ದೇವಾಲಯ ಬದುಕಿನ ದಾರಿದೀಪ: ವಿಶ್ವೇಶತೀರ್ಥ ಸ್ವಾಮೀಜಿ

ಮರವಂತೆ: ಸಮುದ್ರದ ಮಧ್ಯದಲ್ಲಿ ದಿಕ್ಕುತೋಚದ ನಾವಿಕರು ದೀಪಸ್ಥಂಭಗಳನ್ನು ಅನುಸರಿಸಿ ದಡ ಸೇರುತ್ತಾರೆ. ಅದೇರೀತಿ ದೇವಾಲಯಗಳು ಮನುಷ್ಯರಿಗೆ ಸಂಸಾರ ಸಾಗರವನ್ನು ದಾಟಲು  ದಾರಿದೀಪಗಳಂತೆ ಬೆಳಕು ತೋರುತ್ತವೆ ಎಂದು ಉಡುಪಿಯ ಪೇಜಾವರ ಮಠಾಧೀಶ ವಿಶ್ವೇಶತೀರ್ಥ ಸ್ವಾಮೀಜಿ ಹೇಳಿದರು. 

   ಮರವಂತೆಯ ಮಹಾರಾಜಸ್ವಾಮಿ ವರಾಹ ದೇವಸ್ಥಾನದಲ್ಲಿ ನಡೆಯುತ್ತಿರುವ ಅಷ್ಟಬಂಧ ಪುನ:ಪ್ರತಿಷ್ಠೆ ಬ್ರಹ್ಮಕುಂಭಾಭಿಷೇಕ ಮಹೋತ್ಸವದ ಅಂಗವಾಗಿ ಸೋಮವಾರ ನಡೆದ ಧಾರ‍್ಮಿಕ ಸಭೆಯಲ್ಲಿ ಅವರು ಆಶೀರ್ವಚನ ನೀಡಿದರು. 
 ಮರವಂತೆಯ ವರಾಹ ದೇವಾಲಯ ತುಂಬ ವಿಶಿಷ್ಟವಾದುದು. ಹಿರಣ್ಯಾಕ್ಷನೆಂಬ ರಾಕ್ಷಸ ಭೂಮಿಯನ್ನು ಕದ್ದೊಯ್ದು ಪಾತಾಳದಲ್ಲಿರಿಸಿದಾಗ ಅದನ್ನು ಮರಳಿತಂದ ಅವತಾರ ವರಾಹ. ಹಿರಣ್ಯಾಕ್ಷ ಎಂದರೆ ಬಂಗಾರದ ಕಣ್ಣುಳ್ಳವನು ಎಂದರ್ಥ. ಆದರೆ ಆತನದು ರಕ್ಕಸ ಹೃದಯ. ವರಾಹ ಪ್ರಾಣಿ ರೂಪಿ. ಆದರೆ ಅದರೊಳಗಿರುವುದು ದೇವರ ಹೃದಯ. ಮನುಷ್ಯರೆಲ್ಲರೂ ಪರಮಾತ್ಮ ಸ್ವರೂಪಿಗಳು ಎಂದು ಭಾವಿಸಲಾಗುತ್ತದೆ. ಅದಕ್ಕೆ ಸರಿಯಾಗಿ ಅವರೆಲ್ಲರೂ ದೇವತಾ ಹೃದಯ ಹೊಂದಿರಬೇಕು ಎಂಬ ಸಂದೇಶವನ್ನು ವರಾಹ ನೀಡುತ್ತಾನೆ ಎಂದು ಅವರು ನುಡಿದರು. 
   ಮುಖ್ಯ ಅತಿಥಿ ನೆಲೆಯಲ್ಲಿ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ವಿವೇಕಾನಂದರು ಸನಾತನ ಧರ್ಮೀಯರ ನಿಷ್ಕ್ರಿಯೆಯ ಬಗ್ಗೆ ಎಂದೂ ಎಚ್ಚರಿಸಿದ್ದರು. ಆದರೆ ಇನ್ನೂ ಕೂಡ ಧರ್ಮೀಯರು ಅದೇ ಸ್ಥಿತಿಯಲ್ಲಿರುವುದು ವಿಷಾದದ ಸಂಗತಿ. ಅವರು ಎಚ್ಚರಗೊಳ್ಳದಿದ್ದರೆ ಸನಾತನ ಧರ್ಮದ ವಿರುದ್ಧ ನಡೆಯುತ್ತಿರುವ ದಾಳಿಯನ್ನು ತಡೆಯುವುದು ಅಸಾಧ್ಯ ಎಂದು ಹೇಳಿದರು.   
   ದೇವಾಲಯದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೆ.ರಾಮಚಂದ್ರ ಹೆಬ್ಬಾರ್ ಅಧ್ಯಕ್ಷತೆ ವಹಿಸಿದ್ದರು. ಮಹೋತ್ಸವ ಸಮಿತಿ ಅಧ್ಯಕ್ಷ ಎಂ. ರಾಜಶೇಖರ ಹೆಬ್ಬಾರ್ ಸ್ವಾಗತಿಸಿದರು. ವಿಶ್ವನಾಥ ಪಡುಕೋಣೆ ವಂದಿಸಿದು. ರಾಘವೇಂದ್ರ ಕಾಂಚನ್ ನಿರೂಪಿಸಿದರು. ಜಿಲ್ಲಾ ಪಂಚಾಯಿತಿ ಸದಸ್ಯ ಕೆ.ಬಾಬು ಶೆಟ್ಟಿ, ತಾಲ್ಲೂಕು ಪಂಚಾಯಿತಿ ಸದಸ್ಯ ಮಹೇಂದ್ರ ಪೂಜಾರಿ, ಮಿನುಗಾರ ಮುಖಂಡ ನವೀನಚಂದ್ರ ಉಪ್ಪುಂದ ಇದ್ದರು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com