ಮರವಂತೆಯ ವರಾಹ ದೇವಸ್ಥಾನ : ಅಷ್ಟಬಂಧ ಮಹೋತ್ಸವಕ್ಕೆ ಚಾಲನೆ

ಮರವಂತೆ: ಇಲ್ಲಿನ ಮಾರಸ್ವಾಮಿಯಲ್ಲಿರುವ ಮಹಾರಾಜಸ್ವಾಮಿ ವರಾಹ ದೇವಸ್ಥಾನದಲ್ಲಿ ರವಿವಾರದಿಂದ ಗುರುವಾರದ ತನಕ ನಡೆಯುವ ಅಷ್ಟಬಂಧ ಪುನ:ಪ್ರತಿಷ್ಠೆ ಸಹಸ್ರ ಕಲಶ ಬ್ರಹ್ಮಕುಂಭಾಭಿಷೇಕ ಮಹೋತ್ಸವವನ್ನು ಪೇಜಾವರ ಅಧೋಕ್ಷಜ ಮಠದ ಕಿರಿಯ ಸ್ವಾಮೀಜಿ ವಿಶ್ವಪ್ರಸನ್ನತೀರ್ಥರು ಶನಿವಾರ ಸಂಜೆ ಉದ್ಘಾಟಿಸಿದರು. 
       ಮಹೋತ್ಸವಕ್ಕೆ ಯಶಸ್ಸು ಕೋರಿ ಮಾತನಾಡಿದ ಅವರು ಮನುಷ್ಯ ಬರುವಾಗ ಏನನ್ನೂ ತಂದಿರುವುದಿಲ್ಲ. ಆದುದರಿಂದ ಭೂಮಿಯ ಮೇಲಿನ ಸಂಪತ್ತು ಅವನದಲ್ಲ. ಅದು ದೇವರಿಗೆ ಸೇರಿದ್ದು. ಆದರೆ ದೇವರಿಗೆ ಯಾವ ವಸ್ತುವಿನ ಅಗತ್ಯವೂ ಇಲ್ಲ. ಮನುಷ್ಯ ದೇವರಿಗೆ ಏನನ್ನಾದರೂ ಕೊಡುವುದೆಂದರೆ ಅವನ ವಸ್ತುಗಳನ್ನು ಬಳಸುತ್ತಿರುವುದಕ್ಕಾಗಿ ತೋರಬೇಕಾದ  ಕೃತಜ್ಞತಾ ಭಾವ ಎಂದು ಹೇಳಿದರು. 
    ಭಗವಂತ ಮತ್ತು ಮನುಷ್ಯರ ನಡುವೆ ಬಿಂಬ-ಪ್ರತಿಬಿಂಬದ ಸಂಬಂಧವಿದೆ. ಬಿಂಬವನ್ನು ಅಲಂಕರಿಸಿದರೆ ಅದು ಪ್ರತಿಬಿಂಬದಲ್ಲಿ ವ್ಯಕ್ತವಾಗುತ್ತದೆ. ಅದಕ್ಕಾಗಿ ದೇವರನ್ನು ಅಲಂಕರಿಸಿ ಆ ಸೌಂದರ್ಯವನ್ನು ನಮ್ಮಲ್ಲಿ ಕಾಣಲೆತ್ನಿಸಬೇಕು ಎಂದು ಅವರು ನುಡಿದರು. 
     ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷ ಎಂ. ರಾಜಶೇಖರ ಹೆಬ್ಬಾರ್ ಸ್ವಾಗತಿಸಿದರು. ದೇವಸ್ಥಾನದ ವ್ಯಸ್ಥಾಪನಾ ಸಮಿತಿ ಅಧ್ಯಕ್ಷ ಕೆ. ರಾಮಚಂದ್ರ ಹೆಬ್ಬಾರ್ ದಂಪತಿ ಸ್ವಾಮೀಜಿ ಅವರಿಗೆ ಫಲಪುಷ್ಪ ಸಮರ್ಪಿಸಿದರು. ಕಾರ್ಯದರ್ಶಿ ನರಸಿಂಹ ಖಾರ್ವಿ ವಂದಿಸಿದರು. ವಿಶ್ವನಾಥ ಪಡುಕೋಣೆ ನಿರೂಪಿಸಿದರು. 
    ಪ್ರಮುಖರಾದ ಕೆ. ಶಂಕರ ಹೆಬ್ಬಾರ್, ವೆಂಕಟರಮಣ ಖಾರ್ವಿ, ನವೀನಚಂದ್ರ ಉಪ್ಪುಂದ, ಮಂಜು ಬಿಲ್ಲವ, ಕುಮಾರಖಾರ್ವಿ, ನರಸಿಂಹ ಪೂಜಾರಿ ವೇದಿಕೆಯಲ್ಲಿದ್ದರು. 
    ಸಭೆಗೆ ಮುನ್ನ ಮರವಂತೆ ಸುತ್ತಮುತ್ತಲಿನ ಗ್ರಾಮಗಳಿಂದ ಮೆರವಣಿಗೆಯಲ್ಲಿ ತಂದ ಹೊರೆಕಾಣಿಕೆಯನ್ನು ಅರ್ಪಿಸಲಾಯಿತು. ಸ್ವಾಮೀಜಿ ಉಗ್ರಾಣಕ್ಕೆ ಭೇಟಿನೀಡಿ ಅಲ್ಲಿನ ವಸ್ತುಗಳು ಅಕ್ಷಯವಾಗಲೆಂದು ಹರಸಿದರು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com