ಸನಾತನ ಧರ್ಮ ದೇವಪ್ರಣೀತ: ವಿಶ್ವಸಂತೋಷ ಭಾರತೀ ಸ್ವಾಮೀಜಿ

ಮರವಂತೆ: ಭಗವದ್ಗೀತೆಯಲ್ಲಿ ಸನಾತನ ಧರ್ಮದ ಸಾರಸರ್ವಸ್ವ ಅಡಗಿದೆ. ಭಗವದ್ಗೀತೆ ಎಂಬ ಹೆಸರೇ ಸೂಚಿಸುವಂತೆ ಅದು ಭಗವಂತನಿಂದಲೇ ಪ್ರಣೀತವಾದುದು. ಅನ್ಯ ಧರ್ಮಗಳಂತೆ ಅದು ದೇವರ ಪ್ರತಿನಿಧಿಗಳು ಸಂಗ್ರಹಿಸಿ ಬೋಧಿಸಿದ ಧರ್ಮವಲ್ಲ. ಇದನ್ನು ಅರಿಯದವರು ಹಿಂದು ಧರ್ಮದ ವಿರುದ್ಧ ಮಾತನಾಡುತ್ತಿದ್ದಾರೆ. ಧರ್ಮದ್ವೇಷ ಒಳ್ಳೆಯದಲ್ಲ’ ಎಂದು ಬಾರ್ಕೂರು ಮಹಾಸಂಸ್ಥಾನದ ವಿದ್ಯಾ ವಾಚಸ್ಪತಿ ವಿಶ್ವಸಂತೋಷ ಭಾರತೀ ಸ್ವಾಮೀಜಿ ಹೇಳಿದರು.  

