'ಪಂಚದೈವ ಪ್ರತಾಪ' ಶತ ದಿನೋತ್ಸವ, ಸನ್ಮಾನ

ತೆಕ್ಕಟ್ಟೆ: ಪ್ರಸ್ತುತ ಯಾರಲ್ಲೊ ಪದ್ಯ ಬರೆಸಿ ತಾವು ಪ್ರಸಂಗಕರ್ತರಾಗುವ ಮಂದಿ ಸಾಕಷ್ಟು ಸಂಖ್ಯೆಯಲ್ಲಿ ಇದ್ದಾರೆ. ಇಂಥಹವರ ಮಧ್ಯೆ ಸ್ವತಂತ್ರ ಛಂದಬದ್ಧವಾದ ಕೃತಿ ನೀಡುತ್ತ,  ಯಕ್ಷಗಾನ ಸಾರಸ್ವತ ಲೋಕವನ್ನು ಶ್ರೀಮಂತಗೊಳಿಸುವ ಮೊಗೆಬೆಟ್ಟು ಪ್ರಸಾದ್ ಕುಮಾರ ಯುವ ಪ್ರಸಂಗಕರ್ತರ ಸಾಲಿನಲ್ಲಿ ಮುಂಚೂಣಿಯಲ್ಲಿದ್ದಾರೆ ಎಂದು ಯಕ್ಷಗಾನ ವಿಮರ್ಶಕ ಪ್ರೊ|ಎಸ್.ವಿ.ಉದಯಕುಮಾರ್ ಶೆಟ್ಟಿ ಹೇಳಿದರು.

ತೆಕ್ಕಟ್ಟೆಯ ಕಂಚಿಗಾರ್‌ಬೆಟ್ಟು ಶ್ರೀ ಜೈನ ಬೊಬ್ಬರ್ಯ ದೇವಸ್ಥಾನದ ವಠಾರದಲ್ಲಿ  ಗೋಳಿಗರಡಿ  ಶ್ರೀ ಪಂಜುರ್ಲಿ ಕೃಪಾಪೋಷಿತ ಯಕ್ಷಗಾನ ಮಂಡಳಿಯ ಯಕ್ಷಗಾನ ಬಯಲಾಟ ಸಂದರ್ಭದಲ್ಲಿ ಪ್ರಸಾದ್ ಕುಮಾರ್ ಮೊಗೆಬೆಟ್ಟು ವಿರಚಿತ ಪಂಚದೈವ ಪ್ರತಾಪ ಯಕ್ಷಗಾನ ಪ್ರಸಂಗ ಶತದಿನೋತ್ಸವ ಕಾರ್ಯಕ್ರಮ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಯಶಸ್ವಿ ಪ್ರಸಂಗ ನೀಡಿದ ಪ್ರಸಾದ್ ಕುಮಾರ್ ಮೊಗೆಬೆಟ್ಟು ಅವರನ್ನು ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ಪ್ರಸಂಗಕರ್ತ ಪ್ರಸಾದ್ ಕುಮಾರ್, ಎಂಟು ಗಂಟೆಯ ಕಥೆ, ೨೫ ಪಾತ್ರಗಳು, ೫೦ ದೃಶ್ಯಗಳು, ೨೫೦ ಪದ್ಯಗಳ ಒಂದು ಯಕ್ಷಗಾನ ಪ್ರಸಂಗ ರಚನೆಯ ಹಿಂದಿರುವ ಕವಿಯ ಶ್ರಮ ಸಾರ್ಥಕವಾಗುವುದು ಪ್ರಸಂಗ ಯಶಸ್ವಿ ಪ್ರದರ್ಶನಗೊಂಡಾಗ. ಕವಿ, ಹುಚ್ಚ, ಮಗು ಒಂದೇ ವರ್ಗಕ್ಕೆ ಸೇರಿದವರು. ಕವಿಯದ್ದು ಕಲ್ಪನಾಲೋಕ, ಹುಚ್ಚನದ್ದು ಭ್ರಮಲೋಕ, ಮಗುವಿನದ್ದು ಭಾವನಾಲೋಕ. ಈ ಮೂರು ಒಬ್ಬನಾಗುವವನೇ ಪ್ರಸಂಗಕರ್ತ. ಪ್ರಸಂಗದ ಯಶಸ್ಸಿಗೆ ಕಲಾವಿದರು ಹಾಗೂ ಪ್ರಜ್ಞಾವಂತ ಪ್ರೇಕ್ಷಕರು ಕಾರಣವಾಗುತ್ತಾರೆ ಎಂದರು.

ತೆಕ್ಕಟ್ಟೆ ಗ್ರಾ.ಪಂ.ಮಾಜಿ ಅಧ್ಯಕ್ಷ ಮಲ್ಯಾಡಿ ಶಿವರಾಮ ಶೆಟ್ಟಿ, ಪತ್ರಕರ್ತ ಜಾನ್ ಡಿಸೋಜ, ಉದ್ಯಮಿ ರಮೇಶ ನಾಯಕ್ ತೆಕ್ಕಟ್ಟೆ, ಗೋಳಿಗರಡಿ ಮೇಳದ ಅಧ್ಯಕ್ಷ ವಿಠಲ ಪೂಜಾರಿ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯಕ್ಷಗಾನ ಕಲಾವಿದ ಐರೋಡಿ ಗೋವಿಂದಪ್ಪ ಉಪಸ್ಥಿತರಿದ್ದರು. 

ಶತದಿನೋತ್ಸವದ ಸವಿ ನೆನಪಿಗೆ ಕಲಾವಿದರಿಗೆ ಸ್ಮರಣಿಕೆ ನೀಡಲಾಯಿತು. ಶಂಕರ ಕುಲಾಲ್, ಗಣಪಯ್ಯ ಆಚಾರ್, ಬಾಗವತ ಉದಯಕುಮಾರ್ ಹೊಸಾಳ ಅತಿಥಿಗಳ ಗೌರವಿಸಿದರು. ಗಣೇಶ ಪಾಂಡೇಶ್ವರ ಕಾರ್ಯಕ್ರಮ ನಿರ್ವಹಿಸಿದರು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com