ಉಡುಪಿ ಸಾಹಿತ್ಯ ಪರಿಷತ್‌ ಸಂಸ್ಥಾಪನಾ ದಿನ ಆಚರಣೆ

​ಸಾಹಿತ್ಯ ,ಕಲೆಗೆ ಹೊರತಾದ ಜೀವನವಿಲ್ಲ
ಕುಂದಾಪುರ:  ಮನುಷ್ಯನ ವ್ಯಕ್ತಿತ್ವವನ್ನು ರೂಪಿಸುವ ಶಕ್ತಿ ಸಾಹಿತ್ಯಕ್ಕಿದೆ. ಕಲೆ  ಮತ್ತು ಸಾಹಿತ್ಯ ಎಲ್ಲೆಡೆಯಲ್ಲಿಯೂ ಮಿಳಿತವಾಗಿರುತ್ತವೆ. ಅದನ್ನು ಗುರುತಿಸುವ ಕಣ್ಣು ನಮಗಿರಬೇಕು.ಎಲ್ಲ ಶಬ್ದ ಸಂಯೋಜನೆಯಲ್ಲಿಯೂ ಸಾಹಿತ್ಯ ಇದೆ. ಇವುಗಳಿಂದ ಹೊರತಾದ ಜೀವನವಿಲ್ಲ ಎಂದು ಸಾಹಿತಿ, ನ್ಯಾಯವಾದಿ ಆತ್ರಾಡಿ ಪೃಥ್ವೀರಾಜ್‌ ಹೆಗ್ಡೆ ಹೇಳಿದರು.

ಕುಂದಾಪುರ ತಾಲೂಕು ಕನ್ನಡ ಸಾಹಿತ್ಯ ಪರಿಷತ್‌ ಸಹಕಾರದಲ್ಲಿ ಉಡುಪಿ ಜಿಲ್ಲಾ ಘಟಕದ ವತಿಯಿಂದ ಉಪ್ಪಿನಕುದ್ರುವಿನ ಗೊಂಬೆಯಾಟ ಅಕಾಡೆಮಿ ಕಟ್ಟಡದ ಕೊಗ್ಗ ದೇವಣ್ಣ ಕಾಮತ್‌ ವೇದಿಕೆಯಲ್ಲಿ ನಡೆದ ಸಾಹಿತ್ಯ ಪರಿಷತ್‌ ಸಂಸ್ಥಾಪನಾ ದಿನಾಚರಣೆ ಸಮಾರಂಭದ‌ಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ತಲ್ಲೂರು ಗ್ರಾ.ಪಂ.ನ ನಿಕಟಪೂರ್ವ ಅಧ್ಯಕ್ಷ ರಘು ಪೂಜಾರಿ ದೀಪ ಬೆಳಗಿ ಸಮಾರಂಭವನ್ನು ಉದ್ಘಾಟಿಸಿ ಶುಭ ಹಾರೈಸಿದರು. ಉಪ್ಪಿನಕುದ್ರು ಗೊಂಬೆಯಾಟ ಅಕಾಡೆಮಿ ಅಧ್ಯಕ್ಷ ಭಾಸ್ಕರ ಕೊಗ್ಗ ಕಾಮತ್‌, ಉಡುಪಿ ತಾಲೂಕು ಕ.ಸಾ.ಪ. ಅಧ್ಯಕ್ಷ  ಪ್ರೊ| ಉಪೇಂದ್ರ ಸೋಮಯಾಜಿ ಮುಖ್ಯ ಅತಿಥಿಯಾಗಿ ಆಗಮಿಸಿ ಶುಭ ಹಾರೈಸಿದರು.
ಜಿಲ್ಲಾ ಕ.ಸಾ.ಪ. ಗೌರವ ಕೋಶಾಧ್ಯಕ್ಷ ಸುಬ್ರಹ್ಮಣ್ಯ ಬಾಸ್ರಿ ಉಪಸ್ಥಿತರಿದ್ದರು.

ಹಿರಿಯ ಗೊಂಬೆಯಾಟ ಕಲಾವಿದ ಯು. ವಾಮನ ಪೈ ಅವರನ್ನು ಕ.ಸಾ.ಪ. ವತಿಯಿಂದ ಸಮ್ಮಾನಿಸಿ ಗೌರವಿಸಲಾಯಿತು. ಕೃತಜ್ಞತೆ ವ್ಯಕ್ತಪಡಿಸಿದ ವಾಮನ ಪೈ, ತಮ್ಮ ಕಲಾಜೀವನದ ಅನುಭವಗಳನ್ನು ಸ್ಮರಿಸಿಕೊಂಡರು.

ಕುಂದಾಪುರ ತಾ| ಕ.ಸಾ.ಪ. ಅಧ್ಯಕ್ಷ ಕುಂದಾಪುರ ನಾರಾಯಣ ಖಾರ್ವಿ ಆಶಯ ಭಾಷಣ ಮಾಡಿದರು. ಉಡುಪಿ ಜಿಲ್ಲಾ ಕ.ಸಾ.ಪ. ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಅಧ್ಯಕ್ಷತೆ ವಹಿಸಿದ್ದರು.

ಕ.ಸಾ.ಪ. ಕಾರ್ಯಕ್ರಮ ಸಂಯೋಜಕ ಯು. ವೆಂಕಟರಮಣ ಹೊಳ್ಳ ಸ್ವಾಗತಿಸಿದರು. ಸಂಸ್ಥಾಪನ ದಿನಾ ಚರಣೆಯ ಅಂಗವಾಗಿ ಏರ್ಪಡಿಸ ಲಾದ ಜಾನಪದ ಗೀತ ಗಾಯನ ಕಾರ್ಯಕ್ರಮದಲ್ಲಿ ಗೌರಿ ಕೆಲ್ಸಿಬೆಟ್ಟು, ಚಂದು ಕೆಲ್ಸಿಬೆಟ್ಟು, ಲಲಿತಾ ಶೇರುಗಾರ್ತಿ, ಸಂಜೀವಿ ಶೇರುಗಾರ್ತಿ ಮತ್ತು ಗೌರಿ ಶೇರುಗಾರ್ತಿ ಜನಪದ ಹಾಡುಗಳನ್ನು ಹಾಡಿ ರಂಜಿಸಿದರು.

ಯುವ ಕಥಾಗೋಷ್ಠಿಯಲ್ಲಿ ರಂಗ ಅಧ್ಯಾಪಕ ಮಣಿಕಂಠ, ತಾರಾನಾಥ ಮೇಸ್ತ, ಪೂರ್ಣಿಮಾ ಎನ್‌. ಭಟ್‌ ಮತ್ತು ಶಿಕ್ಷಕಿ ವಾಣಿಶ್ರೀ ಐತಾಳ ಸ್ವರಚಿತ ಕಥೆಗಳನ್ನು ಓದಿದರು. ಕರ್ನಾಟಕ ಸಾಹಿತ್ಯ ಪರಿಷತ್‌ ಕಾರ್ಯದರ್ಶಿ ಕೆ.ಜಿ. ವೈದ್ಯ ಕಾರ್ಯಕ್ರಮ ನಿರೂಪಿಸಿ, ಸಂಯೋಜಕ ಯು. ವೆಂಕಟರಮಣ ಹೊಳ್ಳ ವಂದಿಸಿದರು.

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com