   ಮರವಂತೆಯ ಮಹಾರಾಜಸ್ವಾಮಿ ವರಾಹ ದೇವಸ್ಥಾನದಲ್ಲಿ ನಡೆಯುತ್ತಿರುವ ಅಷ್ಟಬಂಧ ಪುನ:ಪ್ರತಿಷ್ಠೆ ಬ್ರಹ್ಮಕುಂಭಾಭಿಷೇಕ ಮಹೋತ್ಸವದ ಅಂಗವಾಗಿ ಗುರುವಾರ ನಡೆದ ಧರ್ಮಸಭೆಯಲ್ಲಿ ಅವರು ಅನುಗ್ರಹ ಭಾಷಣ ಮಾಡಿದರು. 
   ’ಭಗವದ್ಗೀತೆ ವರ್ಣ ಮತ್ತು ಜಾತಿ ಪದ್ಧತಿಯನ್ನು ಸಾರುತ್ತದೆ ಎಂದು ಆಕ್ಷೇಪಿಸುತ್ತಾರೆ. ಅದರಲ್ಲಿ ಹೇಳಿರುವುದು ಮನುಷ್ಯರನ್ನು ಅವರವರ ಗುಣಕರ್ಮಕ್ಕೆ ಅನುಗುಣವಾಗಿ ವಿಭಾಗಿಸಲಾಗಿದೆ ಎಂದು. ಕರ್ಮಾಧರಿತ ವಿಭಾಗ ಇಂದಿನ ಸಮಾಜದಲ್ಲೂ ಇದೆ. ಸನಾತನ ಧರ್ಮದಲ್ಲಿ ದೇವಾಲಯಗಳಿಗೆ, ಆರಾಧನೆಗೆ ವಿಶೇಷ ಮಹತ್ವ ಇದೆ. ಇವೆರಡೂ ಸಮುದಾಯವನ್ನು ಒಂದುಗೂಡಿಸುವ ಅವಕಾಶಗಳು. ಅವುಗಳಿಂದ ನಾವು ದೂರ ಸರಿಯಬಾರದು’ ಎಂದು ಅವರು ನುಡಿದರು.
   ಆಶೀರ್ವಚನಗೈದ ಹೊರನಾಡು ಅನ್ನಪೂರ್ಣೇಶ್ವರಿ ದೇವಸ್ಥಾನದ ಧರ್ಮಕರ್ತ ಜಿ. ಭೀಮೇಶ್ವರ ಜೋಷಿ ’ಮನುಷ್ಯರು ತಾಪಗಳ ನಡುವೆ ತಪಸ್ಸು ನಡೆಸುತ್ತ ಬದುಕಬೇಕು. 
ಮನೆಗಳಲ್ಲಿ ವೈಯಕ್ತಿಕ ಒಳಿತಿಗಾಗಿ ಪ್ರಾರ್ಥನೆ ಮಾಡಿದರೆ, ದೇವಾಲಯಗಳಲ್ಲಿ ಎಲ್ಲ ಸೇರಿ ಸಮುದಾಯದ ಮೇಲ್ಮೆಗಾಗಿ ಪ್ರಾರ್ಥನೆ ಸಲ್ಲಿಸಬೇಕು. ಮನುಷ್ಯ ಮಾನವನಾಗಬೇಕಾದರೆ ಸಂಸ್ಕಾರ ಪಡೆಯಬೇಕು. ದೇವರ ಪ್ರಾರ್ಥನೆ, ಆರಾಧನೆಯಿಂದ ಸಂಸ್ಕಾರ ತಾನಾಗಿ ಪ್ರಾಪ್ತವಾಗುತ್ತದೆ’ ಎಂದರು.
   ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೃಷ್ಣಪ್ರಸಾದ ಅಡ್ಯಂತಾಯ ಅಧ್ಯಕ್ಷತೆ ವಹಿಸಿದ್ದರು. ಬಸ್ರೂರು ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಧರ್ಮದರ್ಶಿ ಬಿ. ಅಪ್ಪಣ್ಣ ಹೆಗ್ಡೆ, ತಾಲೂಕು ಪಂಚಾಯತ್ ಅಧ್ಯಕ್ಷ ಭಾಸ್ಕರ ಬಿಲ್ಲವ, ಸದಸ್ಯ ಎಸ್. ರಾಜು ಪೂಜಾರಿ, ಉದ್ಯಮಿಗಳಾದ ಮರವಂತೆ ನಾಗರಾಜ ಹೆಬ್ಬಾರ್, ಸಂಸಾಡಿ ಅಶೋಕ ಶೆಟ್ಟಿ, ನಿವೃತ್ತ ಉಪನ್ಯಾಸಕ ಟಿ. ಕೆ. ಖಾರ್ವಿ, ಉಪ್ಪುಂದ ರಾಣಿಬಲೆ ಒಕ್ಕೂಟದ ಅಧ್ಯಕ್ಷ ಚಂದ್ರ ಖಾರ್ವಿ, ಮರವಂತೆ ಮೀನುಗಾರರ ಸೇವಾ ಸಮಿತಿ ಅಧ್ಯಕ್ಷ ವೆಂಕಟರಮಣ ಖಾರ್ವಿ, ಕೊಲ್ಲೂರು ದೇವಳ ವ್ಯವಸ್ಥಾಪನಾ ಸಮಿತಿ ಸದಸ್ಯ ಯು. ಅಣ್ಣಪ್ಪ ಖಾರ್ವಿ, ವರಾಹ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಸದಸ್ಯ ಪ್ರಭಾಕರ ಮೊವಾಡಿ, ಮಾಜಿ ಸದಸ್ಯ ಎಂ. ಎಂ, ಕೃಷ್ಣಮೂರ್ತಿ ಹೆಬ್ಬಾರ್, ಧಾರ್ಮಿಕ ವಿಧಿಗಳ ಅಧ್ವರ್ಯು ಮುಡೇಶ್ವರ ಜಯರಾಮ ಅಡಿಗ ವೇದಿಕೆಯಲ್ಲಿದ್ದರು.
    ಮಹೋತ್ಸವ ಸಮಿತಿ ಅಧ್ಯಕ್ಷ ಎಂ. ರಾಜಶೇಖರ ಹೆಬ್ಬಾರ್ ಸ್ವಾಗತಿಸಿದರು. ಭಾಸ್ಕರ ಖಾರ್ವಿ ವಂದಿಸಿದರು. ರಾಘವೇಂದ್ರ ಕಾಂಚನ್ ನಿರೂಪಿಸಿದರು. ಧರ‍್ಮಸಭೆಯ ಬಳಿಕ ಖ್ಯಾತ ಕಲಾವಿದರಿಂದ ಸಂಗೀತ ನಾಟ್ಯೋತ್ಸವ ನಡೆಯಿತು.

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com