎಸ್. ವೆಂಕಟೇಶ ಮೂರ್ತಿ ರಚನೆಯ, ಸತ್ಯನಾ ಕೊಡೇರಿ ನಿರ್ದೇಶನದ 'ಹೂವಿ' ನಾಟಕವನ್ನು ರಂಗಶಿಬಿರದಲ್ಲಿ ಭಾಗವಹಿಸಿದ್ದ ಮಕ್ಕಳು ಅಭಿನಯಿಸಿದರು.

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com