ಗ್ರಾ.ಪಂ.ಗಳನ್ನು ಬಿಜೆಪಿ ತೆಕ್ಕೆಗೆ ತನ್ನಿ: ಕರಂದ್ಲಾಜೆ

ಮರವಂತೆ: ಗ್ರಾಮೀಣ ಪ್ರದೇಶದಲ್ಲಿ ಭಾರತೀಯ ಜನತಾ ಪಕ್ಷದ ಸಂಘಟನೆಯನ್ನು ಬಲಗೊಳಿಸುವ ಮತ್ತು ಮುಂದಿನ ಚುನಾವಣೆಗಳಲ್ಲಿ ಪಕ್ಷದ ಗೆಲುವನ್ನು ಖಾತರಿಗೊಳಿಸುವ ಉದ್ದೇಶಕ್ಕೆ ಅಧಿಕ ಸಂಖ್ಯೆಯ ಗ್ರಾಮ ಪಂಚಾಯತ್‌ಗಳನ್ನು ಪಕ್ಷದ ಕಾರ್ಯಕರ್ತರು ವಶಕ್ಕೆ ತೆಗೆದುಕೊಳ್ಳಬೇಕು. ಮುಂದಿನ ದಿನಗಳಲ್ಲಿ ಕೇಂದ್ರ ಸರಕಾರ ಗ್ರಾಮ ಪಂಚಾಯತ್‌ಗಳಿಗೆ ಅನುದಾನವನ್ನು ನೇರ ಬಡುಗಡೆಗೊಳಿಸಲಿದ್ದು, ಗ್ರಾಮೀಣ ಅಭಿವೃದ್ಧಿ ಕಾರ್ಯಕ್ರಮಗಳ ಸಮರ್ಪಕ ಅನುಷ್ಠಾನದ ದೃಷ್ಟಿಯಿಂದಲೂ ಅವುಗಳಲ್ಲಿ ಪಕ್ಷ ಕಾರ್ಯಕರ್ತರು ಇರಬೇಕು ಎಂದು ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಲೋಕಸಭಾ ಸದಸ್ಯೆ ಶೋಭಾ ಕರಂದ್ಲಾಜೆ ಹೇಳಿದರು.


ಮರವಂತೆಗೆ ಭೇಟಿ ನೀಡಿದ ಅವರು ಅಲ್ಲಿನ ಪಕ್ಷ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು. ಗ್ರಾಮೀಣ ಅಭಿವೃದ್ಧಿಯನ್ನು ಕಡೆಗಣಿಸಿದ ರಾಜ್ಯ ಸರಕಾರದ ವಿರುದ್ಧ ಅವರು ಟೀಕಾಪ್ರಹಾರ ನಡೆಸಿದರು. ಗ್ರಾಮ ಪಂಚಾಯತ್‌ಗಳಿಗೆ ಅನುದಾನ ಕಡಿತ ಮಾಡಲಾಗುತ್ತಿದೆ. ಬೇಕಾಬಿಟ್ಟಿ ಆದೇಶ, ಸುತ್ತೋಲೆ ಹೊರಡಿಸುವ ಮೂಲಕ, ಅಭಿವೃದ್ಧಿ ಅಧಿಕಾರಿಗಳನ್ನು ವಿವೇಚನಾ ರಹಿತವಾಗಿ ವರ್ಗಮಾಡುವ ಮೂಲಕ ಗೊಂದಲ ಸೃಷ್ಟಿಸಲಾಗುತ್ತಿದೆ. ಸರಕಾರ ಜನಮರುಳು ಕಾರ್ಯಕ್ರಮಗಳಾದ ಅನ್ನ ಭಾಗ್ಯ, ಕ್ಷೀರಭಾಗ್ಯದಂತಹ ಯೋಜನೆಗಳಿಗೆ ರಾಜ್ಯದ ಖಜಾನೆ ಸೂರೆಯಾಗುತ್ತಿದೆ. ತೆರಿಗೆ ಸಂಗ್ರಹದಲ್ಲೂ ಕುಸಿತ ಉಂಟಾಗಿದೆ. ಈ ಸ್ಥಿತಿಯಲ್ಲಿ ಅಭಿವೃದ್ಧಿ ಯೋಜನೆಗಳಿಗೆ ಹಣ ನೀಡುವುದು ಸಾಧ್ಯವಾಗುತ್ತಿಲ್ಲ ಎಂದು ಅವರು ದೂರಿದರು.

ಬೈಂದೂರು ಕ್ಷೇತ್ರ ಸಮಿತಿ ಅಧ್ಯಕ್ಷ ಬಿ. ಎಂ. ಸುಕುಮಾರ ಶೆಟ್ಟಿ ಸ್ವಾಗತಿಸಿದರು. ಕ್ಷೇತ್ರದ 39 ಗ್ರಾಮ ಪಂಚಾಯತ್‌ಗಳಿಗೆ ನಡೆಯುವ ಚುನಾವಣೆಯಲ್ಲಿ ಕನಿಷ್ಠ ೨೫ ಗ್ರಾಪಂ ಬಿಜೆಪಿ ಪಕ್ಷ ಕಾರ್ಯಕರ್ತರ ವಶವಾಗುವ ವಿಶ್ವಾಸವಿದೆ ಎಂದು ಅವರು ಹೇಳಿದರು.
ಪಕ್ಷದ ಜಿಲ್ಲಾಧ್ಯಕ್ಷ ವಿಕ್ರಮಾರ್ಜುನ ಹೆಗ್ಡೆ ಮಾತನಾಡಿದರು. ಪಕ್ಷದ ಪ್ರಮುಖರಾದ ಗುರುರಾಜ ಗಂಟಿಹೊಳೆ, ಗೀತಾಂಜಲಿ ಸುವರ್ಣ ಉಪಸ್ಥಿತರಿದ್ದರು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com