ದಲಿತ ಶೋಷಣೆಯ ವಿರುದ್ಧ ಹೋರಾಟ ಅನಿವಾರ್ಯ: ಶ್ಯಾಮರಾಜ್ ಬಿರ್ತಿ

ಮರವಂತೆ: ದಲಿತರ ಶೋಷಣೆ ಇನ್ನೂ ನಿಂತಿಲ್ಲ. ಅಸ್ಪ್ರಶ್ಯತೆ, ತಾರತಮ್ಯ, ಸೌಲಭ್ಯಗಳ ವಿಚಾರದಲ್ಲಿ ವಂಚನೆ ಮುಂದುವರಿದಿದೆ. ಅವರ ಜಮೀನಿನ ಮೇಲೆ ಅತಿಕ್ರಮಣ ನಡೆಯುತ್ತಿದೆ. ಅವುಗಳ ವಿರುದ್ಧ ದಲಿತರು ಸಂಘಟಿತರಾಗಿ ಹೋರಾಡಬೇಕಾದ ಅನಿವಾರ್ಯತೆರ ಇದೆ ಎಂದು ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ಶ್ಯಾಮರಾಜ್ ಬಿರ್ತಿ ಹೇಳಿದರು. 

   ಮರವಂತೆಯ ಸಾಧನಾ ಸಮುದಾಯ ಭವನದಲ್ಲಿ ರವಿವಾರ ಅವರು ದಸಂಸ ಮರವಂತೆ ಗ್ರಾಮಶಾಖೆಯನ್ನು ಉದ್ಘಾಟಿಸಿ ಮಾತನಾಡಿದರು. ತಾಲೂಕು ಸಂಚಾಲಕ ಕೆ. ಸಿ. ರಾಜು ಬೆಟ್ಟಿನಮನೆ ಅಧ್ಯಕ್ಷತೆ ವಹಿಸಿದ್ದರು 
   ಪ್ರಧಾನ ಭಾಷಣ ಮಾಡಿದ ವಕೀಲ ಹಾಗೂ ಜಿಲ್ಲಾ ಸಂಘಟನಾ ಸಂಚಾಲಕ ಟಿ. ಮಂಜುನಾಥ ಗಿಳಿಯಾರು ಡಾ. ಬಿ. ಆರ್. ಅಂಬೇಡ್ಕರ್ ವರ್ಣಾಶ್ರಮ ಪದ್ಧತಿ, ಜಾತಿ ವ್ಯವಸ್ಥೆ, ಅಸಮಾನತೆ ವಿರುದ್ಧ ಸೈದ್ಧಾಂತಿಕ ನಿಲುವು ತಳೆದು ಅವುಗಳ ವಿರುದ್ಧ ಧ್ವನಿಯೆತ್ತಿದರು. ಕಾನೂನಿನ ಮೂಲಕ ಅವುಗಳನ್ನು ನಿಯಂತ್ರಿಸಿದರು. ಮೀಸಲಾತಿಯನ್ನು ಸಂವಿಧಾನಬದ್ಧಗೊಳಿಸಿದರು. ಅವರ ವಿಚಾರದ ಬೆಳಕಿನಲ್ಲಿ ದಲಿತರು ಮುಂದಕ್ಕೆ ಸಾಗಬೇಕು ಎಂದರು. ಶಾಖೆಯ ನೂತನ ಪದಾಧಿಕಾರಿಗಳಿಗೆ ಪ್ರಮಾಣ ವಚನ ಬೋಧಿಸಿದ ಸಾಮಾಜಿಕ ಹೋರಾಟಗಾರ, ದಲಿತ ಚಿಂತಕ ಜಯನ್ ಮಲ್ಪೆ ದಲಿತರು ರಾಜಕೀಯ ಶಕ್ತಿಯಾಗಿ ಮೂಡಿಬರಬೇಕೆಂದರು. ಮುಖ್ಯ ಅತಿಥಿಗಳಾಗಿದ್ದ ಡಿವೈಎಸ್‌ಪಿ ಎಂ. ಮಂಜುನಾಥ ಶೆಟ್ಟಿ, ಸಮಿತಿಯ ಜಿಲ್ಲಾ ಸಂಘಟನಾ ಸಂಚಾಲಕ ವಾಸುದೇವ ಮದೂರು, ನಿವೃತ್ತ ಉಪನ್ಯಾಸಕ ಎಸ್. ಜನಾರ್ದನ ಶುಭ ಹಾರೈಸಿದರು. ಗ್ರಾಮ ಪಂಚಾಯಿತಿ ಅಧ್ಯಕ್ಷೆ ಕೆ. ಎ. ಸುಗುಣಾ ಅಂಬೇಡ್ಕರ್ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿದರು. 
    ಹೆಮ್ಮಾಡಿ ಶಾಲೆಯ ಮುಖ್ಯೋಪಾಧ್ಯಾಯ ಶಂಕರ್ ಸ್ವಾಗತಿಸಿದರು. ಮರವಂತೆ ಶಾಲೆಯ ಮುಖ್ಯೋಪಾಧ್ಯಾಯ ಸತ್ಯನಾ ಕೊಡೇರಿ ಪ್ರಸ್ತಾವನೆಗೈದರು. ಬಡಾಕೆರೆ ಶಾಲಾ ಮುಖ್ಯೋಪಾಧ್ಯಾಯ ಕೆ. ಮಹಾಬಲ ನಿರೂಪಿಸಿ, ವಂದಿಸಿದರು. ಗ್ರಾಮಶಾಖೆಯ ಸಂಚಾಲಕ ಅಣ್ಣಪ್ಪ ಮರವಂತೆ, ಸಂಘಟನಾ ಸಂಚಾಲಕರಾದ ರಣದೀಪ, ಸುನಿಲ್, ನೀಲಕಂಠ, ರಮೇಶ ಎಂ. ಎನ್, ಸುರೇಂದ್ರ, ಕೋಶಾಧಿಕಾರಿ ಅಣ್ಣಪ್ಪ ಗಾಂಧಿನಗರ ವೇದಿಕೆಯಲ್ಲಿದ್ದರು.

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com